ಅಲೋಪತಿ ವೈದ್ಯರಿಂದ ಒಪಿಡಿ ಬಂದ್

ದಾವಣಗೆರೆ, ಡಿ.11-  ಕೇಂದ್ರ ಸರ್ಕಾರವು ಆಯುರ್ವೇದ ವೈದ್ಯರೀಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕರೆಯ ಮೇರೆಗೆ ಅಲೋಪಥಿ ವೈದ್ಯರು ಶುಕ್ರವಾರ ನಗರದಲ್ಲಿ ಒಪಿಡಿ ಸೇವೆ ಸ್ಥಗಿತಗೊಳಿಸುವ ಮೂಲಕ ಪ್ರತಿಭಟಿಸಿದರು.

ತುರ್ತು ಚಿಕಿತ್ಸೆ, ಹೆರಿಗೆ ವಿಭಾಗ, ಕೋವಿಡ್ ಸೇವೆಗಳನ್ನು ಹೊರತುಪಡಿಸಿ, ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಮ್, ಕ್ಲಿನಿಕ್‍ಗಳಲ್ಲಿ ಹೊರರೋಗಿಗಳ ಸೇವೆ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಸ್ಥಗಿತಗೊಂಡಿತ್ತು. 

ರೋಗಿಗಳು ಸಕಾಲಕ್ಕೆ ಒಪಿಡಿ ಚಿಕಿತ್ಸೆ ದೊರೆಯದೆ ಪರದಾಡಬೇಕಾಯಿತು.  ಮುಷ್ಕರದಿಂದಾಗಿ ಜಿಲ್ಲಾ ಚಿಗಟೇರಿ ಆಸ್ಪತ್ರೆ ಹಾಗೂ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಸಂಖ್ಯೆ ಎಂದಿಗಿಂತ ಹೆಚ್ಚಾಗಿತ್ತು. 

ಮುಷ್ಕರನಿರತ ಅಲೋಪಥಿ ವೈದ್ಯರು ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಇದೇ ವೇಳೆ ಕೇಂದ್ರದ ನಿರ್ಧಾರ ಸ್ವಾಗತಿಸಿ ಆಯುರ್ವೇದ ವೈದ್ಯರು ವಿನೂತನ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದರು.

ಇದೇ ವೇಳೆ ಕೇಂದ್ರ ಸರ್ಕಾರ ಆಯುರ್ವೇದಲ್ಲಿ ಶಲ್ಯ ಮತ್ತು ಶಾಲಾಕ್ಯ ತಂತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ನೀಡಿರುವುದನ್ನು ಸ್ವಾಗತಿಸಿ ಜಿಲ್ಲೆಯ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ವೈದ್ಯರು ಶುಕ್ರವಾರ ಉಚಿತ ಸೇವೆ ನೀಡಿದರು.

ಕೈಗೆ ಗುಲಾಬಿ ಬಣ್ಣದ ರಿಬ್ಬನ್ ಧರಿಸುವ ಮೂಲಕ ತಮ್ಮ ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಮ್‍ಗಳಲ್ಲಿ ಹೊರರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿ, ಚಿಕಿತ್ಸೆ ನೀಡುವ ಮುಖಾಂತರ ಕೇಂದ್ರ ಸರ್ಕಾರ ಮತ್ತು ಸಿಸಿಐಎಂ ಅಧಿಸೂಚನೆಗೆ ಬೆಂಬಲಿಸಿದರು.

 

error: Content is protected !!