ಅಪ್ಪರ್ ಭದ್ರಾ ಯೋಜನೆಗೆ ಭದ್ರಾ ನೀರು ಬಳಕೆ

ದಾವಣಗೆರೆ, ಡಿ.7- ಅಪ್ಪರ್ ಭದ್ರಾ ಯೋಜನೆಗೆ ಭದ್ರಾ ಜಲಾಶಯದ ನೀರು ಬಳಕೆಗೆ ಆಕ್ಷೇಪಿಸಿರುವ ಭಾರತೀಯ ರೈತ ಒಕ್ಕೂಟವು, ಹೀಗೆಯೇ ಮುಂದುವರೆದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ  ಸಹ ನೀಡಿದೆ. 

ತುಂಗಾ ನದಿಯಿಂದ 17.50 ಟಿಎಂಸಿ ನೀರು ಎತ್ತಿ ಅಪ್ಪರ್ ಭದ್ರಾ ಯೋಜನೆಗೆ ನೀರು ಕೊಡಬೇಕು ಎಂಬ ನಿಯಮವಿದೆ. ಆದರೆ, ತುಂಗಾ ನದಿಯಿಂದ ನೀರು ಎತ್ತದೆ, ಭದ್ರಾ ಜಲಾಶಯದಲ್ಲಿನ ನೀರನ್ನು ಬಳಕೆ ಮಾಡಲಾಗು ತ್ತಿದೆ ಎಂದು ಭಾರತೀಯ ರೈತ ಒಕ್ಕೂಟದ ಜಿಲ್ಲಾ ಧ್ಯಕ್ಷ ಹೆಚ್.ಆರ್. ಲಿಂಗರಾಜ್ ಶಾಮನೂರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. 

ಅಪ್ಪರ್ ಲಿಫ್ಟಿಂಗ್ ಸ್ಕೀಂನಲ್ಲಿ ತುಂಗಾದಿಂದ 17.50 ಟಿಎಂಸಿ ನೀರು ಭದ್ರಾ ಜಲಾಶಯಕ್ಕೆ ಹಾಕಬೇಕು. ನಂತರ ಈ ನೀರನ್ನು ಮಾತ್ರ ಅಪ್ಪರ್ ಭದ್ರಾ ಯೋಜನೆಯಡಿ ಬಳಕೆ ಮಾಡಿಕೊಳ್ಳಬೇಕು ಎಂಬ ನಿಯಮವಿದೆ. ಆದರೆ, ಭದ್ರಾ ಜಲಾಶಯಕ್ಕೆ ಈ ಸ್ಕೀಂನಿಂದ ಒಂದು ಹನಿ ನೀರು ಸಹ ಹಾಕಿಲ್ಲ. ಈಗ ಭದ್ರಾ ಜಲಾಶಯದಲ್ಲಿದ್ದ ನೀರನ್ನು ಅಪ್ಪರ್ ಭದ್ರಾ ಯೋಜನೆಗೆ ಹರಿಸಲಾಗು ತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಭದ್ರಾ ಜಲಾಶಯದ ನೀರಿನ ಮಟ್ಟ 186 ಅಡಿ ಇದ್ದಲ್ಲಿ 65.654 ಟಿಎಂಸಿ ನೀರು ಇರಬೇಕು. ಈಗ ಪ್ರಸ್ತುತ 54.154 ಟಿಎಂಸಿ ನೀರಿದೆ. ಸುಮಾರು 10 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಈ ಬಾರಿ ಬೇಸಿಗೆ ಬೆಳೆಗೆ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. 

ಹಿರಿಯೂರಿಗೆ ಮಾರ್ಚ್‍ವರೆಗೆ ನೀರು ಕೊಂಡೊಯ್ದರೆ ಈ ಭಾಗದ ರೈತರಿಗೆ ಎಲ್ಲಿ ನೀರು ಉಳಿಯುತ್ತದೆ? ಎಂಬ ಪ್ರಶ್ನೆ ಎದುರಾಗಿದೆ. ಕಾಡಾ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರನ್ನು ಸತತವಾಗಿ ಕಾಡಿಕೊಂಡೇ ಬಂದಿದೆ. ಅಧಿಕಾರಿಗಳು ಹೇಳಿದಂತೆ ಕೇಳಲಾಗುತ್ತಿದೆ. ಭದ್ರಾ ಜಲಾಶಯದ ನೀರು ಅನ್ಯ ವಿವಿಧ ಉದ್ದೇಶಗಳಿಗೆ ಹರಿಸುವುದು ನಿಲ್ಲಬೇಕಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಶಾನ್‍ಭೋಗ್ ನಾಗರಾಜ ರಾವ್, ಎ.ಎಂ. ಮಂಜುನಾಥ, ಮಹೇಶ್ ಕುಂದುವಾಡ, ಕರಿಬಸಪ್ಪ ಸೇರಿದಂತೆ ಇತರರು ಇದ್ದರು. 

error: Content is protected !!