ಹರಿಹರ : ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಕಾಗಿನಲೆ ಗುರುಪೀಠದ ಜಗದ್ಗುರು ನಿರಂಜನಾನಂದ ಸ್ವಾಮೀಜಿ
ಹರಿಹರ, ಡಿ.8- ಕುರುಬ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಮಾತ್ರ ಎಸ್.ಟಿ. ಮೀಸಲಾತಿ ಹೋರಾಟ ಮಾಡುವುದಕ್ಕೆ ಮುಂದಾಗಿದ್ದೇವೆಯೇ ಹೊರತು, ಬೇರೆ ಯಾವುದೇ ಜನಾಂಗದ ವಿರುದ್ಧವಲ್ಲ ಎಂದು ಕಾಗಿನಲೆ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಮಹಾಸ್ವಾಮೀಜಿ ತಿಳಿಸಿದ್ದಾರೆ.
ನಗರದ ಎಸ್.ಎಸ್.ಕೆ. ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಜ.15ರ ಮಕರ ಸಂಕ್ರಾಂತಿಯ ದಿನದಂದು ಕಾಗಿನಲೆ ಗುರುಪೀಠದ ಆವರಣದಿಂದ ಪ್ರಾರಂಭವಾಗುವ ಪಾದಯಾತ್ರೆ ನಿಮಿತ್ತವಾಗಿ ಇಂದು ಏರ್ಪಾಡಾಗಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಫೆ.7 ರಂದು ಬೆಂಗಳೂರಿನಲ್ಲಿ ನಡೆಯವ ಬೃಹತ್ ಹೋರಾಟದ ಸಮಾವೇಶದಲ್ಲಿ ಸುಮಾರು 10 ಲಕ್ಷ ಸಮುದಾಯದ ಜನರನ್ನು ಒಟ್ಟಿಗೆ ಸೇರಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಅರ್ಪಿಸಲಾಗುತ್ತದೆ. ಒಂದು ವೇಳೆ ನಮ್ಮ ಸಮುದಾಯಕ್ಕೆ ಎಸ್.ಟಿ. ಮೀಸಲಾತಿ ನೀಡದೇ ಇದ್ದರೆ, ಮುಂದೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆಯುವ ಕೆಲಸವನ್ನು ಮಾಡಲಾಗುತ್ತದೆ ಎಂದು ಹೇಳಿದರು.
ಈ ಹೋರಾಟ ಹಲವಾರು ವರ್ಷಗಳ ಹಿಂದೆ ಆಗಬೇಕಾಗಿತ್ತು. ಹಿಂದೆ ಮಾಡಿರುವ ತಪ್ಪನ್ನು ಮುಂದೆ ಮಾಡುವುದು ಬೇಡ. ಸಮುದಾಯದ ಮಕ್ಕಳು ನಮಗೆ ಶಾಪವನ್ನು ಹಾಕಬಾರದು ಎಂಬ ಕಲ್ಪನೆ ಹೊಂದಿ ಎಸ್.ಟಿ. ಹೋರಾಟಕ್ಕೆ ಚಾಲನೆ ನೀಡಲಾಗಿದೆ. ನಮ್ಮ ಹೋರಾಟಕ್ಕೆ ಖಂಡಿತಾ ಫಲ ಸಿಗುತ್ತದೆ ಎಂಬ ಭರವಸೆ ಇದೆ ಎಂದರು.
ಹೊಸದುರ್ಗ ಕಾಗಿನಲೆ ಶಾಖಾ ಮಠದ ಶ್ರೀ ಈಶ್ವರಾನಂದ ಸ್ವಾಮೀಜಿ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಕೊಕ್ಕನೂರು ದ್ಯಾಮಪ್ಪ, ಎಂ. ನಾಗೇಂದ್ರಪ್ಪ, ಕುರುಬ ಸಮಾಜದ ಅಧ್ಯಕ್ಷ ಕೆ. ಜಡಿಯಪ್ಪ, ಹೋರಾಟ ಸಮಿತಿಯ ಮಂಜುನಾಥ್ ಮಾತನಾಡಿ, ನಮಗೆ ಹಿಂದೆ ಗುರು ಮತ್ತು ಗುರಿ ಎರಡೂ ಇರಲಿಲ್ಲ. ಆದರೆ ಈಗ ಒಳ್ಳೆಯ ಗುರುಗಳು ಸಿಕ್ಕಿದ್ದಾರೆ. ಮುಂದೆ ಗುರಿಯೂ ಇದೆ. ಆದ್ದರಿಂದ ಸಮುದಾಯದ ಬೆಳವಣಿಗೆಗೆ ನಾವು ಹೋರಾಟದ ಮೂಲಕ ನಮ್ಮ ಎಸ್.ಟಿ. ಮೀಸಲಾತಿ ಹಕ್ಕನ್ನು ಪಡೆಯಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾದೇವಪ್ಪ ಒಡೆಯರ್ ನಾಗೇನಹಳ್ಳಿ, ದೂಡಾ ಅಧ್ಯಕ್ಷ ಶಿವಕುಮಾರ್, ಕುಣೆಬೆಳಕೆರೆ ದೇವೇಂದ್ರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಬಿ. ರೇವಣಸಿದ್ದಪ್ಪ, ವೈ.ಎನ್. ಮಹೇಶ್, ನಂದಿಗಾವಿ ಶ್ರೀನಿವಾಸ್, ಕುಂಬಳೂರು ವಿರುಪಾಕ್ಷಪ್ಪ, ಸಿ.ಎನ್. ಹುಲುಗೇಶ್, ವಿಜಯಮಹಾಂತೇಶ್, ಐರಣಿ ಅಣ್ಣಪ್ಪ, ಹಾಲಿವಾಣ ಪರಮೇಶ್ವರಪ್ಪ, ಶಿಕ್ಷಕ ಬೀರಪ್ಪ, ಪಿ.ಎಸ್. ಹನುಮಂತಪ್ಪ, ಎಂ. ಆರ್. ಚಂದ್ರಶೇಖರ್, ಸುರೇಶ್ ಚಂದಾಪೂರ್, ನಗರಸಭೆ ಸದಸ್ಯ ವಸಂತ್, ಮಲ್ಲೇಶ್ ಕಮಲಾ ಪುರ, ಜಿಗಳಿ ಮಂಜುನಾಥ್, ಮಂಜುನಾಥ್, ಚೂರಿ ಜಗದೀಶ್, ಕೆ.ಪಿ. ಗಂಗಾಧರ ಮಲೇಬೆನ್ನೂರು ಇತರರು ಹಾಜರಿದ್ದರು.