ದೇಶಾದ್ಯಂತ ವಾಣಿಜ್ಯ ಚಟುವಟಿಕೆ ಸ್ತಬ್ಧ
ನವದೆಹಲಿ, ಡಿ. 8 – ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರು ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ದೇಶಾದ್ಯಂತ ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ರಸ್ತೆ ಸಂಚಾರ ಹಾಗೂ ಸಾರಿಗೆ ಮೇಲೆ ಪರಿಣಾಮವಾಗಿದೆ.
ತುರ್ತು ಸೇವೆಗಳಿಗೆ ಬಂದ್ನಿಂದ ವಿನಾಯಿತಿ ನೀಡಲಾಗಿತ್ತು. ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಿವೆ. ಪಂಜಾಬ್, ಹರಿಯಾಣ ಹಾಗೂ ಛತ್ತೀಸ್ಘಡಗಳಂತಹ ರಾಜ್ಯಗಳಲ್ಲಿ ಬಂದ್ ಬಿಸಿ ಹೆಚ್ಚಾಗಿತ್ತು.
ಬಂದ್ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗಿ ಬಂದೋಬಸ್ತ್ಗೆ ಕ್ರಮ ತೆಗೆದುಕೊಳ್ಳಲಾಗಿತ್ತು. ದೇಶದ ಬಹುತೇಕ ಭಾಗಗಳಲ್ಲಿ ಬಂದ್ ಶಾಂತಿಯುತವಾಗಿತ್ತು.
ಬಂದ್ ಕೇಂದ್ರವಾಗಿದ್ದ ದೆಹಲಿಯಲ್ಲಿ ಪ್ರಮುಖ ಮಾರುಕಟ್ಟೆಗಳು ಎಂದಿನಂತೆ ಕಾರ್ಯ ನಿರ್ವಹಿಸಿವೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿತ್ತು. ಆದರೆ, ಆರೋಪವನ್ನು ನಗರ ಪೊಲೀಸರು ತಳ್ಳಿ ಹಾಕಿದ್ದಾರೆ.
ಬಂದ್ ರೈತರ ಶಕ್ತಿಯನ್ನು ತೋರಿಸಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಹನ್ನಾನ್ ಮೊಹಲ್ಲಾ ಹೇಳಿದ್ದಾರೆ.
ಮೂರು ಕಾಯ್ದೆಗಳನ್ನು ಸಂಪೂರ್ಣವಾಗಿ ವಾಪಸ್ ಪಡೆಯಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸದೇ ಹೋದರೆ ಹೋರಾಟವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಸಿದ್ಧ ಎಂದಿದ್ದಾರೆ.
ಪಂಜಾಬ್ ಹಾಗೂ ಹರಿಯಾಣಗಳಲ್ಲಿ ಬಂದ್ ತೀವ್ರವಾಗಿತ್ತು. ಅಂಗಡಿ – ಮುಂಗಟ್ಟುಗಳು ಮುಚ್ಚಿದ್ದವು. 3,400 ಪೆಟ್ರೋಲ್ ಪಂಪ್ಗಳೂ ಸಹ ಬಂದ್ ಆಗಿದ್ದವು. ಪಂಜಾಬ್ನ ಎಲ್ಲ ಪ್ರಮುಖ ಪಕ್ಷಗಳು ಬಂದ್ಗೆ ಬೆಂಬಲಿಸಿದ್ದವು.
ರೈತರನ್ನು ಬೆಂಬಲಿಸಿ 50 ಸಾವಿರ ಸರ್ಕಾರಿ ನೌಕರರು ಸಾಮೂಹಿಕ ರಜೆ ಪಡೆದಿದ್ದಾರೆ ಎಂದು ಪಂಜಾಬ್ ಉದ್ಯೋಗಿಗಳ ಒಕ್ಕೂಟದ ಅಧ್ಯಕ್ಷ ಸಂಖಚೈನ್ ಖೈರಾ ತಿಳಿಸಿದ್ದಾರೆ.
ಹರಿಯಾಣದಲ್ಲಿ ಪ್ರಮುಖ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಐ.ಎನ್.ಎಲ್.ಡಿ.ಗಳು ಬಂದ್ಗೆ ಬೆಂಬಲಿಸಿದ್ದವು.
ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್, ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಬಂದ್ಗೆ ಬೆಂಬಲ ನೀಡಿದ್ದವು. ಆದರೆ, ರಾಜ್ಯದಲ್ಲಿ ಬಂದ್ಗೆ ಭಾಗಶಃ ಪ್ರತಿಕ್ರಿಯೆ ದೊರೆತಿದೆ. ರೈಲ್ವೆ ಸಂಚಾರಕ್ಕೆ ಪ್ರತಿಭಟನಾಕಾರರು ಅಡ್ಡಿ ಪಡಿಸಿದ್ದರು. ಆದರೆ, ಬಸ್ ಹಾಗೂ ಟ್ಯಾಕ್ಸಿಗಳು ಎದಿನಂತೆ ಕಾರ್ಯ ನಿರ್ವಹಿಸಿವೆ.
ಕಾಂಗ್ರೆಸ್ ಆಡಳಿತದ ಛತ್ತೀಸ್ಘಡದಲ್ಲಿ ಬಂದ್ ಯಶಸ್ವಿಯಾಗಿತ್ತು. ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಶಿವಸೇನೆ – ಎನ್ಸಿಪಿ – ಕಾಂಗ್ರೆಸ್ಗಳು ಬಂದ್ಗೆ ಬೆಂಬಲಿಸಿದ್ದವು. ಪ್ರಮುಖ ನಗರಗಳ ಸಗಟು ಮಾರುಕಟ್ಟೆಗಳು ಹಾಗೂ ಹಲವಾರು ಎಪಿಎಂಸಿಗಳು ಬಂದ್ ಆಗಿದ್ದವು.
ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯ ರಾಲೆಗಣ ಸಿದ್ದಿ ಹಳ್ಳಿಯಲ್ಲಿ ದಿನವಿಡೀ ಉಪವಾಸ ನಡೆಸಿದರು.
ಮೇಘಾಲಯ ಹಾಗೂ ಅರುಣಾಚಲ ಪ್ರದೇಶ ಸೇರಿದಂತೆ ದೇಶದ ಬಹುತೇಕ ಭಾಗಗಳಲ್ಲಿ ಬಂದ್ ಬಿಸಿ ತಟ್ಟಲಿಲ್ಲ.
ದಾವಣಗೆರೆಯಲ್ಲಿ ಉತ್ತಮ ಸ್ಪಂದನೆ
ಹಲವಾರು ಸಂಘಟನೆಗಳಿಂದ ಪ್ರತಿಭಟನೆ, ರಸ್ತೆ ತಡೆ
ದಾವಣಗೆರೆ, ಡಿ.8- ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆ ಬಂದ್ ತೀವ್ರತೆ ಹೆಚ್ಚಾದಂತೆ ಕಂಡರೂ ಮಧ್ಯಾಹ್ನ 12 ಗಂಟೆ ವೇಳೆಗಾಗಲೇ ನಗರ ದೈನಂದಿನ ಚಟುವಟಿಕೆಗೆ ಮರಳಿತು.
ಜಯದೇವ ವೃತ್ತ, ಹದಡಿ ರಸ್ತೆ, ಅಶೋಕ ರಸ್ತೆ, ಪಿ.ಬಿ. ರಸ್ತೆ, ಮಂಡಿಪೇಟೆ, ಚಾಮರಾಜ ಪೇಟೆಯಲ್ಲಿ ಅಂಗಡಿ-ಮುಂಗಟ್ಟುಗಳು ಮಧ್ಯಾಹ್ನದವರೆಗೆ ಮುಚ್ಚಲ್ಪಟ್ಟಿದ್ದವು.
ಬಂದ್ ಹಿನ್ನೆಲೆಯಲ್ಲಿ ನಗರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿತ್ತು. ಆಟೋಗಳು ಓಡಾಡಿದವು. ಕೆಎಸ್ಸಾ ರ್ಟಿಸಿ ಬಸ್ಸುಗಳೂ ಸಹ ಸೇವೆಯಲ್ಲಿ ನಿರತವಾಗಿದ್ದವು.
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ನಗರದ ಜಯದೇವ ವೃತ್ತ ಹಾಗೂ ಪಿ.ಬಿ. ರಸ್ತೆಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದವು.
ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಕೆಎಸ್ಸಾ ರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ಕನ್ನಡಪರ ಸಂಘಟನೆಗಳ ಮುಖಂಡರಾದ ಸುರೇಶ ಐಗೂರು, ರೈತ ಮುಖಂಡ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಪ್ರಧಾನಿ ಮೋದಿ ಭಾವಚಿತ್ರ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹುಚ್ಚವ್ವನಹಳ್ಳಿ ಮಂಜುನಾಥ ಬಣ ಹದಡಿ ರಸ್ತೆಯ ಐಟಿಐ ಕಾಲೇಜ್ ಬಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿತು.
