ಬೇಡ ಜಂಗಮ ಮೀಸಲಾತಿಗೆ ಅಡ್ಡಿ: ಆಕ್ರೋಶ

ದಾವಣಗೆರೆ, ನ. 29 – ಬೇಡ ಜಂಗಮ ಸಮುದಾಯದ ಹಕ್ಕುಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವರಿಕೆ ಮಾಡಿಕೊಡಲು ಸಂಘಟಿತ ಹೋರಾಟ ನಡೆಸುವ ಜೊತೆಗೆ, ಸಮುದಾಯದವರಿಗೆ ಎಸ್.ಸಿ. ಮೀಸಲಾತಿಯ ಪ್ರಮಾಣ ಪತ್ರ ದೊರಕಿಸಿ ಕೊಡಲು ಕಾನೂನು ಹೋರಾಟ ನಡೆಸಲು ವಕೀಲರ ಮೂಲಕ ವ್ಯವಸ್ಥೆ ಮಾಡಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಮತ್ತು ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಡಿ ಹಿರೇಮಠ್ ತಿಳಿಸಿದ್ದಾರೆ.

ನಗರದ ಸದ್ಯೋಜಾತ ಹಿರೇಮಠದ ಆವರಣ ದಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತ ಜಂಗಮ ಮಹಾಸಭಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಅಖಿಲ ಭಾರತ ಜಂಗಮ ಮಹಾಸಭಾ ವತಿಯಿಂದ ಮುಂದಿನ ದಿನಗಳಲ್ಲಿ  ಬಸವಕಲ್ಯಾಣ ದಿಂದ ಹೋರಾಟ ಆರಂಭಿಸಲಾಗುವುದು. ಮುಂದಿನ ಒಂದು ತಿಂಗಳಲ್ಲಿ ಸಮುದಾಯಕ್ಕೆ ಎಸ್.ಸಿ. ಮೀಸಲಾತಿ ಒದಗಿಸಲು ಕಾರಣವಾಗಿ ರುವ ದಾಖಲೆ, ಪುರಾವೆ, ಸರ್ಕಾರದ ಸುತ್ತೋಲೆ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಒಳಗೊಂಡ ಪುಸ್ತಕವನ್ನು ಪ್ರಕಟಿಸಿ ಸಮುದಾಯದ ಪ್ರತಿಯೊಬ್ಬರ ಮನೆಗೆ ತಲುಪಿಸಲಾಗುವುದು ಎಂದವರು ಹೇಳಿದರು.

ನಾವೇ ಬೇಡ ಜಂಗಮರು ಎಂದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗಳು ತೀರ್ಪು ನೀಡಿವೆ. ಆದರೂ, ಸಮದಾಯ ಮೀಸಲಾತಿ ಪಡೆಯಲು ಅಡ್ಡಿಪಡಿಸಲಾಗುತ್ತಿದೆ. ಇದರ ವಿರುದ್ಧ ಸಮಾಜ ಹೋರಾಟ ನಡೆಸಲಿದೆ ಎಂದು ಹಿರೇಮಠ್ ತಿಳಿಸಿದರು.

ಶತಮಾನದ ಹಿಂದಿನಿಂದಲೂ ಬೇಡ ಜಂಗಮರು ಎಸ್.ಸಿ. ಎಂಬುದಕ್ಕೆ ಅಗತ್ಯ ದಾಖಲೆ ಗಳಿವೆ. ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ದುರ್ಬಲವಾಗಿರುವವರನ್ನು ಎತ್ತಿ ಹಿಡಿಯುವ ಕ್ರಿಯೆ ಹಾಗೂ ಕಾನೂನು ಚೌಕಟ್ಟು ಬ್ರಿಟಿಷರ ಅವಧಿಯಲ್ಲೇ ಇತ್ತು ಎಂದವರು ಹೇಳಿದರು.

ಪರಿಶಿಷ್ಟ ಜಾತಿಯ ಮೀಸಲಾತಿ ಪಡೆಯುವ ಸಲುವಾಗಿ ಸಮಾಜದ ವಕೀಲರ ಕೂಟ ರಚಿಸಲಾಗುವುದು. ಇವರು ಕಾನೂನು ಹೋರಾಟಕ್ಕೆ ನೆರವಾಗಲಿದ್ದಾರೆ ಎಂದು ಹಿರೇಮಠ್ ಇದೇ ಸಂದರ್ಭದಲ್ಲಿ ಹೇಳಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳದ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಳೆದ ಐದು ವರ್ಷಗಳಿಂದ ತಮ್ಮ ಮಠದಿಂದ ದೀಕ್ಷೆ ಪಡೆದ ನೂರಾರು ಜನರಿಗೆ §ಬೇಡ ಜಂಗಮ ಅರ್ಹತಾ ಪತ್ರ¬ ಕೊಡುತ್ತಿದ್ದೇವೆ. ಇದು ಬೇಡ ಜಂಗಮರನ್ನು ಗುರುತಿಸಲು ನೆರವಾಗುತ್ತಿದೆ. ಇದೇ ರೀತಿ ಬೇರೆ ಮಠಗಳೂ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ನಮ್ಮ ಸಮುದಾಯದವರು ಬೇರೆಯವರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದೇವೆ ಎಂಬ ಗ್ರಹಿಕೆ ಬೇಡ. ಬ್ರಿಟಿಷರ ಕಾಲದಲ್ಲೇ ‘ಧಾರ್ಮಿಕ ಭಿಕ್ಷಾಟಕರು’ ಎಂಬುದನ್ನು ಗುರುತಿಸಲಾಗಿತ್ತು. ಕೇಳಿದರೆ ಕನಿಷ್ಠ ಆಗುತ್ತೇವೆ ಎಂಬ ಭಾವನೆಯಿಂದ ನಮ್ಮ ಹಿರಿಯರು ಸರ್ಕಾರದ ಬಳಿ ಈ ಸೌಲಭ್ಯ ಕೇಳಿರಲಿಲ್ಲ. ಅಂಬೇಡ್ಕರ್ ಅವರ ಸಂವಿಧಾನದಲ್ಲಿರುವುದನ್ನೇ ನಾವು ಕೇಳುತ್ತಿದ್ದೇವೆ ಎಂದು ತಿಳಿಸಿದರು.

ವೇದಿಕೆಯ ಮೇಲೆ ಬಳ್ಳಾರಿ ಕಮ್ಮರ ಜೇಡ ಮಠದ ಶ್ರೀ ಕಲ್ಯಾಣಸ್ವಾಮೀಜಿ, ಜಗಳೂರು ಮುಷ್ಟೂರಿನ ಓಂಕಾರೇಶ್ವರ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಭೃಂಗೀಮಠ, ವಿಶ್ವನಾಥ ಸ್ವಾಮಿ, ಮಲ್ಲಿಕಾರ್ಜುನ ಶಾಸ್ತ್ರಿ, ಹೆಚ್.ಎಸ್ ವೀರಯ್ಯ ಸ್ವಾಮಿ, ಉಳುವಯ್ಯ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಅವರ §ಬೇಡ ಜಂಗಮರ ಕೂಗು¬ ಎಂಬ ಧ್ವನಿಸುರುಳಿಯನ್ನು ಬಿಡುಗಡೆ ಮಾಡಲಾಯಿತು.

ದುರ್ಗಶ್ರೀ ಪ್ರಾರ್ತಿಸಿದರೆ, ವಿಶ್ವ ಹಿರೇಮಠ ಸ್ವಾಗತಿಸಿದರು.

error: Content is protected !!