ದಾವಣಗೆರೆ, ಡಿ. 14- ಕಳೆದ ಶುಕ್ರವಾರದಿಂದ ಆರಂಭವಾಗಿದ್ದ ಕೆ.ಎಸ್.ಆರ್.ಟಿ.ಸಿ. ನೌಕರರ ಮುಷ್ಕರ ದಿಂದಾಗಿ ದಾವಣಗೆರೆ ವಿಭಾಗಕ್ಕೆ ಸುಮಾರು 1.20 ಕೋಟಿ ರೂ. ನಷ್ಟವಾಗಿದೆ.
ಬೆಂಗಳೂರಿನಲ್ಲಿ ನೌಕರರು ಹಾಗೂ ಅಧಿಕಾರಿಗಳ ಹಗ್ಗ ಜಗ್ಗಾಟ ನಡೆದು, ಕೊನೆಗೂ ನೌಕರರು ಸಂಜೆ ವೇಳೆಗೆ ಮುಷ್ಕರ ಕೈ ಬಿಟ್ಟಿದ್ದಾರೆ.
ಮುಂಜಾನೆ ಮುಷ್ಕರ ಕೈಬಿಡಲಾಗುತ್ತದೆ. ಬಸ್‌ಗಳು ಹೊರಡಲಿವೆ ಎಂದು ಮಾಧ್ಯಮಗಳಲ್ಲಿನ ಸುದ್ದಿ ನೋಡಿ ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸಿ ಕಾದು ಕಾದು ಹೈರಾಣಾದರು. ಮೂರು ಡಿಪೋ ಗಳನ್ನು ಒಳಗೊಂಡ ದಾವಣಗೆರೆಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ 1,132 ನೌಕರರ ಪೈಕಿ ಸೋಮವಾರ ಮಧ್ಯಾಹ್ನದವರೆಗೆ ಕೇವಲ 14 ನೌಕರರು ಕೆಲಸಕ್ಕೆ ಹಾಜರಾಗಿದ್ದರು. ಪೊಲೀಸ್ ಸುಪರ್ದಿಯಲ್ಲಿ ರಾಣೇಬೆನ್ನೂರಿಗೆ 2, ಹರಿಹರಕ್ಕೆ 2 ಹಾಗೂ ಚಿತ್ರದುರ್ಗಕ್ಕೆ 1 ಬಸ್ ಸೇರಿ 5 ಬಸ್‌ಗಳು ಪ್ರಯಾಣಿಕರನ್ನು ಹೊತ್ತೊಯ್ದವು.
`ಜನತಾವಾಣಿ’ಯೊಂದಿಗೆ ಮಾತನಾಡಿದ ದಾವಣಗೆರೆ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್, ಇಂದು ಮಧ್ಯಾಹ್ನದ ವೇಳೆಗೆ 5 ಬಸ್‌ಗಳನ್ನು ಬಿಟ್ಟಿದ್ದೇವೆ. ನೌಕರರು ಬಂದರೆ ಉಳಿದ ಬಸ್‌ಗಳೂ ತೆರಳಲಿವೆ ಎಂದು ಹೇಳಿದ್ದರು. ಸಂಜೆ ಮುಷ್ಕರ ನಿಲ್ಲಿಸಿ, ನೌಕರರು ಕೆಲಸಕ್ಕೆ ಆಗಮಿಸಿದ್ದರ ಹಿನ್ನೆಲೆಯಲ್ಲಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.