ಬಸ್ನಿಲ್ದಾಣದ ಬಳಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಮುನಿಯಪ್ಪ, ಚಿನ್ನಸಮುದ್ರದ ಶೇಖರನಾಯ್ಕ, ಕಮ್ಯುನಿಷ್ಟ್ ಪಕ್ಷದ ಮುಖಂಡರಾದ ಆವರಗೆರೆ ಚಂದ್ರು, ಆವರಗೆರೆ ವಾಸು, ಐರಣಿ ಚಂದ್ರು, ವಿವಿಧ ಸಂಘಟನೆಗಳ ಮುಖಂಡರಾದ ಜಬೀನಾ ಖಾನಂ, ಮಂಜುನಾಥ ಕೈದಾಳೆ, ಕೆರನಹಳ್ಳಿ ರಾಜು, ರುದ್ರೇಶ್ ಮಳಲಕೆರೆ, ತಿಪ್ಪೇಶ್, ಟಿ.ಎಸ್. ನಾಗರಾಜ್, ಹುಚ್ಚವ್ವನಹಳ್ಳಿ ಬಸವರಾಜ್, ರಂಗನಾಥ ಮತ್ತಿತರರು ಭಾಗವಹಿಸಿದ್ದರು. ವಿದ್ಯಾರ್ಥಿ ಸಂಘಟನೆಗಳ ಸ್ಮಿತಾ, ಸೌಮ್ಯ, ನಾಗಲಕ್ಷ್ಮಿ ಅವರು ಕ್ರಾಂತಿ ಗೀತೆಗಳನ್ನು ಹೇಳುವ ಮೂಲಕ ಜನರ ಗಮನಸೆಳೆದರು.
ದಾವಣಗೆರೆ ಜಿಲ್ಲಾ ಕನ್ನಡ ಪರ ಸಂಘ-ಸಂಸ್ಥೆಗಳ ಒಕ್ಕೂಟದದಿಂದ ಕೈಗಾಡಿಯಲ್ಲಿ ಪ್ರಧಾನಿ ಮೋದಿ ಅವರ ಪ್ರತಿರೂಪ ಮಾಡಿ, ಕೇಂದ್ರ ಸರ್ಕಾರ ತಂದಿರುವ ರೈತ ವಿರೋಧಿ ಕಾಯ್ದೆಗಳ ಫಲಕ ಹಾಕಿ ಪ್ರತಿಭಟನೆ ನಡೆಸಲಾಯಿತು.
ದಾವಣಗೆರೆ ಜಿಲ್ಲಾ ಕನ್ನಡ ಪರ ಸಂಘ-ಸಂಸ್ಥೆಗಳ ಒಕ್ಕೂಟದ ಗೌರವಾಧ್ಯಕ್ಷ ಕೆ.ಜಿ. ಯಲ್ಲಪ್ಪ, ಅಧ್ಯಕ್ಷ ಎನ್.ಹೆಚ್. ಹಾಲೇಶ್, ವಿ . ಅವಿನಾಶ್ (ಅಭಿ) ರಾಜು ಎಸ್., ವಾಸುದೇವ್ , ಸುಧಾಕರ್, ಕೆ.ಎನ್. ವೆಂಕಟೇಶ್, ಮಹಮ್ಮದ್ ಅಸ್ಲಾಂ (ಟಾರ್ಗೆಟ್), ನಾಗೇಂದ್ರ ಬಂಡೀಕರ್, ಐಗೂರು ಸುರೇಶ್, ಅಮ್ಜದ್ ಅಲಿ, ಎಂ.ಎ. ಸಾಧಿಕ್, ಕೆ.ಹೆಚ್. ಮಹಬೂಬ್, ಮಂಜುನಾಯ್ಕ್ ಕಾರ್ಯದರ್ಶಿ, ಮಂಜು ಆವರಗೆರೆ, ರಾಜು ಎಸ್.ಎಂ. ಶ್ರೀಮತಿ ಮಾಲ ನಾಗರಾಜ್, ರಾಮಚಂದ್ರ ಎಂ.ಬಿ, ಆನಂದ್ ಎಂ., ದೇವೇಂದ್ರಪ್ಪ , ಎಸ್.ಎಂ. ಸಾದಿಕ್, ಬಾಬುರಾವ್, ಬಿಲಾಲ್, ಆಜಮ್ ರಜ್ವಿ, ಮಾಲನಾಗರಾಜ್, ಶಾಂತಮ್ಮ, ರಾಧರೆಡ್ಡಿ, ಕವಿತಾ ಬಾಯಿ, ಭೋಜರಾಜು, ಬಿ.ವಿ. ಮಂಜುನಾಥ, ಅಜ್ಜಣ್ಣ, ನವಾಜ್, ಶಹಭಾಜ್, ಗಣೇಶ್ ಯಡಿಹಳ್ಳಿ, ರಾಜಶೇಖರ್, ನಿಂಗಪ್ಪ ಇತರರಿದ್ದರು.
