ಅಭಿವೃದ್ಧಿ ಮಾಡಲಾಗದ ಶಾಸಕರಿಂದ ಹೊಸ ರಾಗ

ಗ್ರಾ.ಪಂ. ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್

ಕ್ಷೇತ್ರದ ಮುಖಂಡರು ತಮ್ಮ ಚುನಾವಣೆ ಬಂದಾಗ ಕಾರ್ಯಕರ್ತರು ಎಷ್ಟು ನಿಷ್ಠೆಯಿಂದ ಕೆಲಸವನ್ನು ಮಾಡಿರುತ್ತಾರೆ. ಅದೇ ರೀತಿಯಲ್ಲಿ ಮುಖಂಡರೂ ಸಹ ಕಾರ್ಯಕರ್ತರ ಗೆಲುವಿಗೆ ನಿಷ್ಠೆಯಿಂದ ಕೆಲಸ ಮಾಡಿ ಅವರುಗಳು ಗೆಲ್ಲುವಂತೆ ಮಾಡಬೇಕು.

-ಜಿಗಳಿ ಹನುಮಗೌಡ 

ಹರಿಹರ, ಡಿ.6- ಹಿಂದೆ ಬಿಜೆಪಿ ಸರ್ಕಾರದ ಸಮಯದಲ್ಲಿ ಹರಿಹರ ಕ್ಷೇತ್ರಕ್ಕೆ ಅನುದಾನ ಸಾಗರ ರೂಪದಲ್ಲಿ ಹರಿದುಬಂದ ಪರಿಣಾಮವಾಗಿ ಮಿನಿ ವಿಧಾನಸೌಧ, ಸೇತುವೆ, ಸ್ವಿಮ್ಮಿಂಗ್‌ ಪೂಲ್, ನ್ಯಾಯಾಲಯ ಸಂಕೀರ್ಣ, ಗ್ರಾಮೀಣ ಪ್ರದೇಶಗಳಲ್ಲಿ ಕಾಂಕ್ರೀಟ್ ರಸ್ತೆ, ಮನೆಗಳ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸವನ್ನು ಮಾಡ ಲಾಯಿತು. ಆದರೆ ಈಗಿನ ಶಾಸಕ ಡಾ. ಎಸ್. ರಾಮಪ್ಪ  ಅಭಿವೃದ್ಧಿ ಮಾಡಲಿಕ್ಕೆ ಆಗದೇ ಇರುವುದರಿಂದ ನನ್ನ ಮೇಲೆ ಇಲ್ಲದ ವಿಚಾರಗಳನ್ನು ಹೇಳುತ್ತಾ ಹೊಸ ರಾಗವನ್ನು ಹಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ರಾಘವೇಂದ್ರಸ್ವಾಮಿ ಮಠದ ಸಭಾಂಗಣದಲ್ಲಿ ಇಂದು ನಡೆದ ಗ್ರಾಮ ಪಂಚಾಯತಿ ಚುನಾವಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಾ. ರಾಮಪ್ಪನವರ ಗ್ರಹಚಾರ ಸರಿ ಇಲ್ಲದೇ ಇರುವುದರಿಂದ ವಿಶ್ವದಾದ್ಯಂತ ಕೊರೊನಾ ರೋಗ ಬಂದು ಸರ್ಕಾರ ಎಲ್ಲಾ ಹಣವನ್ನು ಅದನ್ನು ತಹಬಂದಿಗೆ ತರುವುದಕ್ಕೆ ಆರೋಗ್ಯ ಇಲಾಖೆಗೆ ವ್ಯಯ ಮಾಡಿದ ಪರಿಣಾಮವಾಗಿ ಅಭಿವೃದ್ಧಿ ಕುಂಠಿತವಾಯಿತು. ಅದನ್ನು ಬಿಟ್ಟು ನಮ್ಮ ಮೇಲೆ ಆರೋಪವನ್ನು ಮಾಡುತ್ತಾರೆ. ಇವರಿಗೆ ಸ್ವಯಂ ಬುದ್ದಿವಂತಿಕೆ ಇಲ್ಲ ಮತ್ತು ಇನ್ನೊಬ್ಬರು ಹೇಳಿದಂಗೆ ಸಹ ಮಾಡುವುದಕ್ಕೂ ಆಗೋಲ್ಲ, ಸಂಸದರು ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ  ಇವರನ್ನು ಬೆಂಗಳೂರಿಗೆ ಅನೇಕ ಸಾರಿ ಕರೆದರೂ ಸಹ ಹೋಗಿರುವುದಿಲ್ಲ. ಕಾರಣ ಅಭಿವೃದ್ಧಿ ಆದರೆ, ಬಿಜೆಪಿ ಪಕ್ಷಕ್ಕೆ ಹೆಸರು ಬರುತ್ತದೆ ಎಂಬ ಭಾವನೆಯಿಂದ ಮತ್ತು ಇದುವರೆಗೆ ಎಂ.ಪಿ.ರವರನ್ನು ಒಂದು ಸಾರಿಯೂ ಸಂಪರ್ಕ ಮಾಡಲಿಕ್ಕೆ ಹೋಗಿಲ್ಲ. ತಾವು ಶಾಸಕರಾಗಿ ಇಷ್ಟು ವರ್ಷಗಳಲ್ಲಿ ಏನು ಸಾಧನೆ ಮಾಡಿದ್ದೀರಾ, ಕ್ಷೇತ್ರ ಅಭಿವೃದ್ಧಿಗೆ ಎಷ್ಟು ಶ್ರಮವಹಿಸಿ ಕೆಲಸವನ್ನು ಮಾಡಿದ್ದೀರಾ? ತಮ್ಮಲ್ಲೇ ನ್ಯೂನತೆಗಳನ್ನು ಇಟ್ಟುಕೊಂಡು ಇನ್ನೊಬ್ಬರ ಮೇಲೆ ಆರೋಪವನ್ನು ಮಾಡುವುದನ್ನು ನಿಲ್ಲಿಸುವಂತೆ ಹೇಳಿದರು.

