ದಾವಣಗೆರೆ, ಡಿ.9- ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತಪರ ನಿಲುವು ಹೊಂದಿದ್ದರೂ, ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ರಾಜಕೀಯ ಪ್ರೇರಿತವಾಗಿದ್ದು, ಇದರ ಹಿಂದೆ ಕಾಂಗ್ರೆಸ್ ಸೇರಿದಂತೆ, ಇತರೆ ವಿಪಕ್ಷಗಳ ಕೈವಾಡ ಇರುವುದಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೃಷಿ ಕ್ಷೇತ್ರದ ಸುಧಾರಣೆಗಾಗಿ ರೈತರ ಉತ್ಪನ್ನ, ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, ರೈತರ ಬೆಳೆಗಳಿಗೆ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ (ಕಲ್ಯಾಣ ಮತ್ತು ಸೌಲಭ್ಯ) ಮಸೂದೆ, ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ ಜಾರಿಗೆ ತಂದಿದ್ದು, ಇದರಿಂದ ಯಾವುದೇ ರೈತರಿಗೆ ತೋಂದರೆ ಆಗುವುದಿಲ್ಲ. ಆದರೆ, ಬಿಜೆಪಿಯ ಸರಣಿ ಗೆಲುವಿನಿಂದ ಹತಾಶೆಗೊಂಡಿರುವ ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ರೈತರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟುತ್ತಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದರು.
ಕೇಂದ್ರ ಸರ್ಕಾರದ ರೈತಪರ ಕಾಯ್ದೆಗಳಿಂದ ತಮ್ಮ ವ್ಯಾಪಾರ, ವಹಿವಾಟು ಕಳೆದುಕೊಳ್ಳುವ ಭೀತಿಯಲ್ಲಿರುವ ಪಂಜಾಬ್‍ನ ದಲ್ಲಾಳಿಗಳು ಮತ್ತು ಮಧ್ಯವರ್ತಿಗಳು ರೈತರ ಮುಖವಾಡ ಧರಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇವರ ಕುಮ್ಮಕ್ಕಿನಿಂದ ರೈತ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿವೆ. ಇದರಲ್ಲಿ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಕಾಂಗ್ರೆಸ್, ಎಎಪಿ, ಕಮ್ಯುನಿಸ್ಟ್ ಸೇರಿದಂತೆ ಇತರೆ ಪಕ್ಷಗಳು ಈ ಬಂದ್‍ಗೆ ಬೆಂಬಲ ನೀಡಿವೆಯೇ ಹೊರತು, ನಿಜವಾದ ರೈತ ಬಂದ್ ಬೆಂಬಲಿಸಿಲ್ಲ ಎಂದು ಹೇಳಿದರು.
ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಯೂರಿಯಾ ಅಭಾವ ನೀಗಿಸಲು ಬೇವು ಲೇಪಿತ ಯೂರಿಯಾ, ಈ ವರೆಗೂ ಕತ್ತಲೆಯಲ್ಲಿದ್ದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ, ಬಿತ್ತನೆ ಬೀಜದಿಂದ ಮಾರುಕಟ್ಟೆವರೆಗೆ ಹಲವು ಸುಧಾರಣಾ ಕ್ರಮ, ಕಿಸಾನ್ ಕಾರ್ಡ್ ವಿತರಣೆ, ಮಣ್ಣಿನ ಫಲವತ್ತತೆ ತಿಳಿಯಲು ಸಾಯಿಲ್ ಹೆಲ್ತ್ ಕಾರ್ಡ್, ಬೆಳೆ ನಷ್ಟ ಸರಿದೂಗಿಸಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಕಿಸಾನ್ ಸಮ್ಮಾನ್ ಸೇರಿದಂತೆ ಹಲವು ರೈತಪರ ಯೋಜನೆಗಳನ್ನು ಮೋದಿ ಸರ್ಕಾರ ಜಾರಿಗೊಳಿಸಿದ್ದರೂ ವಿಪಕ್ಷಗಳು ಸರ್ಕಾರದ ವಿರುದ್ಧ ರೈತರನ್ನು ಎತ್ತಿ ಕಟ್ಟಿ ದಾರಿ ತಪ್ಪಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾಗರಾಜ್ ಲೋಕಿಕೆರೆ, ಜಿಲ್ಲಾ ವಕ್ತಾರ ಡಿ.ಎಸ್.ಶಿವಶಂಕರ್, ಬಿಜೆಪಿ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಮುಖಂಡರಾದ ಮಂಜಾ ನಾಯ್ಕ, ವಿಶ್ವಾಸ್ ಸೇರಿದಂತೆ ಇತರರು ಇದ್ದರು.