ದಾವಣಗೆರೆ, ನ.29- ರಾಜ್ಯದಲ್ಲಿ ಸ್ಪಷ್ಟ ಬಹುಮತ ಸಾಧಿಸಲು ಹಾಗೂ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಅಧಿಕಾರ ಕಾಣಲು ಬಿಜೆಪಿ ಪಕ್ಷಕ್ಕೆ ಮುಂಬರುವ ಗ್ರಾಮ ಪಂಚಾ ಯತಿ ಚುನಾವಣೆಯೇ ಅಡಿಪಾಯವಾಗ ಬೇಕಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು. ಅವರು, ಇಂದು ನಗರದ ದೇವರಾಜ್ ಅರಸ್ ಬಡಾವಣೆಯಲ್ಲಿ ರುವ ಅಂಬಾಭವಾನಿ ಕಲ್ಯಾಣ ಮಂಟಪ ದಲ್ಲಿ ಜಿಲ್ಲಾ ಬಿಜೆಪಿ ಪಕ್ಷದ ದಾವಣಗೆರೆ ದಕ್ಷಿಣ ಮಂಡಲದ ವತಿಯಿಂದ ಹಮ್ಮಿ ಕೊಂಡಿದ್ದ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರದಲ್ಲಿ ಸ್ಪಷ್ಟ ಬಹುಮತ ದೊಂದಿಗೆ ಪ್ರಧಾನಿ ಮೋದಿ ಅವರು ಜನಪರ ಆಡಳಿತ ನೀಡುತ್ತಿದ್ದು, ಅಧಿಕಾರಕ್ಕೆ ಬಂದಾಗಿನಿಂದ ಜನಪರ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸುತ್ತಾ ಹಿಡಿದ ಕೆಲಸವನ್ನು ಸಾಧಿಸುತ್ತಿದ್ದಾರೆ. ರಾಜ್ಯದಲ್ಲಿ ಇನ್ನೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಈ ಬಾರಿಯೂ ಸಹ ಚುನಾವಣೆಯಲ್ಲಿ ಬಹುಮತ ಸಿಗಲಿಲ್ಲ. ಪಕ್ಷದಿಂದ 10 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ನಮ್ಮೆಲ್ಲಾ ಶಾಸಕರು ಮಂತ್ರಿಗಳಾಗುತ್ತಿದ್ದರು. ಮುಂದಿನ ದಿನಗಳಲ್ಲಿ ಕನಿಷ್ಠ 8 ಕ್ಷೇತ್ರಗಳನ್ನಾದರೂ ಗೆಲ್ಲಬೇಕೆಂಬುದೇ ನಮ್ಮ ಗುರಿ. ಈ ಬಾರಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಪಕ್ಷದ ತೆಕ್ಕೆಗೆ ಬಿದ್ದಿದ್ದು, ದಕ್ಷಿಣ ಕ್ಷೇತ್ರದಲ್ಲಿ ಅಧಿಕಾರ ಕಾಣುವಂತಾಗಬೇಕು. ಇವುಗಳಿಗೆಲ್ಲಾ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿಗಳಲ್ಲಿ ಬಿಜೆಪಿ ಪಕ್ಷವು ಅಧಿಕಾರ ಹಿಡಿಯುವಂತಾಗಬೇಕಿದ್ದು, ಇದಕ್ಕೆ ಬಿಜೆಪಿ ಸಾರಥ್ಯದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಾಯಕರ ಸಾಧನೆಗಳನ್ನು ಗ್ರಾಮೀಣ ಭಾಗದಲ್ಲಿ ಮುಟ್ಟಿಸಿ ಜನರ ಬಲ ಪಡೆಯುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕೆಂದರು.
ಬೂತ್ ಮಟ್ಟದಲ್ಲಿ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಮಾಡುವ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ. ಪ್ರಶಿಕ್ಷಣ ವರ್ಗವು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಬೆಳೆದಿದೆ. ಪ್ರಶಿಕ್ಷಣ ವರ್ಗವನ್ನು ಗ್ರಾಮೀಣ ಭಾಗದಲ್ಲಿ ಬೆಳೆಸುವ ನಿಟ್ಟಿನಲ್ಲಿ ವಿಶೇಷವಾಗಿ ಪ್ರತಿಯೊಂದು ಬೂತ್ ಮಟ್ಟದಲ್ಲಿ ಹಮ್ಮಿಕೊಂಡು ಪಕ್ಷದ ಕಾರ್ಯಕರ್ತರಿಗೆ ಪಕ್ಷದ ಸಿದ್ಧಾಂತ, ಸಾಧನೆ, ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ, ರಾಜ್ಯ ಸರ್ಕಾರದ ಸಾಧನೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಾಧನೆಗಳನ್ನು ತಿಳಿಸಿ, ಅದನ್ನು ಮನೆ ಮನೆಗೂ ತೆರಳಿ ಜನರಿಗೆ ಅದರ ಬಗ್ಗೆ ಅರಿವು ಮೂಡಿಸುವ ಮುಖೇನ ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಿ ಅಧಿಕಾರಕ್ಕೆ ತರುವ ಕೆಲಸವೇ ಇದರ ಉದ್ದೇಶವಾಗಿದೆ. ಇದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಮೋದಿಯವರ ಆಸೆಯಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಗ್ರಾಮ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ಬಿಜೆಪಿ ಪಕ್ಷವು ಅಧಿಕಾರ ಕಾಣಲು ಸಾಧ್ಯವಾಗಿಲ್ಲ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಸಹ ಪ್ರಶಿಕ್ಷಣ ವರ್ಗದ ಮುಖೇನ ಜನರಿಗೆ ಪಕ್ಷದ ಜನಪರ ಆಡಳಿತ, ಯೋಜನೆಗಳು ಮತ್ತು ನಾಯಕರ ಸಾಧನೆಗಳನ್್ನು ಮನವರಿಕೆ ಮಾಡಿ ಪ್ರತೀ ತಾಲ್ಲೂಕು ಪಂಚಾಯತಿ ಗ್ರಾಮ ಪಂಚಾಯಿತಿಗಳಲ್ಲೂ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರತಿಜ್ಞೆ, ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರಲ್ಲದೇ, ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೇ ಬೆನ್ನೆಲುಬಾಗಿದ್ದು, ಕಾರ್ಯಕರ್ತರು ಮನಸ್ಸು ಮಾಡಿದರೆ ಪಕ್ಷದ ಬಲವರ್ಧನೆ ಸಾಧ್ಯವಾಗಲಿದೆ ಎಂದರು.