ಜಿಲ್ಲಾ ಬಿಜೆಪಿ ಪಕ್ಷದ ಅಧ್ಯಕ್ಷ ಹನಗವಾಡಿ ಎಸ್.ಎಂ. ವೀರೇಶ್ ಮಾತನಾಡಿ, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತೆಗೆದುಕೊಳ್ಳುವ ಮತದಾರರ ನಿರ್ಧಾರಗಳಿಂದ ದೇಶದ ಸ್ಥಿತಿಗತಿಗಳು ಬದಲಾವಣೆಗಳನ್ನು ತರುತ್ತವೆ, ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡುವ ಚುನಾವಣೆ ಇದಾಗಿದೆ. ಪಕ್ಷಕ್ಕೆ ಯಾರು ನಿಷ್ಠೆಯಿಂದ ಇರುತ್ತಾರೋ ಅಂತವರಿಗೆ ಮೊದಲು ಆದ್ಯತೆಯನ್ನು ಪಕ್ಷ ನೀಡುತ್ತದೆ ಎಂದು ತಿಳಿಸಿದರು. 

ಜಿಪಂ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಮಾತನಾಡಿ, ಕ್ಷೇತ್ರದ ಶಾಸಕ ಎಸ್. ರಾಮಪ್ಪನವರು ಕುಣಿಯಲಿಕ್ಕೆ ಬಾರದೆ ನೆಲ ಸೊಟ್ಟು ಎಂಬಂತೆ ವರ್ತಿಸುತ್ತಿದ್ದಾರೆ. ಕ್ಷೇತ್ರದ ಜನರು ನೀವು ಎಷ್ಟರ ಮಟ್ಟಿಗೆ ಅಭಿವೃದ್ಧಿ ಚಿಂತನೆಯನ್ನು ಮಾಡುತ್ತಿದ್ದಿರಾ ಎಂಬುದನ್ನು ಗಮನಿಸುತ್ತಿದ್ದಾರೆ. ಇಲ್ಲಿನ ಜನರು ಯಾರೂ ದಡ್ಡರಿಲ್ಲ. ಅವರಿಗೆ ಕಷ್ಟಗಳು ಬಂದಾಗ ಯಾವ ವ್ಯಕ್ತಿಗಳು ಸ್ಪಂದಿಸುತ್ತಾರೆ ಎಂಬುದನ್ನು ಅರಿತಿದ್ದಾರೆ. ಮುಂದಿನ ದಿನಗಳಲ್ಲಿ ಏನು ಆಗುತ್ತದೆ ಎಂಬುದನ್ನು ಕಾದು ನೋಡಿ ಮತ್ತು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆದಷ್ಟೂ ಮುಖಂಡರ ಮಾತಿಗೆ ಯುವಕರು ಮನ್ನಣೆ ಕೊಟ್ಟು ಹೆಚ್ಚು ಅವಿರೋಧವಾಗಿ ಆಯ್ಕೆಯಾಗುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಬಯಲು ಸೀಮೆ ಪ್ರಾಧಿಕಾರದ ಅಧ್ಯಕ್ಷ ಜೀವನಮೂರ್ತಿ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್,  ಅಣ್ಣಪ್ಪ ಐರಣಿ, ಬಾತಿ ಚಂದ್ರಶೇಖರ್, ನಾಗರಾಜ್ ಕೊಂಡಜ್ಜಿ, ನಾಗರಾಜ್ ಹಾಗೂ ಇತರರು ಹಾಜರಿದ್ದರು.

error: Content is protected !!