ಸಾರಿಗೆ ನಿಗಮದ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬಸ್ ಇಲ್ಲದ ಕಾರಣ ನಿಲ್ದಾಣದ ಬೆಂಚ್ ಮೇಲೆ ಆರಾಮವಾಗಿ ಮೊಬೈಲ್ ನೋಡುತ್ತಿರುವ ಪ್ರಯಾಣಿಕ
- ಬೆಳಿಗ್ಗೆ ಬಸ್ಗಳಿಗೆ ಕಾದು ಹೈರಾಣಾದ ಪ್ರಯಾಣಿಕರು
- ಪೊಲೀಸ್ ಕಾವಲಿನಲ್ಲಿ ತೆರಳಿದ 5 ಬಸ್‌ಗಳು
- ಖಾಸಗಿ ವಾಹನಗಳಿಂದ ಹೆಚ್ಚಿದ ಸುಲಿಗೆ
ಸರ್ಕಾರ ಒಪ್ಪಿರುವ ನಿಗಮದ ನೌಕರರ ಬೇಡಿಕೆಗಳು
- ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆ
- ಕೊರೊನಾದಿಂದ ಮೃತ ನೌಕರರ ಕುಟುಂಬಕ್ಕೆ30 ಲಕ್ಷ ರೂ. ಪರಿಹಾರ
- ಅಂತರ್ ನಿಗಮ ವರ್ಗಾವಣೆಗೆ ಸೂಕ್ತ ನೀತಿ ರಚಿಸಲು ತೀರ್ಮಾನ
- ನೌಕರರ ತರಬೇತಿ ಅವಧಿಯನ್ನು 1 ವರ್ಷಕ್ಕೆ ಇಳಿಸಲು ತೀರ್ಮಾನ
- ನಿಗಮದಲ್ಲಿ ಹೆಚ್.ಆರ್.ಎಂ.ಎಸ್ (ಮಾನವ ಸಂಪನ್ಮೂಲ) ವ್ಯವಸ್ಥೆ
- ಹೆಚ್ಚಿನ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ
- ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ
- ನಾಟ್ ಇಶ್ಯೂಡ್ – ನಾಟ್ ಕಲೆಕ್ಟೆಡ್ ಪದ್ಧತಿಗೆ ಪರ್ಯಾಯ ವ್ಯವಸ್ಥೆ
- 6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಪರಿಶೀಲನೆ
ಖಾಸಗಿ ವಾಹನಗಳಿಂದ ಸುಲಿಗೆ: ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹೊರಗೆ ಚಿತ್ರದುರ್ಗ ಸೇರಿದಂತೆ ಬೇರೆ ಊರುಗಳಿಗೆ ಪ್ರಯಾಣಿಕರನ್ನು ಹೊತ್ತೊಯ್ಯಲು ಖಾಸಗಿ ವಾಹನಗಳ ಕಾಂಪಿಟೇಷನ್ ನಡೆಯುತ್ತಿತ್ತು. ನಿಗಮದ ನೌಕರರ ಮುಷ್ಕರದ ಲಾಭ ಪಡೆಯಲು ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದುದು ಕಂಡು ಬಂತು. ಪ್ರಯಾಣಿಕರು ದಾವಣಗೆರೆಯಿಂದ ಚಿತ್ರದುರ್ಗಕ್ಕೆ 70 ರೂ., ಹರಿಹರಕ್ಕೆ 20 ರಿಂದ 22 ರೂ.ಗಳನ್ನು ತೆರಬೇಕಾಗಿತ್ತು.
ಮುಷ್ಕರ ನಿಲ್ಲಿಸುತ್ತಾರೆ. ಬಸ್‌ಗಳು ಸಂಚರಿಸುತ್ತವೆ ಎಂಬ ಸುದ್ದಿಯನ್ನು ಟಿವಿಯಲ್ಲಿ ನೋಡಿ ಬಂದೆ. ಹೊಸಪೇಟೆಗೆ ಹೋಗಬೇಕು. ಒಂದು ತಾಸಿನಿಂದ ಕಾಯುತ್ತಿದ್ದೇನೆ ಎಂದು ದಾವಣಗೆರೆ ಕೆಟಿಜೆ ನಗರದ ನಿವಾಸಿ ವೀರೇಶ್ ಹೇಳಿದರು.
ಇನ್ನು ಬೆಂಗಳೂರಿಗೆ ತೆರಳಲೆಂದು ಭೂಮಿಕಾ ನಗರದ ಸಾವಿತ್ರಮ್ಮ ಹಾಗೂ ಕುಟುಂಬದವರು ಬೆಳಿಗ್ಗೆ 9 ಗಂಟೆಯಿಂದ ಕಾಯುತ್ತಾ ಕುಳಿತಿದ್ದರು. ಅಧಿಕಾರಿಗಳು ಮಧ್ಯಾಹ್ನ 12 ಗಂಟೆಗೆ ಬಸ್ ಹೊರಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೂ ಬಸ್ ಹೊರಟಿಲ್ಲ ಎಂದು ಅಳಲು ತೋಡಿಕೊಂಡರು.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇವೆ. ವೀಕೆಂಡ್ ಎಂದು ದಾವಣಗೆರೆಗೆ ಬಂದೆವು. ಆದರೆ ಇಂದು ಕೆಲಸಕ್ಕೆ ಹಾಜರಾಗಲೇ ಬೇಕಿತ್ತು. ಬಸ್‌ಗಳಿಲ್ಲದೆ ತೊಂದರೆಯಾಗಿದೆ ಎಂದು ಯುವತಿಯೊಬ್ಬರು ಬೇಸರ ವ್ಯಕ್ತಪಡಿಸಿದರು.