ಜಾತಿ ಭೇದ ಮರೆತು ಒಟ್ಟಾಗಿ ಬಾಳುವ ಸಂದೇಶ ಸಾರಿದ ಕನಕದಾಸರು ಶ್ರೇಷ್ಠರು

ಕನಕದಾಸ ಜಯಂತಿಯಲ್ಲಿ ಮೇಯರ್ ಅಜಯಕುಮಾರ್ ಬಣ್ಣನೆ

ದಾವಣಗೆರೆ, ಡಿ.3- ದಾಸಶ್ರೇಷ್ಠ ಕನಕದಾಸರು 16ನೇ ಶತಮಾನದಲ್ಲಿ ಕೀರ್ತನೆ ಮತ್ತು ಸಾಹಿತ್ಯದ ಮೂಲಕ ಜಾತಿ ಭೇದ ಮರೆತು ಒಟ್ಟಾಗಿ ಬಾಳಬೇಕೆಂದು ಸಂದೇಶ ಸಾರಿದ ಶ್ರೇಷ್ಠ ದಾಸರು ಎಂದು ನಗರ ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್ ತಿಳಿಸಿದರು.

ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ  ದಾಸಶ್ರೇಷ್ಠ ಕನಕದಾಸರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಿಲ್ಲಾ ಹೋರಾಟ ಸಮಿತಿಯಿಂದ ಇಂದು ಏರ್ಪಡಿಸಿದ್ದ 533ನೇ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನಕದಾಸರು ನೂರಾರು ರಚನೆಗಳ ಮುಖೇನ ಜನಮನ ಮತ್ತು ಜೀವನನ್ನು ತಿದ್ದುವ ಕಾಯಕ ಮಾಡಿ, ಅತಿ ದೊಡ್ಡ ಸಾಧನೆ ಮಾಡಿದ್ದಾರೆ. ಅವರನ್ನು ಕರ್ನಾಟಕ ರಾಜ್ಯದ ಅಶ್ವಿನಿ ದೇವತೆ ಎಂದು ಕರೆಯಲಾಗುತ್ತಿತ್ತು. ಈಗಲೂ ಅವರನ್ನು ದೈವ ಸ್ವರೂಪರನ್ನಾಗಿ ಪೂಜಿಸುತ್ತಿದ್ದೇವೆ ಎಂದು ಸ್ಮರಿಸಿದರು. ಕುಲ ಕುಲವೆಂದು ಹೊಡದಾಡದೇ ಒಗ್ಗಟ್ಟಿನಿಂದ ಬಾಳ ಬೇಕೆಂದು ಅವರು 16ನೇ ಶತಮಾನದಲ್ಲೇ ಕೀರ್ತನೆ ಮತ್ತು ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿ ಅರಿವು ಮೂಡಿಸಿದ್ದರು. ಹೀಗಾಗಿ ಕನಕ ದಾಸರು ಸೇರಿದಂತೆ ಇತರೆ ಮಹನೀಯರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವರಿಗೆ ನಾವು ನೀಡುವ ಗೌರವವಾಗಿದೆ ಎಂದು ತಿಳಿಸಿದರು.

ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಕನಕ ದಾಸರನ್ನು  ಕೇವಲ ಜಯಂತಿಗೆ ಅಷ್ಟೇ ಅವರನ್ನು ಸ್ಮರಿಸದೇ ಅವರ ಆದರ್ಶಗಳು, ಕೀರ್ತನೆ, ಸಾಹಿತ್ಯಗಳ ಸಂದೇಶದ ಆಳವನ್ನು ಅರಿತು ಜೀವನದಲ್ಲಿ ಪಾಲಿಸಿದಾಗ ನಾವೂ ಸಹ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.

ನಿವೃತ್ತ ಪೊಲೀಸ್ ಅಧಿಕಾರಿ ದೇವೇಂದ್ರಪ್ಪ ಕುಣೆಬೆಳೆಕೆರೆ,  ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಸತೀಶ್ ಮಾತನಾಡಿದರು.                                             

ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ಸದಸ್ಯರಾದ ಜೆ.ಡಿ. ಪ್ರಕಾಶ್, ಆಶಾ ಉಮೇಶ್, ಶ್ವೇತಾ, ಸುಧಾ ಮಂಜುನಾಥ್, ಗೀತಾ ದಿಳ್ಯಪ್ಪ, ಹೆಚ್.ಸಿ.ಜಯಮ್ಮ, ತಾಲ್ಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ಅಣಬೇರು ಶಿವಮೂರ್ತಿ, ಯೋಧ ಎಚ್.ಆರ್. ಪರಶುರಾಮ್, ಕರವೇ ಜಿಲ್ಲಾಧ್ಯಕ್ಷ ಜಮ್ನಹಳ್ಳಿ ನಾಗರಾಜ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಹೋರಾಟ ಸಮಿತಿ ಅಧ್ಯಕ್ಷ ಪಿ.ಜೆ. ರಮೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಹದಡಿ ನಿಂಗಪ್ಪ, ಮಾಜಿ ಮೇಯರ್ ಗುರುನಾಥ್, ಎಲ್.ಡಿ ಗೋಣೆಪ್ಪ, ನಗರಸಭೆ ಮಾಜಿ ಅಧ್ಯಕ್ಷ ನಿಂಗಪ್ಪ, ಗೌಡ್ರು ಚನ್ನಬಸಪ್ಪ, ವೆಂಕಟೇಶ್ ಮಾಯಕೊಂಡ, ಹೇಮಂತ ಕುಮಾರ್, ಚೆಲುವಪ್ಪ, ಜಿ.ಟಿ. ಪರಮೇಶಿ, ಮಂಜುನಾಥ್ ಇಟ್ಟಿಗುಡಿ ಸೇರಿದಂತೆ ಇತರರು ಇದ್ದರು.

error: Content is protected !!