ದಾವಣಗೆರೆ, ಡಿ.6- ಮಹಾನಗರ ಪಾಲಿಕೆಯಿಂದ ನಡೆಸುತ್ತಿರುವ ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ನಿಷ್ಪ್ರಯೋ ಜಕ ಕಾರ್ಯಕ್ರಮವಾಗಿದೆ ಎಂದು ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮೇಯರ್ ಹಾಗೂ ಸದಸ್ಯರು, ಅಧಿಕಾರಿಗಳು ಭೇಟಿ ಮಾಡುವ ವೇಳೆ ಪ್ರತಿ ವಾರ್ಡ್‌ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಹೇಳಿದ್ದೆವು. ಆದರೆ ಯಾವ ಅಭಿವೃದ್ಧಿಯೂ ನಡೆಯುತ್ತಿಲ್ಲ ಎಂದರು.
ಮುಖ್ಯಮಂತ್ರಿಗಳಿಂದ ಅನುದಾನ ತರುತ್ತೇವೆ. ಸಾಧ್ಯವಾಗದಿದ್ದರೆ ಪಾಲಿಕೆ ಆದಾಯದಲ್ಲಿನ ಹಣದಲ್ಲಿ ಪ್ರತಿ ವಾರ್ಡ್‌ಗೆ 40 ಲಕ್ಷ ರೂ.ಗಳ ಅನುದಾನ ನೀಡುವುದಾಗಿ ಮೇಯರ್ ಹೇಳಿದ್ದರು. ಆದರೆ ಯಾವ ಅನುದಾನವನ್ನೂ ನೀಡಿಲ್ಲ.
ಕಟ್ಟಡ ಪರವಾನಗಿ, ಟ್ರೇಡ್ ಲೈಸೆನ್ಸ್, ಖಾತೆ ಬದಲಾವಣೆ ಕಾರ್ಯಗಳು ಆನ್‌ಲೈನ್ ಆಗಿವೆ. ಅಲ್ಲದೆ ಸರ್ವರ್ ಸಮಸ್ಯೆಯನ್ನೂ ಪಾಲಿಕೆ ಎದುರಿಸುತ್ತಿದೆ. ಕೇವಲ 20 ರಿಂದ 30 ಸಾವಿರ ರೂ. ಕಂದಾಯ ವಸೂಲಿ ಮಾಡಲು ಅಷ್ಟೊಂದು ಖರ್ಚು ಮಾಡಿ ಕಾರ್ಯಕ್ರಮ ನಡೆಸುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ವಾರ್ಡುಗಳಿಗೆ ಭೇಟಿ ನೀಡಲಿ. ಇಲ್ಲದಿದ್ದರೆ ಕಾಂಗ್ರೆಸ್ ವಾರ್ಡುಗಳಿಗೆ ಬಹಿಷ್ಕಾರ ಹಾಕುತ್ತೇವೆ ಎಂದರು.
ಮನೆ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಪಾಲಿಕೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸುವು ದರಿಂದ ಪಾಲಿಕೆಯಲ್ಲಿ ಯಾರೂ ಕೇಳುವವರಿಲ್ಲವಾಗಿದೆ. ಇದೇ ರೀತಿ ಮುಂದುವರೆದರೆ ಪಾಲಿಕೆ ಗೇಟ್‌ಗೆ ಬೀಗ ಹಾಕಿ ಘೇರಾವ್ ಹಾಕುವ ಬಗ್ಗೆ ಚಿಂತಿಸಲಾಗುವುದು ಎಂದರು.
ಕಾರ್ಯಕ್ರಮದ ಹೆಸರಿನಲ್ಲಿ ಹಂಚುತ್ತಿರುವ ಕರಪತ್ರಗಳಲ್ಲಿ ಸ್ಮಾರ್ಟ್ ಸಿಟಿ ಹಾಗೂ ಜಲಸಿರಿ ಯೋಜನೆ ಬಿಜೆಪಿ ನಾಯಕರದ್ದು ಎಂಬಂತೆ ಬಿಂಬಿಸಲಾಗುತ್ತಿದೆ ಎಂದ ಅವರು, ಈ ಯೋಜನೆಗಳು ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಶ್ರಮದ ಫಲ. ಈ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ವಿಪಕ್ಷ ಸದಸ್ಯರಾದ ಮಂಜುನಾಥ ಗಡಿಗುಡಾಳ್, ಜೆ.ಡಿ. ಪ್ರಕಾಶ್, ಉದಯಕುಮಾರ್, ಜಾಕಿರ್ ಅಲಿ, ಮುಖಂಡರಾದ ಗಣೇಶ್ ಹುಲ್ಮನಿ, ಕೊಟ್ರಯ್ಯ, ಮಂಜುನಾಥ ಇಟ್ಟಿಗುಡಿ ಹಾಗೂ ಇತರರಿದ್ದರು.