ವಯಸ್ಕರಿಗೆ 150 ಮೈಕ್ರೋಗ್ರಾಂ, ಗರ್ಭಿಣಿಯರಿಗೆ 200 ಮೈಕ್ರೋಗ್ರಾಂ, ಮಕ್ಕಳಿಗೆ 120 ಮೈಕ್ರೋಗ್ರಾಂ ನಷ್ಟು ಅಯೋಡಿನ್‍ಯುಕ್ತ ಉಪ್ಪು ಬಳಸಬೇಕು. ಇದನ್ನು ನಾವು ನಮ್ಮ ಮನೆಯಲ್ಲಿಯೇ ಪರೀಕ್ಷಿಸಬಹುದು. ಮನೆಯಲ್ಲಿರುವ ಉಪ್ಪಿನ ಮೇಲೆ ಅಕ್ಕಿಗಂಜಿ ಅಥವಾ ನಿಂಬೆರಸ ಹಾಕಿದರೆ ನೀಲಿ ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಅಯೋಡಿನ್ ಅಂಶ ಇದೆ ಎಂದು ತಿಳಿಯಬೇಕು. ಇಲಾಖೆಯಿಂದಲೇ ಅಯೋಡಿನ್ ಕಿಟ್‍ನೀಡಿ ಪ್ರತಿ ಮನೆ ಮತ್ತು ಹಾಸ್ಟೆಲ್, ಅಂಗನವಾಡಿ ಕೇಂದ್ರಗಳಲ್ಲಿ ಇದನ್ನು ಪರೀಕ್ಷಿಸಲಾಗುತ್ತದೆ.
– ಡಾ. ಎಲ್.ಡಿ. ವೆಂಕಟೇಶ್, ತಾಲ್ಲೂಕು ಆರೋಗ್ಯಾಧಿಕಾರಿಗಳು, ದಾವಣಗೆರೆ.
ದಾವಣಗೆರೆ, ಡಿ.6- ಅಯೋಡಿನ್ ಒಂದು ಸೂಕ್ಷ್ಮ ಪೋಷಕಾಂಶವಾಗಿದ್ದು, ನಾವು ನಿತ್ಯ ಸೇವಿಸುವ ಆಹಾರದಲ್ಲಿ ಅತೀ ಮುಖ್ಯವಾಗಿ ದೇಹಕ್ಕೆ ಅವಶ್ಯಕವಾಗಿರುತ್ತದೆ. ಅಯೋಡಿನ್ ಕೊರತೆಯಿಂದ ಮಕ್ಕಳ ವಿಕಾಸಕ್ಕೆ ಅಡ್ಡಿಯಾಗುವು ದಲ್ಲದೆ, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ಎಚ್ಚರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಸ್ಥಳೀಯ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಿನ್ನೆ ಏರ್ಪಡಿಸಲಾಗಿದ್ದ ವಿಶ್ವ ಅಯೋಡಿನ್ ಸಪ್ತಾಹ ಮತ್ತು ಕೋವಿಡ್-19 ಲಸಿಕೆ ಕುರಿತ ತಾಲ್ಲೂಕು ಮಟ್ಟದ ಟಾಸ್ಕ್‍ಫೋರ್ಸ್ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಯೋಡಿನ್ ಒಂದು ಸೂಕ್ಷ್ಮ ಪೋಷಕಾಂಶವಾಗಿದ್ದು, ನಾವು ನಿತ್ಯ ಸೇವಿಸುವ ಆಹಾರದಲ್ಲಿ ಅತೀ ಮುಖ್ಯವಾಗಿ ದೇಹಕ್ಕೆ ಬೇಕು. ಹಾಲು, ಸಮುದ್ರದ ಮೀನು, ಅಯೋಡಿನ್ ಇರುವಂತಹ ತರಕಾರಿಗಳನ್ನು ತಿನ್ನುವುದರಿಂದ ಈ ಪೋಷಕಾಂಶ ಪಡೆಯಬಹುದು. ಅಯೋಡಿನ್ ಕೊರತೆಯಾದರೆ ಮಹಿಳೆಯರಲ್ಲಿ ಪದೆ ಪದೇ ಗರ್ಭಪಾತವಾಗುತ್ತದೆ. ನಿಶಕ್ತಿ, ಬುದ್ಧಿ ಮಾಂಧ್ಯತೆ, ಕಿವುಡುತನ, ಮಂಕುತನದಿಂದ ಬಳಲುತ್ತಾರೆ. ಸಾಮಾನ್ಯವಾಗಿ ಅಯೋಡಿನ್ ಕೊರತೆಯಿಂದ ಉಂಟಾಗುವ ಸಮಸ್ಯೆಗಳು ಮಕ್ಕಳು, ವಯಸ್ಕರು, ಗರ್ಭಿಯರಿಗೆ ಬರುತ್ತದೆ. ಗಳಗಂಡ ರೋಗವು ಮನುಷ್ಯನಿಗೆ ಕುತ್ತಿಗೆ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಅಯೋಡಿನ್‍ಯುಕ್ತ ಉಪ್ಪಿನಲ್ಲಿ 15 ರಿಂದ 30 ಪಿಪಿಎಂ ಪ್ರಮಾಣದಷ್ಟು ಅಯೋಡಿನ್ ಇರಬೇಕು ಎಂದವರು ತಿಳಿಸಿದರು.
