ಸಾರಿಗೆ ಸಿಬ್ಬಂದಿ ಅನಿರ್ದಿಷ್ಟ ಮುಷ್ಕರ : ಪರದಾಡಿದ ಪ್ರಯಾಣಿಕರು

ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹಿಸುವ ಹೋರಾಟಕ್ಕೆ ರೈತರ ನಾಯಕತ್ವ

ದಾವಣಗೆರೆ, ಡಿ.11- ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ನೌಕರರು, ಡಿಪೋದ ತಾಂತ್ರಿಕ ಸಿಬ್ಬಂದಿ ಸೇವೆಯಿಂದ ದೂರ ಉಳಿದು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಳಿಸಿ ಚಾಲಕರು, ನಿರ್ವಾಹಕರು ಪ್ರತಿಭಟನೆ ಆರಂಭಿಸಿದರೆ, ಡಿಪೋದ ತಾಂತ್ರಿಕ ವಿಭಾಗದ ಸಿಬ್ಬಂದಿಯೂ ತಮ್ಮೆಲ್ಲಾ ಕೆಲಸ ಕಾರ್ಯ ಸ್ಥಗಿತಗೊಳಿಸಿ ಹೋರಾಟದಲ್ಲಿ ಭಾಗಿಯಾದರು.

ದಿಢೀರ್ ಮುಷ್ಕರ ನಡೆಸಿದ ಪರಿಣಾಮ ಬಸ್‍ಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು. ಪದವಿ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಹ ಬಸ್ ಗಳ ಸೇವೆ ಇಲ್ಲದೇ ಪರದಾಡಿದರು. 

ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಕೆಲವರು ತಮ್ಮ ಮನೆ, ಬಂಧುಗಳ ಮನೆಗೆ ವಾಪಸ್ಸಾದರೆ ಮತ್ತೆ ಕೆಲವರು ನಿಲ್ದಾಣದ ಹೊರಗೆ ಖಾಸಗಿ ಬಸ್ ಗಳು, ಖಾಸಗಿ ವಾಹನಗಳ ಸಂಚಾರವಿದ್ದರೂ ಒಂದಕ್ಕೆ 2-3 ಪಟ್ಟು ಹೆಚ್ಚಿಗೆ ದರ ನೀಡುವ ಮೂಲಕ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಚಿತ್ರದುರ್ಗಕ್ಕೆ 70 ರೂ. ನೀಡುತ್ತಿದ್ದ ಪ್ರಯಾಣಿಕರು ಕೆಎಸ್ ಆರ್ ಟಿಸಿ ನೌಕರರ ಮುಷ್ಕರದಿಂದಾಗಿ 140-160 ರೂ. ಕೊಟ್ಟು ಖಾಸಗಿ ಬಸ್, ಇತರೆ ಖಾಸಗಿ ವಾಹನಗಳಲ್ಲಿ ಸಂಚರಿಸಬೇಕಾಯಿತು. ಗ್ರಾಮೀಣ ಭಾಗಕ್ಕೆ ತೆರಳಬೇಕಿದ್ದವರು ಪ್ರಯಾಣಿಕರ ಆಟೋ, ಗೂಡ್ಸ್ ವಾಹನಗಳನ್ನೇರಿ ಪ್ರಯಾಣಕ್ಕೆ ಮುಂದಾದರು.

ದಾವಣಗೆರೆ ಎರಡು, ಹರಿಹರದ ಒಂದು ಡಿಪೋ ಸೇರಿ 164 ಬಸ್‍ಗಳಲ್ಲಿ ಮುದ್ದೇ ಬಿಹಾಳ್, ಶ್ರೀಶೈಲ, ಹುಬ್ಬಳ್ಳಿ ಮತ್ತು ಬೆಂಗಳೂರಿಗೆ ನಾಲ್ಕು ಬಸ್‍ಗಳು ಮಾತ್ರ ಸಂಚರಿಸಿದವು. ಉಳಿದೆಲ್ಲ ಬಸ್ ಸೇವೆ ಸ್ಥಗಿತಗೊಳಿಸಲಾಗಿತ್ತು.

ಸುಮಾರು 350ಕ್ಕೂ ಹೆಚ್ಚು ಬಸ್ಸುಗಳು ದಾವಣಗೆರೆ ವಿಭಾಗಕ್ಕೆ ಸೇರಿವೆ. ಇದರಲ್ಲಿ ನಿತ್ಯವೂ ಇಲ್ಲಿಂದ 180ಕ್ಕೂ ಹೆಚ್ಚು ಬಸ್‍ಗಳು ಗ್ರಾಮೀಣ ಪ್ರದೇಶ, ರಾಜ್ಯದ ವಿವಿಧ ಜಿಲ್ಲೆ, ಅನ್ಯ ರಾಜ್ಯಗಳಿಗೆ ಸಂಚಾರ ಆರಂಭಿಸಬೇಕಿತ್ತು. ಆದರೆ, ಮುಷ್ಕರದಿಂದಾಗಿ ಕೇವಲ 4 ಸರ್ಕಾರಿ ಬಸ್ ಗಳ ಸಂಚಾರ ಇತ್ತು.

