ಜಿಲ್ಲೆಗೆ ಬಂದವು 21 ನಿರ್ಭಯ ಗಸ್ತು ಬೈಕ್‍ಗಳು

ದಾವಣಗೆರೆ, ಡಿ.10- ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ದಿನದ 24 ಗಂಟೆಗಳ ಕಾಲ ತುರ್ತು ಸೇವೆ ನೀಡಲು ಜಿಲ್ಲೆಗೆ ಆಗಮಿಸಿರುವ 21 ನಿರ್ಭಯ ಗಸ್ತು ಬೈಕ್‍ಗಳು ಇಂದಿನಿಂದ ಕಾರ್ಯಾಚರಣೆಗಿಳಿದವು.

ಈ ಬೈಕ್‍ಗಳಿಗೆ ಸಂಜೆ ತಮ್ಮ ಕಚೇರಿ ಆವರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ನಿರ್ಭಯ ಯೋಜನೆಯಡಿ ಜಿಲ್ಲೆಗೆ 21 ಹೊಸ ಬೈಕ್ ಗಳನ್ನು ನೀಡಲಾಗಿದ್ದು, ಅವುಗಳನ್ನು ಜಿಲ್ಲೆಯ 21 ಪೊಲೀಸ್ ಠಾಣೆಗಳಿಗೂ ತಲಾ ಒಂದು ವಿತರಿಸಲಾಗಿದೆ ಎಂದು ಹೇಳಿದರು.

21 ಪೊಲೀಸ್ ಠಾಣೆಗಳಲ್ಲೂ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಿ ನಿರ್ಭಯ ಪಡೆ ರಚಿಸಲಾಗಿದ್ದು, ಅವರು ಈ ಬೈಕ್‍ಗಳ ಮೂಲಕ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ನಿರ್ಭಯ ಗಸ್ತು ನಡೆಸಲಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆದ ದೌರ್ಜನ್ಯದ ಘಟನಾ ಸ್ಥಳಕ್ಕೆ ಹೋಗಲು, ತನಿಖೆ ನಡೆಸಲು ಈ ಬೈಕ್‍ಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಸ್ಮಾರ್ಟ್‍ಸಿಟಿ ಯೋಜನೆಯಡಿ ಜಿಲ್ಲೆಗೆ ಬಂದಿರುವ ಮೂರು ವಿಶೇಷ ಕಮಾಂಡೋ ವಾಹನಗಳಿಗೆ ವಿವಿಧ ಉಪಕರಣಗಳನ್ನು ಅಳವಡಿಸಲಾಗಿದೆ. ಇವುಗಳನ್ನು ಉತ್ತರ ಮತ್ತು ದಕ್ಷಿಣ ವಲಯಗಳಿಗೆ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ಒಂದೊಂದು ವಾಹನ ಹಂಚಿಕೆ ಮಾಡಲಾಗಿದೆ. ಜಿಲ್ಲೆಯಲ್ಲಿರುವ 13 ಗಸ್ತು ವಾಹನಗಳೊಂದಿಗೆ ಮೂರು ವಿಶೇಷ ಕಮಾಂಡೋ ವಾಹನಗಳು, 21 ನಿರ್ಭಯ ಗಸ್ತು ಬೈಕ್‍ಗಳು ಹಾಗೂ ಚಿತಾ ಬೈಕ್‍ಗಳು ಗಸ್ತು ನಡೆಸಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಡಿವೈಎಸ್‍ಪಿ ಪ್ರಕಾಶ್, ಆರ್‍ಪಿಐ ಕಿರಣಕುಮಾರ್ ಸೇರಿದಂತೆ ಇತರರು ಇದ್ದರು.

error: Content is protected !!