ದಾವಣಗೆರೆ, ಡಿ.10- ಗೋ ಹತ್ಯೆ ನಿಷೇಧಿಸಿದ ರಾಜ್ಯ ಸರ್ಕಾರದ ಕ್ರಮ ಸ್ವಾಗತಿಸಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿಂದು ವಿಜಯೋತ್ಸವ ಆಚರಿಸಲಾಯಿತು.
ಗೋ ಹತ್ಯೆಯನ್ನು ನಿಷೇಧಿಸುವ ಕಾನೂನಿಗೆ ಬೆಂಬಲಾರ್ಥವಾಗಿ ನಿಟ್ಟುವಳ್ಳಿ ಶ್ರೀ ದುರ್ಗಾಬಿಕಾ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಗೋ ಮಾತೆಗೂ ಪೂಜೆ ನೆರವೇರಿಸಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಬಿಜೆಪಿ ಮುಖಂಡರು, ಕಾರ್ಯಕರ್ತರು ಸಂಭ್ರಮಾಚರಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ಮಾತನಾಡಿ, ದಿನೇ ದಿನೇ ನಶಿಸುತ್ತಿರುವ ಗೋ ಸಂತತಿಯನ್ನು ಉಳಿಸಬೇಕೆಂಬುದು ಎಲ್ಲಾ ಭಾರತೀಯರ ಒಕ್ಕೊರಲ ಆಶಯವಾಗಿತ್ತು. ಸ್ವಾತಂತ್ರ್ಯ ಪೂರ್ವದಿಂದಲೂ ಹಿಂದೂಗಳು ಗೋಹತ್ಯೆ ನಿಷೇಧಕ್ಕೆ ಒತ್ತಾಯಿಸಿಕೊಂಡೇ ಬಂದಿದ್ದರು. ಇದೀಗ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರವು ಗೋಹತ್ಯೆ ನಿಷೇಧ ವಿಧೇಯಕಕ್ಕೆ ಅಂಗೀಕಾರ ಪಡೆಯುವ ಮೂಲಕ ಬಹುಜನರ ಭಾವನೆಗಳಿಗೆ ಸ್ಪಂದಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ಗೃಹ ಪ್ರವೇಶ ಸೇರಿದಂತೆ, ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗೋ ಪೂಜೆ ನೆರವೇರಿಸಲಾಗುತ್ತದೆ. ಹಾಲು ಕೊಡುವುದನ್ನು ನಿಲ್ಲಿಸಿದಾಕ್ಷಣ ಹಸು ನಿರುಪಯುಕ್ತವಾಗುವುದಿಲ್ಲ.
ವಯಸ್ಸಾದ ಎತ್ತುಗಳನ್ನು ಹೊರೆಯಾಗಿ ಪರಿಗಣಿಸುವುದು ಸರಿಯಲ್ಲ. ಗೋ ಮೂತ್ರ, ಗೋಮಯದಲ್ಲಿ ಅನೇಕ ಔಷಧೀಯ ಗುಣಗಳಿದ್ದು, ಸಾವಯವ ಕೃಷಿ ಅನುಸರಿಸುವ ಮೂಲಕ ಗೋ ಉತ್ಪನ್ನಗಳನ್ನು ಸದ್ಬಳಕೆ ಮಾಡಿಕೊಳ್ಳಬಹುದು ಎಂದರು.
ಈ ಸಂಭ್ರಮದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಜಿಲ್ಲಾ ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ಸಂಗನಗೌಡ್ರು, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ನಗರ ಪಾಲಿಕೆ ಸದಸ್ಯರಾದ ಕೆ. ಪ್ರಸನ್ನ ಕುಮಾರ್, ಕೆ.ಎಂ. ವೀರೇಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳ ಮಹೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪ ವಾಲಿ, ಸವಿತ ರವಿಕುಮಾರ್, ಜಿಲ್ಲಾ ಮಾಧ್ಯಮ ಪ್ರಮುಖ್ ಹೆಚ್.ಪಿ. ವಿಶ್ವಾಸ್, ಹನುಮಂತಪ್ಪ, ಬಸವರಾಜಯ್ಯ, ಸಚಿನ್ ವೆರ್ಣೇಕರ್, ಎಂ. ರವಿ ನಾಯ್ಕ, ರಾಜೇಶ್, ಕೊಟ್ರೇಶ ಗೌಡ, ಶ್ರೀನಿವಾಸ್, ಕೆ.ಪಿ. ಗುರು ಸೇರಿದಂತೆ ಇತರರು ಭಾಗವಹಿಸಿದ್ದರು.