ಕೋವಿಡ್-19 ಲಸಿಕೆ ಕಾರ್ಯಕ್ರಮವು ಪ್ರಥಮ ಹಂತದಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಯವರಿಗೆ ನೀಡಲಾಗುತ್ತದೆ. ನಂತರದಲ್ಲಿ ಸಾರ್ವಜನಿಕರಿಗೆ ಕೋವಿಡ್ ಲಸಿಕೆಯನ್ನು ಶೀತಲ ಸರಪಳಿಯಲ್ಲಿ ಶೇಖರಣೆ ಮಾಡಿ ಇಡಲಾಗುತ್ತದೆ. ಈಗಾಗಲೇ ತಾಲ್ಲೂಕು ಮತ್ತು ಜಿಲ್ಲೆಯ ಬೇಡಿಕೆಯನ್ನು ರಾಜ್ಯ ಮಟ್ಟಕ್ಕೆ ಕಳುಹಿಸಿಕೊಡ ಲಾಗಿದೆ. ಅದರಂತೆ ದಾವಣಗೆರೆ ತಾಲ್ಲೂಕಿನ ಸರ್ಕಾರಿ 2095, ಖಾಸಗಿ 2121 ಡೋಸ್ ಬೇಕಾಗುತ್ತದೆ. ಅದರಂತೆ ಖಾಸಗಿ ಮತ್ತು ಸರ್ಕಾರಿ ಕರ್ತವ್ಯ ನಿರ್ವಹಿಸುವ ಆರೋಗ್ಯ ಸಿಬ್ಬಂದಿಯವರಿಗೂ, ಅಂಗನವಾಡಿ ಕಾರ್ಯಕರ್ತರಿಗೂ, ಆಶಾ ಕಾರ್ಯಕರ್ತರಿಗೂ ಹಾಗೂ ಸಾರ್ವಜನಿಕರಿಗೂ ಕ್ರಮವಾಗಿ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಇಂದಿನಿಂದ ಇದೇ ದಿನಾಂಕ 30ರ ವರೆಗೆ ಸಕ್ರಿಯ ಕ್ಷಯ ರೋಗ ಪತ್ತೆ ಹಚ್ಚುವ ಹಾಗೂ ಚಿಕಿತ್ಸೆ ಆಂದೋಲನಾ ಕಾರ್ಯಕ್ರಮ ನಡೆಯುತ್ತಿದ್ದು, 2025 ರೊಳಗೆ ನಾವು ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಪ್ರತಿಯೊಬ್ಬ ನಾಗರಿಕರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಡಾ. ವೆಂಕಟೇಶ್ ತಿಳಿಸಿದರು.
ತಹಶೀಲ್ದಾರ್ ಬಿ.ಎನ್. ಗಿರೀಶ್ ಮಾತ ನಾಡಿ, ಯಾವುದೇ ಕಾರಣಕ್ಕೂ ಬಂಡಿಗಳಲ್ಲಿ ಬರುವ, ಚೀಲದಲ್ಲಿ ಮಾರುವಂತಹ ಅಗ್ಗದ ಉಪ್ಪನ್ನು ಬಳಸಬಾರದು, ಅಯೋಡೈಸ್ಡ್ ಸಾಲ್ಟ್ ಎಂದು ನಮೂದಿಸಿದ ಸೂರ್ಯನ ಮಾರ್ಕ್ ಇರುವಂತಹ ಉಪ್ಪನ್ನು ಮತ್ತು ತರಕಾರಿಗಳನ್ನು ಅಂಗನವಾಡಿ ಕೇಂದ್ರ ಮತ್ತು ಹಾಸ್ಟೆಲ್‍ಗಳಲ್ಲಿ ಉಪಯೋಗಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಹೆಚ್. ಉಮಾಪತಿ, ಆಹಾರ ಇಲಾಖೆ ಉಪನಿರ್ದೇಶಕ ಪ್ರಕಾಶ್, ತಾಲ್ಲೂಕು ಹಿರಿಯ ಪುರುಷ ಆರೋಗ್ಯ ಸಹಾಯಕ ವೆಂಕಟಾಚಲ ಕುಮಾರ್, ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕ ಪಿ.ವಿ ರವಿ ಮತ್ತಿತರರು ಉಪಸ್ಥಿತರಿದ್ದರು.