ಹಂದಿಗಳ ಸಮಸ್ಯೆ ನಿವಾರಣೆಗೆ ತ್ರಿಸೂತ್ರ

ಊರ ಹೊರಗೆ ರವಾನಿಸಿದರೆ ಸುಸೂತ್ರ

ದಾವಣಗೆರೆ, ಡಿ. 15 – ಜನರು ಕಸವನ್ನು ಎಲ್ಲೆಂದರಲ್ಲಿ ಎಸೆಯದಿರುವುದು, ಪಾಲಿಕೆ ಸ್ವಚ್ಛತಾ ಕೆಲಸ ಚುರುಕಾಗಿಸುವುದು ಹಾಗೂ ಹಂದಿ ಮಾಲೀಕರು ಹಂದಿಗಳನ್ನು ಊರ ಹೊರಗೆ ಸಾಗಿಸುವ ಮೂರು ಸೂತ್ರಗಳ ಮೂಲಕ ನಗರದಲ್ಲಿ ಬಿಡಾಡಿ ಹಂದಿಗಳ ಹಾವಳಿ ತಪ್ಪಿಸುವ ತ್ರಿಸೂತ್ರ ಜಾರಿಗೆ ತರಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು  ಕರೆದಿದ್ದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಹಂದಿ ಮಾಲೀಕರ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಬೀಳಗಿ, ಈ ಮೂರು ಸೂತ್ರಗಳನ್ನು ಮುಂದಿಟ್ಟಿದ್ದು ಅದಕ್ಕೆ ಹಂದಿ ಮಾಲೀಕರು ಸಮ್ಮತಿಸಿದ್ದಾರೆ.

ಬಿಡಾಡಿ ಹಂದಿಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದ ಪಾಲಿಕೆ ಆಯುಕ್ತರ ವೇತನ ತಡೆಗೆ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ತಡೆದಿದೆ. ಹೈಕೋರ್ಟ್ ಸಹ ಹಂದಿಗಳನ್ನು ಜನರಿಗೆ ತೊಂದರೆಯಾಗುವ ರೀತಿಯಲ್ಲಿ ಊರು ತುಂಬಾ ಬಿಡಬೇಕು ಎಂದು ಹೇಳಿಲ್ಲ ಎಂದು ಜಿಲ್ಲಾಧಿಕಾರಿ ಸಭೆಗೆ ತಿಳಿಸಿದರು.

ಪ್ರಾಣಿ ಸಾಕುವವರಿಗೆ ಜವಾಬ್ದಾರಿ ಇರುತ್ತದೆ. ಹಂದಿ ಊರಲ್ಲಿ ಎಲ್ಲೇ ಹೋದರು ಹಿಡಿಯಬಾರದು ಎಂದರ್ಥವಲ್ಲ. ಜೀವಕ್ಕೆ ತೊಂದರೆಯಾದರೆ ಇಲ್ಲವೇ ಕಾಯಿಲೆ ಬಂದರೆ ಹಂದಿಗಳನ್ನೇ ಕೇಳಬೇಕೇ? ಯಾರ ಮೇಲೆ ಕೇಸು ಹಾಕಬೇಕು? ಹಂದಿಗಳನ್ನು ಈ ರೀತಿ ಊರ ತುಂಬ ಬಿಡಲು ಸಂವಿಧಾನದಲ್ಲಿ ಅವಕಾಶ ಇದೆಯೇ? ಕಾನೂನಿನಲ್ಲಿ ಅವಕಾಶ ಇದೆಯೇ? ಎಂದು ಬೀಳಗಿ ಪ್ರಶ್ನಿಸಿದರು.

ಹಾಸನ ಹಾಗೂ ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ ಹಂದಿ ಸಾಕಾಣಿಕೆಗೆ ಪ್ರತ್ಯೇಕ ಕೇಂದ್ರಗಳಿವೆ. ಅದೇ ರೀತಿ ದಾವಣಗೆರೆಯ ಹಂದಿಗಳಿಗೂ ಪ್ರತ್ಯೇಕ ದೊಡ್ಡಿಗಳನ್ನು ಸ್ಥಾಪಿಸಲು ಜಿಲ್ಲಾಡಳಿತದ ವತಿಯಿಂದ ಪಾಲಿಕೆಗೆ ಜಾಗ ನೀಡಲಾಗುವುದು. ಅಲ್ಲಿ ದೊಡ್ಡಿಗಳನ್ನು ನಿರ್ಮಿಸುವ ಜೊತೆಗೆ ನಗರದಲ್ಲಿ ಲಭ್ಯವಾಗುವ ಮುಸುರೆ ರವಾನಿಸಲಾಗುವುದು ಎಂದು ಜಿಲ್ಲಾಧಿಕಾರಿ  ಹೇಳಿದರು.

ಜಿಲ್ಲಾಧಿಕಾರಿಗಳ ಪ್ರಸ್ತಾವನೆಗೆ ಸಮ್ಮತಿಸಿದ ಹಂದಿ ಮಾಲೀಕರು ಸಮ್ಮತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಳುವ ಮಹಾಸಭಾ ರಾಜ್ಯಾಧ್ಯಕ್ಷ ಆನಂದಪ್ಪ, ಹಂದಿ ಮಾಲೀಕರಿಗೆ ಗುರುತಿನ ಚೀಟಿ ಕೊಡಿ, ನಗರದ ಹತ್ತು ಕಿ.ಮೀ. ಒಳಗೆ ಉತ್ತರ ಹಾಗೂ ದಕ್ಷಿಣ ಭಾಗಕ್ಕೆ ಪ್ರತ್ಯೇಕ ಹಂದಿ ದೊಡ್ಡಿಗೆ ಜಾಗ, ವಿದ್ಯುತ್ ಸೌಲಭ್ಯ, ಪುನರ್ವಸತಿ ಕಲ್ಪಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಜನರು ಹಾಗೂ ಪಾಲಿಕೆಯ ಮೇಲೂ ಕಸ ಹರಡದಂತೆ ತಡೆಯುವ ಜವಾಬ್ದಾರಿ ಇದೆ ಎಂದು ಹೇಳಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಕಸವೇ ಇಲ್ಲದಿದ್ದರೆ ಹಂದಿಯ ಸಮಸ್ಯೆಯೂ ಇರುವುದಿಲ್ಲ. ಈ ಬಗ್ಗೆ ಪಾಲಿಕೆ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆಗ ಹಂದಿಗಳಿಗೆ ತಿನ್ನಲು ಏನೂ ಸಿಗದೇ ಸಮಸ್ಯೆ ಕಡಿಮೆಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಪಾಲಿಕೆ ಆರೋಗ್ಯಾಧಿಕಾರಿ ಡಾ. ಜಿ.ಎಂ. ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!