ಹಿರಿಯ ಲೇಖಕಿ ಜಿ.ಎಸ್.ಸುಶೀಲಾದೇವಿ ಮೆಚ್ಚುಗೆ
ದಾವಣಗೆರೆ, ನ.27 – ಕನ್ನಡ ಸಾಹಿತ್ಯಕ್ಕೆ ಮಹಿಳೆಯರು ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಹೆಣ್ಣಲ್ಲವೇ ನಮ್ಮನ್ನೆಲ್ಲ ಪೆತ್ತ ತಾಯಿ, ಪೊರೆದ ಮಾತೆ, ಪೆಣ್ಣುಪೆಣ್ಣೆಂದೇಕೆ ಹೀಗಳೆಯುವರು, ಕಣ್ಣು ಕಾಣದ ಗಾವಿಲರು ಎಂದು ಹದಿಬದೆಯ ಧರ್ಮದ ಕೃತಿಕಾರ್ತಿ ಸಂಚಿ ಹೊನ್ನಮ್ಮ ಸ್ತ್ರೀಯ ಮಹತ್ವ ಕುರಿತು ಪುರುಷ ಪ್ರಧಾನ ಸಮಾಜವನ್ನು ಧೈರ್ಯವಾಗಿ ಪ್ರಶ್ನಿಸಿದ್ದಾಳೆ ಎಂದು ಹಿರಿಯ ಲೇಖಕರಾದ ಶ್ರೀಮತಿ ಜಿ. ಎಸ್. ಸುಶೀಲಾದೇವಿ ಆರ್. ರಾವ್ ತಿಳಿಸಿದರು.
ಗ್ರಂಥಸರಸ್ವತಿ ಪ್ರತಿಭಾರಂಗವು ನ.1 ರಿಂದ ನ.30 ರವರೆಗೆ ಹಮ್ಮಿಕೊಂಡಿರುವ ಕನ್ನಡಕಬ್ಬ ಉಗಾದಿಹಬ್ಬ ಕವಿಕಾವ್ಯ ಚಿಂತನಾ ಗೋಷ್ಠಿಯ 21ನೇಯ ದಿನದ ಅತಿಥಿಗಳಾಗಿ ಆಗಮಿಸಿದ್ದ ಸುಶೀಲಾದೇವಿ ಅವರು ಕನ್ನಡ ಮಹಿಳಾ ಸಾಹಿತಿಗಳ ಕುರಿತು ವಿವರಿಸಿದರು. ಇಮ್ಮಡಿ ಪುಲಕೇಶಿಯ ಮಗನ ಹೆಂಡತಿ ವಿಜಯಾಂಬಿಕೆ ವಿಜಯನಗರದ ಗಂಗಾಬಿಕೆಯ ಗಂಡ ಮಧುರೆಯಲ್ಲಿ ವಿಜಯವನ್ನು ಸಾಧಿಸಿದಾಗ ಮಧುರಾ ವಿಜಯ ಎಂದು ಸಂಸ್ಕೃತದಲ್ಲಿ ಬರೆದಿದ್ದಾಳೆ.
ರನ್ನ ಪಂಪರ ಕಾಲವಾದ ಹನ್ನೊಂದನೆಯ ಶತಮಾನದಲ್ಲಿ, ನಾಗಚಂದ್ರನ ಕಾಲದಲ್ಲಿ ಆತನ ಸಮಕಾಲೀನಳಾದ ಕವಯತ್ರಿ ಕಂತಿಯು ಎದುರಾಗುತ್ತಾಳೆ. ಆಕೆ ಆಸ್ಥಾನದಲ್ಲಿ ಪರಸ್ಪರ ಸವಾಲುಗಳನ್ನು ಹಾಕುತ್ತಾಳೆ. ಆಸ್ಥಾನಕವಿ ನಾಗಚಂದ್ರನು ‘ಸತ್ತವಳಂತೆ ಪೊಗುತ್ತಿರುವಳ್’ ಎಂದು ಹೇಳಿದ್ದಕ್ಕೆ ಕಂತಿಯು ‘ಅತ್ತೆ ಮಾವ ನಾದಿನಿಯರ ಕಾಟಕೆ ಬೇಸತ್ತು ತವರೂರಿಗೆ ಹೋಗುತ್ತಿರುವಳು’ ಎಂದು ಹೇಳಿ ಆಸ್ಥಾನದಲ್ಲಿ ದ್ದವರ ಮನ ಗೆಲ್ಲುತ್ತಾಳೆ ಎಂದು ಅವರು ತಿಳಿಸಿದರು.
