ನರೇಂದ್ರ ಮೋದಿ ಅವರ ಜನೋಪಯೋಗಿ ಕಾರ್ಯ ಕ್ರಮಗಳಿಗೆ ಮನಸೋತು ತಾನು ಬಿಜೆಪಿ ಸೇರ್ಪಡೆಗೊಂಡಿದ್ದೇನೆ. ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳು ಜನಪರವಾದ ಧೋರಣೆ ಹೊಂದಿದ್ದು, ಜನರ ಕಷ್ಟಗಳಿಗೆ ಸ್ಪಂದಿಸುತ್ತಿವೆ. ಕೆಳವರ್ಗ, ನೊಂದ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ಜನೌಷಧಿ ಕೇಂದ್ರದ ಪ್ರಾರಂಭವೇ ಸಾಕ್ಷಿ.
– ಎನ್.ಜಿ. ಪುಟ್ಟಸ್ವಾಮಿ, ಬಿಜೆಪಿ ಮುಖಂಡ
ದಾವಣಗೆರೆ, ಡಿ.14- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆಯು ರೈತರಿಗೆ ಅನುಕೂಲವಾಗಲಿದೆ ಎಂದು ಬಿಜೆಪಿ ಮುಖಂಡ ಎನ್.ಜಿ. ಪುಟ್ಟಸ್ವಾಮಿ ತಿಳಿಸಿದ್ದಾರೆ.
ತಾವು ಎಪಿಎಂಸಿಯಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ್ದೇನೆ. ಅದರಲ್ಲಿ ಕೆಲವು ಲೋಪ-ದೋಷಗಳಿವೆ. ಹೊಸ ತಿದ್ದುಪಡಿ ಕಾಯ್ದೆಯಿಂದ ಲೋಪ-ದೋಷಗಳು ನಿವಾರಣೆಯಾಗಿದ್ದು, ರೈತರ ಉತ್ಪನ್ನ ಖರೀದಿಸುವಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗಿ ಹೆಚ್ಚಿನ ಧಾರಣೆ ನೀಡಲು ಸಾಧ್ಯ ವಾಗಲಿದೆ. ಇದರಿಂದ ಪ್ರಧಾನ ಮಂತ್ರಿ ಮೋದಿ ಅವರ ಆಶಯದಂತೆ 2022 ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರಂಭಿಸಿರುವ ಜನೌಷಧ ಕೇಂದ್ರಗಳು ದೇಶದ ಬಡವರ ಪಾಲಿಗೆ ಸಂಜೀವಿನಿ ಕೇಂದ್ರಗಳಾಗಿವೆ. ಖಾಸಗಿ ಔಷಧ ಅಂಗಡಿಗಳಲ್ಲಿ ಸಕ್ಕರೆ ಕಾಯಿಲೆ ಸೇರಿದಂತೆ, ಹಲವು ಗಂಭೀರ ಕಾಯಿಲೆಗಳಿಗೆ ಸಾವಿರಾರು ರೂಪಾಯಿಗೆ ಸಿಗುವ ಔಷಧಗಳು ಜನೌಷಧ ಕೇಂದ್ರಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿವೆ. ಆದರೆ ಖಾಸಗಿ ಔಷಧ ಕಂಪನಿಗಳು, ಕೆಲವು ಖಾಸಗಿ ಔಷಧದ ಅಂಗಡಿಗಳವರು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿರುವುದು ಖಂಡನೀಯ. ಸಾವಿರ ರೂ.ಗೆ ಸಿಗುವ ಔಷಧ ಜನಔಷಧ ಕೇಂದ್ರಗಳಲ್ಲಿ ನೂರು ರೂ.ಗೆ ಕೇಂದ್ರ ಸರ್ಕಾರ ನೀಡುತ್ತಿರುವುದನ್ನು ಇವರಿಗೆ ಸಹಿಸಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.