ಕರ್ತವ್ಯಕ್ಕೆ ಹಾಜರಾದ ಮಹಿಳೆಯರೂ ಸೇರಿದಂತೆ ಸಿಬ್ಬಂದಿ ಮುಷ್ಕರದಲ್ಲಿ ತೊಡಗಿದ್ದರೆ ಚಾಲಕರು, ನಿರ್ವಾಹಕರೂ ನಿಲ್ದಾಣದೊಳಗೆ ಬಂದರೂ ಕೆಲಸಕ್ಕೆ ಹಾಜರಾಗಲಿಲ್ಲ. ಕೆಎಸ್‍ಆರ್‍ಟಿಸಿ ಅಧಿಕಾರಿಗಳೂ ಬೆಳಿಗ್ಗೆಯಿಂದಲೇ ಚಾಲಕರು, ನಿರ್ವಾಹಕರಿಗೆ ನಿರಂತರ ದೂರವಾಣಿ ಮೂಲಕ ಕರೆಗೆ ಪ್ರಯತ್ನಿಸುತ್ತಿದ್ದರೂ ಯಾರೊಬ್ಬರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಮತ್ತೆ ಕೆಲವರು ಅಧಿಕಾರಿಗಳ ಮಾತಿಗೆ ಕಿವಿಗೊಡದೇ ತಮ್ಮ ಮುಂದಿನ ಹೋರಾಟದ ರೂಪುರೇಷೆಯ ಚರ್ಚೆಯಲ್ಲಿ ತೊಡಗಿದ್ದರು. 

ನಾಳೆಯಿಂದ ಹೋರಾಟ ಮತ್ತೆ ಯಾವ ಸ್ವರೂಪ ಪಡೆಯುತ್ತದೆಂಬ ಆತಂಕ ಮನೆ ಮಾಡಿದೆ. ಮುಷ್ಕರ ನಿರತ ಸಿಬ್ಬಂದಿ ನಿಲ್ದಾಣದಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡುವ ಮೂಲಕ ಹೋರಾಟ ಮತ್ತಷ್ಟು ತೀವ್ರತೆ ಪಡೆಯುವ ಸೂಚನೆಯನ್ನು ಪರೋಕ್ಷವಾಗಿ ನೀಡಿದರು.

ಸಾರಿಗೆ ನೌಕರರಿಗೆ ಸೇರುವಾಗ ಷರತ್ತು ಹಾಕಬೇಕಿತ್ತು: ಎಂಪಿಆರ್

ಕೆಎಸ್‍ಆರ್‍ಟಿಸಿ ನೌಕರರು ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬ ಬೇಡಿಕೆಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯೆ ವ್ಯಕ್ತಪಡಿಸಿ, ಸಾರಿಗೆ ನೌಕರರಿಗೆ ಸೇರಬೇಕಾದರೆ ನೀವು ಷರತ್ತು ಹಾಕಬೇಕಿತ್ತು ಎಂದು ಸಾರಿಗೆ ನೌಕರರನ್ನು ಪ್ರಶ್ನಿಸಿದ್ದಾರೆ.  

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈಗ ಪ್ರತಿಭಟನೆ ಮಾಡೋದು ಎಷ್ಟು ಸರಿ. ನೀವು ಕೂಡ ಸರ್ಕಾರಿ ನೌಕರರು ಇದ್ದಂತೆ. ಸಾಂವಿಧಾನಿಕವಾಗಿ ಪ್ರತಿಭಟನೆ ಎಲ್ಲರ ಹಕ್ಕು. ಆದರೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ. 

ಲಾಕ್‍ಡೌನ್‍ನಿಂದಾಗಿ ದೇಶ ಬಹುತೇಕ ಸಂಕಷ್ಟದಲ್ಲಿದೆ. ರಾಜ್ಯವೂ ಇದಕ್ಕೆ ಹೊರತಲ್ಲ. ಕೆಎಸ್‍ಆರ್‍ಟಿಸಿ ನೌಕರರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಿಎಂ ಅವರೊಂದಿಗೆ ಮುಕ್ತ ಚರ್ಚೆಗೆ ಅವಕಾಶವಿದೆ. ಅವರ ಬೇಡಿಕೆಗಳ ಈಡೇರಿಕೆಯ ಅವಕಾಶಗಳ ಬಗ್ಗೆ ಚರ್ಚಿಸಿ ಪರಿಹಾರ ಮಾಡಿಕೊಳ್ಳಬಹುದು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಪ್ರತಿಭಟಿಸುವಂತೆ ಸಲಹೆ ನೀಡಿದರು.

error: Content is protected !!