ದೆಹಲಿಯಂತೆ ‘ಮಾದರಿ ಶಾಲೆ’ಗಳ ದತ್ತು ಸ್ವೀಕಾರ

ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಪರಿಷತ್ ಸದಸ್ಯ ಚಿದಾನಂದ ಗೌಡ ಭರವಸೆ

ದಾವಣಗೆರೆ, ಡಿ. 13 – ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರು ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಮಟ್ಟಕ್ಕೆ ಬೆಳೆಸುವ ರೀತಿಯಲ್ಲೇ, ತಮ್ಮ ಕ್ಷೇತ್ರದ ಪ್ರತಿ ತಾಲ್ಲೂಕಿನಲ್ಲೂ ಒಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವುದಾಗಿ ಪರಿಷತ್ ಸದಸ್ಯ ಚಿದಾನಂದ ಗೌಡ ಪ್ರಕಟಿಸಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರದಿಂದ ತಾವು ಗೆದ್ದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ತ್ರಿಶೂಲ್ ಕಲಾ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ಕ್ಷೇತ್ರದ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಂದಿನ ಆರು ವರ್ಷಗಳಲ್ಲಿ 32 ತಾಲ್ಲೂಕುಗಳಲ್ಲಿ ತಲಾ ಒಂದು ಶಾಲೆಯನ್ನು ದತ್ತು ತೆಗೆದುಕೊಳ್ಳು ತ್ತೇನೆ. ಇದಕ್ಕೆ ಸರ್ಕಾರಿ ಅನುದಾನ ವಷ್ಟೇ ಅಲ್ಲದೇ, ಖಾಸಗಿ ಸಂಸ್ಥೆಗಳ ನೆರವನ್ನೂ ತರುತ್ತೇನೆ ಎಂದು ತಿಳಿಸಿದರು.

ಶಿರಾದಲ್ಲಿ ಈಗಾಗಲೇ ಐಎಎಸ್ ಅಕಾಡೆಮಿ ಸ್ಥಾಪಿಸಿದ್ದು, ಪ್ರತಿ ತಾಲ್ಲೂಕಿನ ಐವರಿಗೆ ಅಲ್ಲಿ ಉಚಿತ ತರಬೇತಿ ನೀಡಲಾಗುವುದು. ಪ್ರತಿ ತಾಲ್ಲೂಕಿಗೆ ಒಂದು ಪದವೀಧರ ಸಹಕಾರಿ ಬ್ಯಾಂಕ್ ಸ್ಥಾಪಿಸುತ್ತೇನೆ ಎಂದು ಅವರು ತಿಳಿಸಿದರು.

ಶಿಕ್ಷಕರಿರುವ ಕಡೆ ಮಕ್ಕಳ ಕೊರತೆ, ಮಕ್ಕಳಿದ್ದ ಕಡೆ ಶಿಕ್ಷಕರಿಲ್ಲದೇ ಇರುವ ಸಮಸ್ಯೆಗಳು ರಾಜ್ಯದ ಸರ್ಕಾರಿ ಶಾಲೆಗಳಲ್ಲಿದೆ. ಈ ಹಿನ್ನೆಲೆ ಯಲ್ಲಿ ಪಂಚಾಯ್ತಿಗೊಂದು ಶಾಲಾ ಸಂಕೀರ್ಣ ಅಭಿವೃದ್ಧಿ ಪಡಿಸಿ, ಅಲ್ಲಿಗೆ  ಬರಲು ಆರರಿಂದ 12ನೇ ತರಗತಿ ಮಕ್ಕಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಚಿದಾನಂದ ಹೇಳಿದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಅಭ್ಯರ್ಥಿ ಘೋಷಣೆ ತಡವಾದರೂ ಪದವೀಧರರು, ಕಾರ್ಯಕರ್ತರು ಹಾಗೂ ಶಿಕ್ಷಕರು ಹಗಲಿರುಳು ದುಡಿದು ಅತಿ ಹೆಚ್ಚು ಮತಗಳಿಂದ ಚಿದಾನಂದ ಆಯ್ಕೆಯಾಗುವಂತೆ ಮಾಡಿದ್ದಾರೆ ಎಂದರು.

ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, 1972ರಲ್ಲಿ ಆಗಿನ ಜನಸಂಘವಾಗಿದ್ದ ಬಿಜೆಪಿಯ ಪರವಾಗಿ ಪ್ರಚಾರ ಮಾಡಲು ಹೋದಾಗ ನಿಮಗೆ ಎಂಟು ಮತಗಳೂ ಸಿಗುವುದಿಲ್ಲ ಎಂದು ಜನರು ಹೇಳುತ್ತಿದ್ದರು. ಈಗ ಜಿಲ್ಲೆಯಿಂದಲೇ ಪದವೀಧರ ಕ್ಷೇತ್ರಕ್ಕೆ ಅತಿ ಹೆಚ್ಚು ಮತಗಳು ಸಿಗುತ್ತಿವೆ ಎಂದರು.

ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿ ಸ್ವಾಮಿ ಮಾತನಾಡಿ, ಪದವೀಧರ ಕ್ಷೇತ್ರದಲ್ಲಿ ಅಭ್ಯರ್ಥಿಯ ಹೆಸರು ಹಾಗೂ ಮುಖ ನೋಡದವರೂ ಬಿಜೆಪಿ ಎಂದು ಮತ ಹಾಕಿರುತ್ತಾರೆ. ಈ ರೀತಿ ಪಕ್ಷದ ಹೆಸರಿನಲ್ಲಿ ಮತ ಪಡೆದು ಗೆದ್ದವರು, ಪಕ್ಷದ ಸಂಘಟನೆ ಬಲಪಡಿಸಲು ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.

ಮೇಯರ್ ಅಜಯ್ ಕುಮಾರ್ ಮಾತನಾಡಿ, ನಗರದ ಕಾರ್ಪೊರೇಟರ್‌ಗಳು ಅವಿರತವಾಗಿ ಶ್ರಮಿಸುವ ಮೂಲಕ ಪಕ್ಷಕ್ಕೆ ಹೆಚ್ಚಿನ ಮತ ದೊರಕಿಸಿ ಕೊಟ್ಟಿದ್ದಾರೆ. ದಾವಣಗೆರೆಯು ಈಗ ಕಾಂಗ್ರೆಸ್ ಮುಕ್ತ ಭಾರತದತ್ತ ಸಾಗಲಿ ಎಂದರು.

ಪರಿಷತ್ ಸದಸ್ಯ ಡಾ. ವೈ. ಎ. ನಾರಾಯಣಸ್ವಾಮಿ ಮಾತನಾಡಿ, ಪರಿಷತ್‌ನಲ್ಲಿ ಬಿಜೆಪಿಗೆ ಸಂಖ್ಯಾಬಲ ಕಡಿಮೆ ಇತ್ತು. ಪರಿಷತ್‌ನ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರಿಂದ, ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 31ಕ್ಕೆ ಹೆಚ್ಚಾಗಿ ನಾವು ಅತಿ ದೊಡ್ಡ ಪಕ್ಷವಾಗಿದ್ದೇವೆ. ಇದು ಬಿಜೆಪಿ ಕನಸು, ಅಜೆಂಡಾ ಹಾಗೂ ಪ್ರಣಾಳಿಕೆ ಮುಂದುವರೆಸಲು ನೆರವಾಗಲಿದೆ ಎಂದರು.

ಲಿಡ್ಕರ್ ಅಧ್ಯಕ್ಷ ಹಾಗೂ ಶಾಸಕ ಪ್ರೊ. ಲಿಂಗಣ್ಣ, ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಸುಮತಿ ಜಯಪ್ಪ ಮಾತನಾಡಿದರು.  ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಬಯಲು ಸೀಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಉಪ ಮೇಯರ್ ಸೌಮ್ಯ ನರೇಂದ್ರ, ಜಿ.ಪಂ. ಪ್ರಭಾರಿ ಅಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ,  ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್, ಗೌರಮ್ಮ ಗಿರೀಶ್, ಪಾಲಿಕೆ ಸದಸ್ಯರಾದ ಗಾಯತ್ರಿ ಬಾಯಿ, ಸ್ವಾಗಿ ಶಾಂತ ಕುಮಾರ್, ರಾಕೇಶ್ ಜಾಧವ್, ಮುಖಂಡರಾದ ಸಂಗನಗೌಡ್ರು, ಜಗದೀಶ್, ಬಿ.ಎಸ್. ಬಸವರಾಜಪ್ಪ, ರೇಣುಕ ಶ್ರೀನಿವಾಸ್, ಯಶೋದಮ್ಮ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!