ಗಾಂಧೀಜಿ, ಅಟಲ್ ಜೀ ಅವರ ಕನಸಿನಂತೆ ಗ್ರಾಮ ಸ್ವರಾಜ್ಯದ ಕನಸ್ಸು ಮೋದಿ ಜಿ ಅವರದ್ದಾಗಿದೆ. ಅದಕ್ಕೆ ಸುದಿನ ಈಗ ಬಂದಿದೆ ಎಂದು ಕಾರ್ಯಕರ್ತರಿಗೆ ಮನವರಿಕೆ ಮಾಡಿದರು.
ನಗರ ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್ ಮಾತನಾಡಿ, ಪ್ರಶಿಕ್ಷಣ ವರ್ಗದ ತರಬೇತಿ ಸರಿಯಾಗಿ ಪಡೆದು ಗ್ರಾಮೀಣ ಭಾಗದಲ್ಲೂ ಪಕ್ಷವನ್ನು ಬಲಪಡಿಸಬೇಕು. ದಾವಣಗೆರೆಯ ಉತ್ತರ ವಿಧಾನಸಭಾ ಕ್ಷೇತ್ರದಂತೆ ದಕ್ಷಿಣ ಕ್ಷೇತ್ರದಲ್ಲೂ ಪಕ್ಷವನ್ನು ಗಟ್ಟಿಯಾಗಿ ನಿಲ್ಲಿಸಬೇಕು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ದಾವಣಗೆರೆ ಮಾಡೋಣವೆಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ಪಕ್ಷದ ಗುರಿ ಮತ್ತು ಸೇವೆ ಏನೆಂಬುದನ್ನು ತಿಳಿಸುವುದೇ ಈ ಪ್ರಶಿಕ್ಷಣ ವರ್ಗ. ಹಾಗಾಗಿ ಗಂಭೀರವಾಗಿ ತಿಳುವಳಿಕೆ ಮೂಡಿಸಿಕೊಂಡು ಜನರಿಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಆಡಳಿತದ ಬಗ್ಗೆ ತಿಳಿಸಬೇಕು. ಆ ಮುಖೇನ ಜನಾಕರ್ಷಿಸಿ ಗ್ರಾಮ ಪಂಚಾಯತಿಯಲ್ಲಿ ಅಧಿಕಾರ ಹಿಡಿಯಲು ಜನ ಬೆಂಬಲಿಸುವಂತಾಗಬೇಕು. ಸರಿಯಾಗಿ ತಿಳಿದುಕೊಂಡರೆ ಜನಸೇವೆ ಹೆಚ್ಚಾಗಿ ಮಾಡಲು ಸಾಧ್ಯವಾಗಲಿದೆ ಎಂದು ಕಾರ್ಯಕರ್ತರಿಗೆ ಹೇಳಿದರು.
ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಲಿಕೆ ಉಪಮೇಯರ್ ಸೌಮ್ಯ ನರೇಂದ್ರ, ಬಿಜೆಪಿ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಆನಂದ್ ರಾವ್ ಸಿಂಧೆ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತ್ ರಾವ್ ಜಾಧವ್, ಬಿ.ಎಸ್. ಜಗದೀಶ್, ಪಕ್ಷದ ಜಿಲ್ಲಾ ಕಾರ್ಯದರ್ಶಿ ಗೋಪಾಲ್ ರಾವ್ ಮಾನೆ, ಪಾಲಿಕೆ ಸದಸ್ಯರುಗಳಾದ ರಾಕೇಶ್ ಜಾಧವ್, ಎಸ್.ಟಿ. ವೀರೇಶ್, ಶಿವಪ್ರಕಾಶ್, ಎಲ್.ಡಿ. ಗೋಣೆಪ್ಪ, ಶಾಂತಕುಮಾರ್ ಸೋಗಿ, ಗಾಯತ್ರಿ ಬಾಯಿ, ರಾಕೇಶ್ ಭಜರಂಗಿ ಸೇರಿದಂತೆ ಬಿಜೆಪಿ ಪಾಲಿಕೆ ಸದಸ್ಯರು, ಪಕ್ಷದ ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು. ಮಂಡಲದ ಪ್ರಧಾನ ಕಾರ್ಯದರ್ಶಿ ರಾಜು ನೀಲಗುಂದ ಸ್ವಾಗತಿಸಿದರು.