ಭಾರತ ಕಮ್ಯುನಿಸ್ಟ್ ಪಕ್ಷ, ಎಐಟಿಯುಸಿ, ಎಐಯುಟಿಯುಸಿ, ಸಿಐಟಿಯು, ಆಮ್ ಆದ್ಮಿ ಪಾರ್ಟಿ, ಬೀಡಿ ಕಾರ್ಮಿಕರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕನ್ನಡಪರ ಸಂಘಟನೆಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದವು.
ಎಪಿಎಂಸಿಯಲ್ಲಿ ಕೆಲ ಅಂಗಡಿಗಳು ತೆರೆಯಲ್ಪಟ್ಟಿದ್ದವು. ಕೃಷಿ ಇಲಾಖೆ ಸೇರಿದಂತೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿದವು.
ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ದಂಡ ತೆರಬೇಕಾಗುತ್ತದೆ
ರೈತ ಮುಖಂಡ, ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್ ಹದಡಿ ರಸ್ತೆಯಲ್ಲಿ ಆಹಾರದ ಪೊಟ್ಟಣಗಳನ್ನು ವಿತರಿಸಿ, ಬಂದ್ಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ನಂತರ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ವಿರೋಧಿ ಧೋರಣೆ ಖಂಡಿಸಿದರು.
ಅಗತ್ಯ ವಸ್ತುಗಳ ಕಾಯ್ದೆ ರದ್ದಾದರೆ ನಾಳೆ ಏಕಸ್ವಾಮ್ಯವಾಗುತ್ತದೆ. ಬಂಡವಾಳ ಶಾಹಿಗಳು ಕೃಷಿ ಉತ್ಪನ್ನ ವಸ್ತುಗಳನ್ನು ಖರೀದಿಸಿ ಮನಸೋ ಇಚ್ಛೆ ದರ ನಿಗದಿಪಡಿಸಲು ಸಾಧ್ಯವಿದೆ ಎಂದು ಹೇಳಿದರು.
ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತ ಹೋರಾಟಗಳ ಹಿಂದೆ ದಲ್ಲಾಳಿಗಳು ಹಾಗೂ ವರ್ತಕರ ಕೈವಾಡ ಇದೆ ಎಂದು ಬಿಜೆಪಿ ಮುಖಂಡರು ಆರೋಪಿಸುತ್ತಿದ್ದಾರೆ. ಆದರೆ ಯಾವ ಕಾಯ್ದೆಗಳು ವರ್ತಕರ ಪರವಾಗಿದೆ ಎಂದು ಎಲ್ಲರಿಗೂ ತಿಳಿದ ವಿಷಯವೇ ಎಂದರು. ಉದ್ಯಮಿಗಳಿಗೆ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡುವಂತೆ ಕಾಯ್ದೆಗಳನ್ನು ನೀವು ಜಾರಿಗೆ ತರುತ್ತಿದ್ದೀರಿ. ಹೀಗಿದ್ದಾಗ ವರ್ತಕರ ಪರ ನೀವೋ ಅಥವಾ ರೈತರೋ ಎಂದು ಪ್ರಶ್ನಿಸಿದರು.
ನಾವು ಪ್ರಾಮಾಣಿಕ ಪ್ರಧಾನ ಮಂತ್ರಿಗಳನ್ನು ಕಾಣುತ್ತಿದ್ದೇವೆ. ಹಿಂದೆ ಮನಮೋಹನ್ ಸಿಂಗ್ ಪ್ರಾಮಾಣಿಕ ಪ್ರಧಾನಿಯಾಗಿದ್ದರು. ಆಗ ಸರ್ಕಾರ ಹಗರಗಳಲ್ಲಿ ಸಿಲುಕಿತ್ತು. ಈಗ ನರೇಂದ್ರ ಮೋದಿ ಪ್ರಾಮಾಣಿಕರಾಗಿದ್ದಾರೆ. ಆದರೆ ಒಂದೊಂದೇ ಸಂಸ್ಥೆಗಳನ್ನು ಖಾಸಗಿ ಕೊಡುತ್ತಿದ್ದಾರೆ ಎಂದು ತೇಜಸ್ವಿ ಮಾರ್ಮಿಕವಾಗಿ ಹೇಳಿದರು.
