ಯರಗುಂಟೆ : ಸಂಭ್ರಮದ ಅಜ್ಜಯ್ಯನ ತೇರು

ತಾಯಿಯ, ದೇವತೆಯ ಋಣ ತೀರಿಸಬೇಕು: ಶ್ರೀ ಪರಮೇಶ್ವರ ಸ್ವಾಮೀಜಿ ಆಶಯ

ದಾವಣಗೆರೆ, ಡಿ.13- ಮಹಿಳೆಯರು ತಮ್ಮ ಮನಸ್ಸಿನಲ್ಲಿರುವ ಆಸೆಗಳೊಂದಿಗೆ ಕೊರೊನಾ ಹೊಡೆದೋಡಿಸು ಎಂದು ಶ್ರೀ ಕರಿಬಸವೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸಿ ರಥವನ್ನು ಎಳೆಯಿರಿ. ಮುಂದಿನ ವರ್ಷ ಇನ್ನೂ ಸಂಭ್ರಮದಿಂದ ರಥೋತ್ಸವ ಆಚರಿಸೋಣ ಎಂದು ಯರಗುಂಟೆಯ ಶ್ರೀಮಠದ ಶ್ರೀ ಪರಮೇಶ್ವರ ಸ್ವಾಮೀಜಿ ತಿಳಿಸಿದರು.

ನಗರದ ಹೊರವಲಯದ ಯರಗುಂಟೆಯಲ್ಲಿ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದುಗೆ ಮಠದಿಂದ ಇಂದು ಆಯೋಜಿಸಿದ್ದ ಮಹಿಳೆಯರಿಂದ ಶ್ರೀ ಗುರು ಕರಿಬಸವೇಶ್ವರ ಸ್ವಾಮಿಯ ರಥೋತ್ಸವ ಎಳೆಯುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ನಮ್ಮನ್ನು 9 ತಿಂಗಳು ಹೆತ್ತು ಹೊತ್ತು ಬೆಳೆಸಿದ ತಾಯಿಗೆ ಕೊನೆವರೆಗೆ ಪ್ರೀತಿಯಿಂದ ಸಲಹುವ ಮೂಲಕ ಋಣವನ್ನು ತೀರಿಸಬೇಕು ಎಂದು ಹಿತ ನುಡಿದರು.  

ಮಹಿಳೆಯರಿಗೆ ಸ್ವತಂತ್ರವಾದ ಹಕ್ಕನ್ನು ಕೊಡಬೇಕು. ಗಂಡು ಮಕ್ಕಳಲ್ಲಿ ಇರುವಂತ ಸರಿಸಮಾನವಾದ ಶಕ್ತಿ ಯಾರಲ್ಲಿ ಇದೆ ಎಂದರೆ ಅದು ಮಹಿಳೆಯರಲ್ಲಿ, ತಾಯಂದಿರಲ್ಲಿ. ಯಾರಾದರೂ ಜಗಳ ಮಾಡುತ್ತಿದ್ದರೆ ತಾಯಿ ಸಮಾಧಾನ ಮಾಡಿ ಬಿಡಿಸುತ್ತಾಳೆ. ಆದರೆ ಗಂಡು ಮಕ್ಕಳಲ್ಲಿ ಸಮಾಧಾನವೇ ಇಲ್ಲ. ಆ ತಾಯಿ ಇಡೀ ಭೂ ಮಂಡಲವನ್ನು ಶಾಂತ ರೀತಿಯಾಗಿ ಕಾಪಾಡುತ್ತಿದ್ದಾಳೆ. ಹೆಣ್ಣಿಗೆ ಗೌರವ ನೀಡಬೇಕು ಎಂದು ಶ್ರೀಗಳು ಕರೆ ನೀಡಿದರು.

ನಮ್ಮ ದೇಹವನ್ನು ತಾಯಿಯ ಪಾದಕ್ಕೆ ಮೀಸಲಿಟ್ಟಾಗ ಮಾತ್ರ ತಾಯಿಯ, ದೇವತೆಯ ಋಣ ತೀರಿಸಲು ಸಾಧ್ಯ. ಮೂಢ ನಂಬಿಕೆಗಳನ್ನು ದೂರ ಮಾಡಿದ ಮಹಾನ್ ಶರಣರು ಎಂದರೆ ಕರಿಬಸವೇಶ್ವರರು. ತಾಯಿ ತಾನು ಊಟ ಮಾಡದಿದ್ದರೂ ಮಗನಿಗಾಗಿ ಕಾಯುತ್ತಾಳೆ ಎಂದು ಹೇಳಿದರು.

ಕಳೆದ 3 ವರ್ಷಗಳಿಂದ ಮುಸ್ಲಿಂ ಬಾಂಧವರು ಈ ರಥೋತ್ಸವ ಕಾರ್ಯಕ್ರಮದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ. ಈ ಮಠ ಜಾತಿ, ಮತ, ಭೇದ-ಭಾವವಿಲ್ಲದ ಮಠವಾಗಿ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಶ್ರೀಗಳು ತಿಳಿಸಿದರು.

ಅರಕೆರೆಯ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶ್ರೀಮಠದ ಮಂಜುನಾಥ ಶಾಸ್ತ್ರಿ, ವೀರೇಶ ಶಾಸ್ತ್ರಿ, ವಾಗೀಶ ಶಾಸ್ತ್ರಿ, ಚನ್ನಬಸಯ್ಯ ಶಾಸ್ತ್ರಿ, ನಗರ ಪಾಲಿಕೆ ಸದಸ್ಯೆ ಜಯಮ್ಮ, ಗಂಗಾವತಿಯ ಖಾದ್ರಿ, ಸ್ಫೂರ್ತಿ ಸೇವಾ ಸಂಸ್ಥೆಯ ಎನ್.ಎಸ್. ರಾಜು, ಪ್ರಾಚಾರ್ಯ ಸಿದ್ದಪ್ಪ, ಎನ್.ಪಿ. ರಾಕೇಶ್, ಎ.ಸಿ. ಕರಿಬಸಪ್ಪ, ಮಂಜುನಾಥ, ಬಸವರಾಜ, ಚನ್ನಬಸಪ್ಪ ಗೌಡರು, ಕರಿಸಿದ್ದಪ್ಪ ಮೇಸ್ಟ್ರು, ಶರಣಪ್ಪ, ಮಠದ ಭಕ್ತರು, ಮುಸ್ಲಿಂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

error: Content is protected !!