ಎಕರೆಗೆ 10 ಕ್ವಿಂ.ನಂತೆ ಗರಿಷ್ಟ 50 ಕ್ವಿಂ. ಖರೀದಿ : ಡಿಸಿ ಬೀಳಗಿ
ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಅರ್ಹ ರೈತರಿಗೆ ಪ್ರಯೋಜನ ದೊರೆಯುವಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ.
ದಾವಣಗೆರೆ, ಡಿ.11- ಜಿಲ್ಲೆಯಲ್ಲಿ ಡಿ.15 ರಿಂದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಶುಕ್ರವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮತ್ತು ಬಿಳಿ ಜೋಳ ಖರೀದಿ ಟಾಸ್ಕ್ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಗಿಗೆ ಸರ್ಕಾರದ ಕನಿಷ್ಟ ಬೆಂಬಲ ಬೆಲೆ 3295 ರೂ.ಇದ್ದು ಮಾರುಕಟ್ಟೆ ಬೆಲೆಗಿಂತ ಹೆಚ್ಚಾಗಿದೆ. ಹಾಗಾಗಿ ಮಧ್ಯವರ್ತಿಗಳು ಇದರ ಲಾಭ ಪಡೆಯದಂತೆ ಯೋಜನೆಯ ಪ್ರಯೋಜನ ಅರ್ಹ ರೈತರಿಗೆ ಮಾತ್ರ ದೊರೆಯುವಂತೆ ಇಲಾಖೆಗಳು ನೋಡಿಕೊಳ್ಳಬೇಕೆಂದರು.
ಜಿಲ್ಲೆಯ ಐದು ತಾಲ್ಲೂಕುಗಳಾದ ಜಗಳೂರು, ದಾವಣಗೆರೆ, ಹರಿಹರ, ಚನ್ನಗಿರಿ ಹಾಗೂ ಹೊನ್ನಾಳಿ ಇಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು, ಪ್ರತಿ ರೈತರು ಎಕರೆಗೆ 10 ಕ್ವಿಂಟಾಲ್ನಂತೆ ಗರಿಷ್ಠ 50 ಕ್ವಿಂಟಾಲ್ ರಾಗಿಯನ್ನು ಮಾರಾಟ ಮಾಡಬಹುದಾಗಿದೆ.
ನಮ್ಮಲ್ಲಿರುವ ರಾಗಿ ಬೆಳೆಯುವ ಪ್ರದೇಶದ ಅಂದಾಜಿನಂತೆ 1 ಲಕ್ಷ ಕ್ವಿಂಟಾಲ್ ರಾಗಿ ಬರಬಹುದು. ಇದಕ್ಕಿಂತ ಹೆಚ್ಚಾದಲ್ಲಿ ಮಧ್ಯವರ್ತಿಗಳು, ದಲ್ಲಾಳಿಗಳು ಲಾಭ ಪಡೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಖರೀದಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವವರು ಎಚ್ಚರದಿಂದ ನೋಡಿಕೊಳ್ಳಬೇಕು. ಸಂಬಂಧಿಸಿದ ತಾಲ್ಲೂಕುಗಳ ತಹಶೀಲ್ದಾರ್ಗಳು ಖರೀದಿ ಕೇಂದ್ರಗಳಿಗೆ ಆಗಾಗ್ಗೆ ಭೇಟಿ ನೀಡಬೇಕು. ನಾನೂ ಕೂಡ ಮಾರುವೇಷದಲ್ಲಿ ಭೇಟಿ ನೀಡಲಿದ್ದು, ಬಹಳ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ರಾಗಿ ಮಾರಾಟ ಮಾಡುವ ರೈತರಿಗೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿರುತ್ತದೆ. ನೋಂದಣಿ ಮಾಡಿಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡಲಾಗಿದೆ. ಹಾಗಾಗಿ ಕೆಲ ರೈತರಷ್ಟೇ ನೋಂದಣಿ ಮಾಡಿಕೊಂಡಿರುವುದಿಲ್ಲ ಎಂದರು.
ಸಭೆಯಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ, ದಾವಣಗೆರೆ ತಾಲ್ಲೂಕಿನಲ್ಲಿ 404 ಹೆಕ್ಟೇರ್, ಹರಿಹರ 110, ಜಗಳೂರು 1655, ಹೊನ್ನಾಳಿ 370, ಚನ್ನಗಿರಿ 2155, ನ್ಯಾಮತಿ 90 ಹೆಕ್ಟೇರ್ಗಳಲ್ಲಿ ರಾಗಿ ಬೆಳೆಯಲಾಗುತ್ತಿದೆ ಎಂದರು. ಎಪಿಎಂಸಿ ಕಾರ್ಯದರ್ಶಿ ದೊರೆಸ್ವಾಮಿ ಹಾಗು ಇತರೆ ಅಧಿಕಾರಿಗಳು ಇದ್ದರು