ಸುಗ್ರೀವಾಜ್ಞೆ ತರದಿದ್ದರೆ ಬಿಜೆಪಿಯವರೇ ಕಾಯ್ದೆ ವಿರುದ್ಧ ದನಿ ಎತ್ತುತ್ತಿದ್ದರು. ಬ್ರೈನ್ ಮ್ಯಾಪಿಂಗ್ ಮಾಡಿದರೆ ಬಿಜೆಪಿಯವರೇ ಕಾಯ್ದೆ ವಿರೋಧಿಸುತ್ತಾರೆ. ಆದರೆ ಮೋದಿ ವಿರುದ್ಧ ಮಾತನಾಡಿದರೆ ಪಕ್ಷದಲ್ಲಿ ಸ್ಥಾನ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿರುವುದರಿಂದ ಸುಮ್ಮನಿದ್ದಾರೆ ಎಂದರು.
ಬಿಜೆಪಿ ಪಕ್ಷಕ್ಕೆ ಉಳಿಗಾಲ ಬೇಕಾದರೆ ಕಾಯ್ದೆ ವಿರೋಧಿಸಿ ಹೋರಾಟ ಮಾಡಬೇಕು ಎಂದ ತೇಜಸ್ವಿ, ಕೇಂದ್ರ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಸೂಕ್ತ ತಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಖಾಲಿ ತಟ್ಟೆ, ಖಾಲಿ ಲೋಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್
ಜಯದೇವ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಕೇಂದ್ರದ ಕಾಯ್ದೆಗಳಿಂದ ಮುಂದಿನ ದಿನಗಳಲ್ಲಿ ಜನರು ಖಾಲಿ ತಟ್ಟೆ, ಖಾಲಿ ಲೋಟ ಹಿಡಿಯುವ ಪರಿಸ್ಥಿತಿ ಬರುತ್ತದೆ ಎಂದು ಸಾಂಕೇತಿಕವಾಗಿ ಖಾಲಿ ತಟ್ಟೆ, ಖಾಲಿ ಲೋಟ ಹಿಡಿದು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಪ್ರತಿಭಟನೆ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ಡಿ.ಬಸವರಾಜ್, ಪ್ರಧಾನಿ ಮೋದಿ ರೈತರ ಮರಣ ಶಾಸನ ಬರೆಯಲು ಹೊರಟಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಎಂದಿಗೂ ರೈತರ ಪರ ಇರುತ್ತದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಯಡಿಯೂರಪ್ಪನವರು ಗೊಬ್ಬರ ಕೇಳಿದವರ ಮೇಲೆ ಗುಂಡು ಹಾಕಿದರೆ, ಮೋದಿಯವರು ಈಗ ರೈತರ ಮೇಲೆ ಜಲಫಿರಂಗಿ ಸಿಡಿಸುತ್ತಿದ್ದಾರೆ. ಜನ ಸಾಮಾನ್ಯರ, ರೈತರ ಹಿತ ಕಾಯದ ಪ್ರಧಾನಿ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಮುಖಂಡ ಕೆ.ಜಿ. ಶಿವಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಸದಸ್ಯ ಚಮನ್ ಸಾಬ್, ಮುಖಂಡರಾದ ಕೋಳಿ ಇಬ್ರಾಹಿಂ, ಟಿ. ಶಿವಕುಮಾರ್, ಡೋಲಿ ಚಂದ್ರು, ಗಣೇಶ್ ಹುಲ್ಲಮನಿ, ಇನ್ಟೆಕ್ ಘಟಕದ ಜಿಲ್ಲಾಧ್ಯಕ್ಷೆ ದಾಕ್ಷಾಯಣಮ್ಮ, ಗೀತಾ ರಾಜಕುಮಾರ್, ಕಸ್ತೂರಿ, ಲಲಿತಾ, ಸಂಗೀತಾ, ರಾಜೇಶ್ವರಿ ಮತ್ತಿತರರು ಭಾಗವಹಿಸಿದ್ದರು.