ಹನ್ನೆರಡನೆಯ ಶತಮಾನದ ಮೊದಲ ವಚನಕಾರ್ತಿ ಅಕ್ಕಮಹಾದೇವಿಯು ಮಹಿಳಾ ಸಾಹಿತ್ಯದಲ್ಲಿ ವಜ್ರದಂತೆ ಪ್ರಜ್ವಲಿಸುತ್ತಾಳೆ. ಅಕ್ಕ ನೂರಾರು ವಚನಗಳನ್ನು ಹಾಗೂ ‘ಯೋಗಾಂಗ ತ್ರಿವಿಧಿ’ ಎಂಬ ಅದ್ಭುತ ತ್ರಿಪದಿಕಾವ್ಯ ಬರೆದಿದ್ದಾಳೆ. ಅಕ್ಕನ ಜೊತೆ ಮುಕ್ತಾಯಕ್ಕ, ಕಾಳವ್ವೆ, ಆಯ್ದಕ್ಕಿ ಲಕ್ಕಮ್ಮ, ಬಿಜ್ಜಳದೇವಿ ಮುಂತಾದವರು ವಚನಗಳನ್ನು ರಚಿಸಿದ್ದಾರೆ.
ಹದಿನೈದನೆಯ ಶತಮಾನದವರೆಗೆ ಯಾರನ್ನೂ ಕಾಣದ ಕನ್ನಡ ಸಾಹಿತ್ಯ ಸಂಚಿಯ ಹೊನ್ನಮ್ಮನ ‘ಹದಿಬದಿಯ ಧರ್ಮ’ ಕೃತಿಯನ್ನು ರಚಿಸಿರುವುದನ್ನು ಕಾಣಬಹುದು. ನಂತರದ ದಿನಮಾನಗಳಲ್ಲಿ ಬಂದ ಹೆಳವನಕಟ್ಟೆ ಗಿರಿಯಮ್ಮ ಚಂದ್ರಹಾಸ ಚರಿತೆ, ಸೀತಾಕಲ್ಯಾಣ, ಬ್ರಹ್ಮಕೊರವಂಜಿ ಎಂಬ ಭಕ್ತಿ ಕೃತಿಗಳನ್ನು ರಚಿಸಿದ್ದಾಳೆ. ಇನ್ನೋರ್ವ ಕವಯತ್ರಿ ಹೆಳವನಕಟ್ಟೆ ಗಿರಿಯಮ್ಮ ಅವಿದ್ಯಾವಂತೆಯಾದರೂ ಆಕೆ ಭಕ್ತಿ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಮೂಲ್ಯವಾದುದು.
ಭಾರತಕ್ಕೆ ಸ್ವಾತಂತ್ಯ್ರ ಬಂದ ನಂತರ ನೂರಾರು ಲೇಖಕಿಯರು ಕನ್ನಡ ಸಾಹಿತ್ಯ ಲೋಕದ ಮಡಿಲಿಗೆ ತಮ್ಮ ಅಪೂರ್ವ ಕಾಣಿಕೆ ನೀಡಿ ಶ್ರೀಮಂತ ಗೊಳಿಸಿದ್ದಾರೆ. ಹೆಣ್ಣು ಅಬಲೆ ಎನ್ನುತ್ತಿದ್ದ ಸಮಾಜಕ್ಕೆ ಹೆಣ್ಣಿನ ಸಬಲತೆಯ ಶಕ್ತಿಯ ರುಚಿಯನ್ನು ತೋರಿಸಿ ಕೊಟ್ಟಿದ್ದಾರೆ ಎಂದು ಜಿ.ಎಸ್.ಸುಶೀಲಾದೇವಿ ಆರ್.ರಾವ್ ಅವರು ಕೂಲಂಕುಶವಾಗಿ ವಿವರಿಸಿದರು.
ವಾಲ್ಮೀಕಿ, ಪಂಪ, ಬಸವಣ್ಣ, ರವೀಂದ್ರನಾಥ ಠಾಕೂರ್, ಕುವೆಂಪು, ಡಾ. ಎಸ್. ಬಾಲಸುಬ್ರಮಣ್ಯಂ, ವಿಶ್ವಸರಳದಿನಾಚರಣೆ, ಪುಸ್ತಕ ದಿನಾಚರಣೆಗಳ ಬಗ್ಗೆ ಅಕ್ಷರ ಮಾಂತ್ರಿಕ ಅಮೊಘಂಚೈತ್ರಕಾರಂಜಿ ರಚಿಸಿದ ಅಕ್ಷರಾಕ್ಷರ ಪದಪುಂಜದ ರಚನೆಗಳನ್ನು ಆರ್.ಶಿವಕುಮಾರ ಸ್ವಾಮಿ ಕುರ್ಕಿ ಭಾವಪೂರ್ಣವಾಗಿ ವಾಚಿಸಿದರು.