- ಗೋವುಗಳ ಹತ್ಯೆ, ಕಳ್ಳಸಾಗಣೆ ನಡೆಸುವವರಿಗೆ ಕಠಿಣ ಶಿಕ್ಷೆ
- ಪ್ರಕರಣಗಳ ತನಿಖೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪನೆ
- ಗೋಶಾಲೆ ಸ್ಥಾಪನೆಗೂ ಅವಕಾಶ
- ಗೋವುಗಳ ರಕ್ಷಕರಿಗೂ ರಕ್ಷಣೆ
ಬೆಂಗಳೂರು, ಡಿ. 9 – ಗದ್ದಲದ ನಡುವೆ ಗೋಹತ್ಯೆ ತಡೆ ಮಸೂದೆಗೆ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದೆ. ಈ ಮಸೂದೆಯ ಮೂಲಕ ಗೋಹತ್ಯೆಯನ್ನು ರಾಜ್ಯದಲ್ಲಿ ಸಂಪೂರ್ಣ ನಿರ್ಬಂಧಿಸಲು ಸರ್ಕಾರ ಉದ್ದೇಶಿಸಿದೆ.
ಗೋಹತ್ಯೆ ತಡೆ ಮಸೂದೆಯ ಅನ್ವಯ , ಗೋವುಗಳ ಹತ್ಯೆ, ಕಳ್ಳಸಾಗಣೆ, ದುರಾಚಾರ ಹಾಗೂ ಹತ್ಯೆ ನಡೆಸುವವರನ್ನು ಕಠಿಣವಾಗಿ ಶಿಕ್ಷಿಸಲಾಗುವುದು.
ಮಸೂದೆ ಮಂಡನೆಯನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿತ್ತು. ವಿರೋಧದ ನಡುವೆಯೇ ಮಸೂದೆಯನ್ನು ಮಂಡಿಸಿದಾಗ, ಅದನ್ನು ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿದ್ದರ ನಡುವೆ ಅಂಗೀಕಾರ ಪಡೆದುಕೊಳ್ಳ ಲಾಗಿದೆ.
ಗೋವುಗಳು ಹಾಗೂ ಕರುಗಳಷ್ಟೇ ಅಲ್ಲದೇ, ಎಮ್ಮೆಗಳು ಹಾಗೂ ಅದರ ಕರುಗಳನ್ನು 12 ವರ್ಷಗಳವರೆಗೆ ರಕ್ಷಿಸಲೂ ಸಹ ಮಸೂದೆ ಉದ್ದೇಶಿಸಿದೆ.
ಗೋಹತ್ಯೆ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ದಾಖಲಾಗುವ ಪ್ರಕರಣಗಳ ತನಿಖೆ ಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಮಸೂದೆ ಉದ್ದೇಶಿಸಿದೆ. ಅಲ್ಲದೇ. ಗೋವುಗಳ ರಕ್ಷಣೆಗಾಗಿ ಗೋಶಾಲೆಗಳ ಸ್ಥಾಪನೆಗೂ ಅವಕಾಶ ಇರಲಿದೆ. ಪೊಲೀಸರು ಗೋಹತ್ಯೆ ತಡೆಗಾಗಿ ಪರಿಶೀಲನೆ ನಡೆಸಲು ಅವಕಾಶ ನೀಡಲಾಗುವುದು.
ಗೋವುಗಳನ್ನು ರಕ್ಷಿಸುವವರಿಗೆ ರಕ್ಷಣೆ ನೀಡಲೂ ಸಹ ಈ ಕಾಯ್ದೆ ಉದ್ದೇಶಿಸಿದೆ. ಮಸೂದೆ ಮಂಡನೆಯನ್ನು ಕಾಂಗ್ರೆಸ್ ವಿರೋಧಿಸಿ ಗದ್ದಲ ನಡೆಸಿತು. ಹೀಗಾಗಿ ಚರ್ಚೆ ಸಾಧ್ಯವಾಗದೇ ಗದ್ದಲದ ನಡುವೆಯೇ ಮಸೂದೆಗೆ ಅಂಗೀಕಾರ ಪಡೆಯಲಾಗಿದೆ. ಈ ಕ್ರಮವನ್ನು ವಿರೋಧಿಸಿದ ಕಾಂಗ್ರೆಸ್ ಸಭಾತ್ಯಾಗ ಮಾಡಿತು.
ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ಮಸೂದೆಯನ್ನು ಮಂಡಿಸಿ ದರು. ಆಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಸದನದ ಬಾವಿಗೆ ನುಗ್ಗಿ ಪ್ರತಿಭಟಿಸಿದರು.
ಸದನ ವ್ಯವಹಾರಗಳ ಸಮಿತಿಯಲ್ಲಿ ಮಸೂದೆಯ ಕುರಿತು ಚರ್ಚಿಸಿಲ್ಲ. ನಿನ್ನೆ ನಡೆದ ಸಭೆಯಲ್ಲಿ ಹೊಸ ಮಸೂದೆಗಳನ್ನು ಮಂಡಿಸ ಬಾರದು ಎಂಬ ನಿರ್ಧಾರ ತೆಗೆದುಕೊಳ್ಳ ಲಾಗಿತ್ತು. ಕೇವಲ ಸುಗ್ರೀವಾಜ್ಞೆಗಳನ್ನಷ್ಟೇ ಜಾರಿಗೆ ತರಬೇಕೆಂದು ನಿರ್ಧರಿಸಲಾಗಿತ್ತು. ಆದರೆ, ಚವಾಣ್ ಹಠಾತ್ತನೆ ಮಸೂದೆ ಮಂಡಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು.
ಆದರೆ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಪ್ರಮುಖ ಮಸೂದೆಗಳನ್ನು ಬುಧವಾರ ಹಾಗೂ ಗುರುವಾರ ಮಂಡಿಸುವುದಾಗಿ ಸ್ಪಷ್ಟಪಡಿಸಿದ್ದಾಗಿ ತಿಳಿಸಿದರು. ಇದರಿಂದ ತೃಪ್ತರಾಗದ ಕಾಂಗ್ರೆಸ್ ಶಾಸಕರು, ಸದನದ ಬಾವಿಗೆ ನುಗ್ಗಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮಸೂದೆ ಜಾರಿಯಾದರೆ ಅದು ಕೋಮುವಾದಿ ಧೃವೀಕರಣಕ್ಕೆ ದಾರಿ ಮಾಡಿಕೊಡುತ್ತದೆ. ಅಲ್ಪಸಂಖ್ಯಾತರನ್ನು ಗುರಿ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಉತ್ತರ ಪ್ರದೇಶ ಹಾಗೂ ಗುಜರಾತ್ ಮಾದರಿಯಲ್ಲೇ ಕಠಿಣ ಕಾಯ್ದೆ ರೂಪಿಸುವುದಾಗಿ ಚೌಹಾಣ್ ತಿಳಿಸಿದ್ದರು. ಚೌಹಾಣ್ ನೇತೃತ್ವದ ಅಧಿಕಾರಿಗಳ ತಂಡ ಇತ್ತೀಚೆಗೆ ಉತ್ತರ ಪ್ರದೇಶ ಹಾಗೂ ಗುಜರಾತ್‌ಗಳಿಗೆ ಭೇಟಿ ನೀಡಿ ಕಾಯ್ದೆ ಜಾರಿಯ ಕುರಿತು ಪರಿಶೀಲಿಸಿತ್ತು.