ಉತ್ತಮ ಗುರಿ, ಕಠಿಣ ಸಾಧನೆ ಇದ್ದರೆ ಅತ್ಯುನ್ನತ ಸ್ಥಾನ ತಲುಪಬಹುದು

`ನಮ್ಮ ಮಕ್ಕಳ ಹಬ್ಬ’ ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾ|| ಗೀತಾ ಪ್ರತಿಪಾದನೆ

ದಾವಣಗೆರೆ, ಡಿ.3- ಉತ್ತಮ ಗುರಿಯೊಂದಿಗೆ ಪ್ರತಿ ನಿತ್ಯ ಶ್ರದ್ಧೆ, ಕಾರ್ಯತತ್ಪರತೆಯಿಂದ ಕಠಿಣ ಸಾಧನೆ ಮಾಡಿ ದಾಗ ಅತ್ಯುನ್ನತ ಸ್ಥಾನ ತಲುಪಬಹುದು ಎಂದು ಸರ್ಕಾರಿ ಬಾಲಮಂದಿರದ ಮಕ್ಕಳಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ. ಗೀತಾ ಪ್ರತಿಪಾದಿಸಿದರು.

ನಗರದ ಬಾಲಕರ ಸರ್ಕಾರಿ ಬಾಲ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಮಕ್ಕಳ ರಕ್ಷಣಾ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸರ್ಕಾರಿ ಮಕ್ಕಳ ಪಾಲನಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಮ್ಮ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯರು ಸಹ ಅಸಾಮಾನ್ಯ ಸಾಧನೆ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಆದ್ದರಿಂದ ನೀವು ಸಹ ಯಾವುದೇ ಹಿಂಜರಿಕೆಗೆ ಒಳಗಾಗದೇ ಅತ್ಯುನ್ನತ ಸ್ಥಾನ ಪಡೆಯಲು ಉತ್ತಮ ಗುರಿ, ಕಠಿಣ ಸಾಧನೆ ಮಾಡಬೇಕು. ಸಮಯವನ್ನು ವ್ಯರ್ಥ ಮಾಡಬಾರದು. ತ್ಯಾಗ, ಸದ್ಗುಣಗಳನ್ನು ಸಹ ಬೆಳೆಸಿಕೊಳ್ಳಬೇಕೆಂದರು. 

ಯುದ್ಧ ಕಾಲೇ ಶಸ್ತ್ರಾಭ್ಯಾಸ ಎನ್ನುವಂತೆ ಪರೀಕ್ಷೆ ಸಮಯದಲ್ಲಿ ಓದುವುದರ ಬದಲಿಗೆ ಪೂರ್ವ ಸಿದ್ಧತೆಯಾಗಿ ಕಲಿಸುವ ಪಾಠವನ್ನು ಸಮಾಧಾನ ಚಿತ್ತದಿಂದ ಶ್ರವಣ ಎಂದರೆ ಸರಿಯಾಗಿ ಆಲಿಸುವ, ಕಲಿತದ್ದನ್ನು ಮನನ ಮಾಡಬೇಕು ಮತ್ತು ನೆನಪಿನಲ್ಲಿ ಉಳಿಯುವಂತೆ ನಿದಿಧ್ಯಾಸನ ಮಾಡಿದಾಗ ಪರೀಕ್ಷೆಯನ್ನು ಸುಲಭವಾಗಿ ಎದುರಿಸಿ ಪ್ರತಿಭಾನ್ವಿತರಾಗಿ ಹೊರಹೊಮ್ಮಬಹುದಾಗಿದೆ ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಇ. ಚಂದ್ರಕಲಾ ಮಾತನಾಡಿ, ಉನ್ನತ ಸ್ಥಾನಕ್ಕೆ ಬರಬೇಕಾದರೆ ಪೋಷಕರ ಪ್ರೋತ್ಸಾಹ, ಶಿಕ್ಷಕರು ನೀಡುವ ಜಾನಾರ್ಜನೆ ಜೊತೆಗೆ ಒಳ್ಳೆಯ ಸ್ನೇಹಿತನ ಪಾತ್ರವೂ ಮುಖ್ಯ. ಆದ್ದರಿಂದ ಬಾಲ ಮಂದಿರದಿಂದ ಶಿಕ್ಷಣ ಕಲಿಕೆಗೆ ಹೊರ ಹೋದಾಗ ಉತ್ತಮ ಸ್ನೇಹಿತರ ಸಹವಾಸ ಇರಲಿ. ಸ್ನೇಹಿತರಿಂದ ಅಪಾಯವೂ ಇರುವ ಕಾರಣ, ಸ್ನೇಹಿತರ ಬಗ್ಗೆ ಅರಿವಿರಲಿ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರೂ, ಬಾಲ ನ್ಯಾಯ ಮಂಡಳಿ ಅಧ್ಯಕ್ಷರೂ ಆದ ಪ್ರಭು ಎನ್. ಬಡಿಗೇರ್ ಮಾತ ನಾಡಿ, ಮಕ್ಕಳೇ ಈ ದೇಶದ ಆಸ್ತಿಯಾಗಿದ್ದು, ಅವರಿಗೆ ಈ ಸಮಯದಲ್ಲೇ ಉತ್ತಮ ವಿಚಾರಗಳನ್ನು ತಿಳಿಸಬೇಕು ಎಂದರ ಲ್ಲದೇ, ಮುಂದೆ ದೊಡ್ಡ ಗುರಿ, ಹಿಂದೆ ಗುರುವಿನ ಸೂಕ್ತ ಮಾರ್ಗದರ್ಶನವಿದ್ದಾಗ ಉತ್ತಮ ಸಾಧನೆ ಸಾಧ್ಯ. ಮನಸ್ಸನ್ನು ಬೇರೆಡೆ ವಾಲಿಸದೇ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳ ಬೇಕು. ಬಾಲಮಂದಿರದಲ್ಲಿನ ಉತ್ತಮ ಕಲಿಕಾ ವಾತಾವರಣ ವನ್ನು ಮಕ್ಕಳು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಆಶಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್ ಮಾತನಾಡಿ, ಬಾಲಮಂದಿರದಲ್ಲಿನ ಮಕ್ಕಳಿಗೆ ಪೋಷಕರ ಕೊರತೆ ಕಾಡದಂತೆ ನೋಡಿಕೊಳ್ಳಬೇಕು. ಅವರಲ್ಲಿ ಧನಾತ್ಮಕ ಭಾವನೆ ಬೆಳೆಸಬೇಕು. ಬಿಳಿ ಹಾಳೆಯಂತಿರುವ ಮಕ್ಕಳ ಭವಿಷ್ಯವನ್ನು ರೂಪಿಸುವ, ಅವರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ ಸಮಾಜಕ್ಕೆ ಕೊಡುಗೆ ನೀಡುವ ಮಹಾ ಚೇತನವಾಗಿ ಹೊರಹೊಮ್ಮುವರು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಹೆಚ್. ವಿಜಯ್ ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವೈ. ರಾಮಾನಾಯ್ಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಸಿ. ಬಸವರಾಜಯ್ಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೆಕ್ಕಿಗರಾದ ಹೆಚ್.ಎನ್. ಶೃತಿ ಸೇರಿದಂತೆ ಇತರರಿದ್ದರು.

error: Content is protected !!