ನಾಡಿನ ಪ್ರಮುಖ ಸಾಹಿತಿ, ಅನುಭಾವಿ ತರೊಂದಿಗೆ ಆತ್ಮನಿರ್ಭರ ಭಾರತಕ್ಕಾಗಿ ಕೃಷಿ-ಋಷಿ ಸಮಾವೇಶ, ಯುವ ಸಮಾವೇಶದ ಮೂಲಕ ಚಿಂತನ ಮಂಥನ ಕಾರ್ಯಕ್ರಮ ನಡೆಸಲಾಗುವುದು.
– ವಚನಾನಂದ ಶ್ರೀ
ಹರಿಹರ, ಡಿ. 6- ಬರುವ ಜನವರಿ 14 ಹಾಗೂ 15ರಂದು ಎರಡು ದಿನಗಳ ಕಾಲ ವರ್ಚುವಲ್ ಹರಜಾತ್ರೆಯನ್ನು ಸರಳವಾಗಿ ಆಚರಿಸಲಾಗುವುದು ಎಂದು ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ತಿಳಿಸಿದರು.
ಹರಿಹರದ ಪಂಚಮಸಾಲಿ ಪೀಠದಲ್ಲಿ ಹರಜಾತ್ರೆಯ ನಿಮಿತ್ತ ಭಾನುವಾರ ನಡೆದ ಪೂರ್ವಭಾವಿ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಕೊವಿಡ್ ಹಿನ್ನೆಲೆಯಲ್ಲಿ ಯಾವುದೇ ಸನ್ಮಾನ, ಗೌರವ ಸಮಾರಂಭ ಇರುವುದಿಲ್ಲ. ಬದಲಾಗಿ ಈ ಎರಡೂ ದಿನಗಳಂದು ನಾಡಿನ ಪ್ರಮುಖ ಸಾಹಿತಿ, ಅನುಭಾವಿತ ರೊಂದಿಗೆ ಆತ್ಮನಿರ್ಭರ್ ಭಾರತಕ್ಕಾಗಿ ಕೃಷಿ-ಋಷಿ ಸಮಾವೇಶ, ಯುವ ಸಮಾವೇಶ ಮೂಲಕ ಚಿಂತನ ಮಂಥನ ಮಾಡುವುದು ಹಾಗೂ ಪೀಠಾರೋಹಣದಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಎಂದು ತಿಳಿಸಿದರು.
ಇತಿಹಾಸ ಕೆದಕುವ ಬದಲು, ಪುರಾಣ ಮಾಡದೆ ಪ್ರಸ್ತುತ ಸಮಾಜಕ್ಕೆ ಅನುಕೂಲವಾಗುವಂತಹ ಯೋಜನೆಗಳನ್ನು ಮಾಡಬೇಕು. ಜಾತ್ರೆ ಯಶಸ್ವಿಗೆ ಎಲ್ಲರು ಭಾಗವಹಿಸಿ ತಮ್ಮ ತನು, ಮನ, ಧನ ಸಹಾಯ ಸಹಕಾರವಿರಲಿ ಎಂದು ಹೇಳಿದರು.
ಧರ್ಮದರ್ಶಿ ಚಂದ್ರಶೇಖರ ಪೂಜಾರ್ ಮಾತನಾಡಿ, ಕೊರೊನಾದಿಂದಾಗಿ ವ್ಯಾಪಾರ ವ್ಯವಹಾರ ಇಲ್ಲದೆ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಆದ್ದರಿಂದ ಶ್ರೀಗಳ ಸಮ್ಮುಖದಲ್ಲಿ ಸರಳವಾಗಿ ಜಾತ್ರೆ ಆಚರಿಸೋಣ. 2ಎ ಮತ್ತು ಒಬಿಸಿ ಸೌಲಭ್ಯಗಳ ಬಗ್ಗೆ ಹಕ್ಕೊತ್ತಾಯ ಮಂಡಿಸಿ, ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದರು.
ಸಮಾಜದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಮಾತನಾಡಿ, ಇದು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಸಂಘಟನೆ ಮತ್ತು ಶಕ್ತಿ ಪ್ರದರ್ಶನಕ್ಕೆ ಹರ ಜಾತ್ರೆ ನೆರವಾಗಲಿದೆ. ಸಮಾಜ ಇಷ್ಟೊಂದು ದೊಡ್ಡದಾಗಿರುವ ಬಗ್ಗೆ ಗೊತ್ತಾಗಿದ್ದು ಹರಜಾತ್ರೆಯಿಂದ ಎಂದರು.
ಈ ಬಾರಿ ಸಂಕಷ್ಟ ಎದುರಾಗಿದ್ದು, ಇದರ ನಡುವೆಯು ಎಲ್ಲಾ ಕಾರ್ಯಕ್ರಮಗಳ ಕುರಿತು ಪೂರ್ವಭಾವಿ ಸಭೆಯ ಮೂಲಕ ಸಂಕ್ರಾಂತಿ, ಹರ ಜಾತ್ರೆ ಮಾಡಬೇಕಾಗಿದೆ. ಯುವಕರಿಗೆ, ಸಮಾಜದವರಿಗೆ ಯಾವ ರೀತಿ ಬದುಕಬೇಕು, ಸರ್ಕಾರದ ಸೌಲಭ್ಯ ಹೇಗೆ ಪಡೆಯಬೇಕು ಎಂಬುದನ್ನು ತಿಳಿಸಬೇಕಿದೆ. ಜಾತ್ರೆ ಸರಳವಾಗಿ ನಡೆಯಲಿದೆ. ನಮ್ಮಲ್ಲಿರುವ ವೈಮನಸ್ಸುಗಳನ್ನು ಬಿಟ್ಟು ಸಂಘಟಿತರಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಹರ ಜಾತ್ರಾ ಮಹೋತ್ಸವದ ಸಮಿತಿಯ ಅಧ್ಯಕ್ಷರನ್ನಾಗಿ ಬಿ. ಲೋಕೇಶ್, ಉಪಾಧ್ಯಕ್ಷರನ್ನಾಗಿ ಶ್ರೀಮತಿ ವಸಂತ ಹುಲ್ಲತ್ತಿ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಧರ್ಮದರ್ಶಿಗಳಾದ ಪಿ.ಡಿ.ಶಿರೂರು, ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಸಮಾಜದ ಹಿರಿಯರಾದ ಹೊಳೆಸಿರಿಗೆರೆಯ ನಾಗನಗೌಡರು, ಹರಿಹರ ತಾಲ್ಲೂಕು ಸಮಾಜದ ಅಧ್ಯಕ್ಷ ಗುಳದಳ್ಳಿ ಶೇಖರಪ್ಪ, ನಾಗರಾಜ್, ಪರಮೇಶ್, ಮಂಜುನಾಥ ಸ್ವಾಮಿ, ಮಹೇಶ್ ಹಾವೇರಿ, ಶಶಿಧರ ಪೂಜಾರ್, ಮಲ್ಲಿಕಾರ್ಜುನ ಹಾವೇರಿ, ಸಿ.ಆರ್.ಬಳ್ಳಾರಿ, ಹರಿಹರ ನಗರಸಭಾ ಸದಸ್ಯ ಸಿದ್ಧೇಶ್, ಯುವ ಘಟಕದ ಸಂಘಟನಾ ಕಾರ್ಯದರ್ಶಿ ಕರಿಬಸಪ್ಪ ಮುಂತಾದವರು ಉಪಸ್ಥಿತರಿದ್ದರು.