ಕಾರ್ಮಿಕ ಸಂಘಟನೆ, ರೈತ ಸಂಘಟನೆಗಳಿಂದ ರಸ್ತೆ ತಡೆ.
ಕೇಂದ್ರ ಸರ್ಕಾರದ ಕಾಯ್ದೆಗಳನ್ನು ವಿರೋಧಿಸಿ ಕರೆ ನೀಡಿದ್ದ ಭಾರತ್ ಬಂದ್ ಹಿನ್ನೆಲೆಯಲ್ಲಿ ದಾವಣಗೆರೆ ಜಯದೇವ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಸಿಗದ ನಿರೀಕ್ಷಿತ ಯಶಸ್ಸು
ಬೆಂಗಳೂರು, ಡಿ.8- ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕೆಂದು ಕರೆ ನೀಡಲಾಗಿದ್ದ ಭಾರತ್ ಬಂದ್ ಬೆಂಬಲಿಸಿ ರಾಜ್ಯದಲ್ಲೂ ರೈತರು ಬೀದಿಗಿಳಿದರಾದರೂ ನಿರೀಕ್ಷಿತ ಯಶಸ್ಸು ದೊರೆಯಲಿಲ್ಲ.
ಬಂದ್ ಕರೆಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು, ವಾಣಿಜ್ಯೋದ್ಯಮಗಳು ನಿರೀಕ್ಷಿತ ಪ್ರಮಾಣದಲ್ಲಿ ಕೈಜೋಡಿಸಲಿಲ್ಲ. ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ರೈತರ ಹೋರಾಟಕ್ಕೆ ಬೆಂಬಲ ನೀಡಿದರೂ ರಾಜ್ಯದ ಕೆಲವು ವೃತ್ತಗಳಲ್ಲಿ ಮುಖಂಡರ, ನಾಯಕರ ಭಾಷಣಕ್ಕೆ ಸೀಮಿತಗೊಂಡಿತು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿ ಮುಗಿದ ನಂತರ ಜೆಡಿಎಸ್ ಶಾಸಕರು ರೈತರಿಗೆ ಬೆಂಬಲ ಘೋಷಿಸಿ ಮಹಾತ್ಮ ಗಾಂಧೀ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲು ಸದನದಿಂದ ಹೊರ ನಡೆದರು.
ರೈತರು ಮತ್ತು ಕೆಲವು ಸಂಘ-ಸಂಸ್ಥೆಗಳು ಕೇವಲ ರಸ್ತೆ ರೋಕೋ, ಮೆರವಣಿಗೆ ಮತ್ತು ಕೇಂದ್ರ – ರಾಜ್ಯ ಸರ್ಕಾರಗಳ ವಿರುದ್ಧ ಸಭೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರಗಳ ವಿರುದ್ಧ ಹರಿಹಾಯ್ದರು.
ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಆ ಪಕ್ಷಗಳ ನಾಯಕರು ವಿಧಾನ ಸೌಧ ಮತ್ತು ವಿಕಾಸಸೌಧದ ನಡುವೆ ಇರುವ ಗಾಂಧೀ ಪ್ರತಿಮೆ ಬಳಿ ಕೆಲ ಕಾಲ ಧರಣಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತ್ರ ನಗರದ ಟೌನ್ ಹಾಲ್ ಬಳಿ ರೈತರು ಹಾಗೂ ಸಂಘ-ಸಂಸ್ಥೆಗಳು ನಡೆಸಿದ ರಾಲಿಯಲ್ಲಿ ಭಾಗವಹಿಸಿ ಸರ್ಕಾರದ ಕೃಷಿ ನೀತಿಯನ್ನು ಖಂಡಿಸಿದರು. ವಿಧಾನ ಮಂಡಲದ ಅಧಿವೇಶನ ನಡೆಯುತ್ತಿರುವುದರಿಂದ ಇನ್ನುಳಿದವರು ಕೇವಲ ಪ್ರತಿಮೆ ಮುಂದೆ ಕುಳಿತು ಅಧಿವೇಶನಕ್ಕೆ ಹಿಂದಿರುಗಿದರು.
ರಾಜ್ಯಾದ್ಯಂತ ರೈತ ಸಂಘಟನೆಗಳು, ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ವ್ಯಕ್ತಪಡಿಸಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ಎಪಿಎಂಸಿ ಹಾಗೂ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದವು.