ಭಾಷೆ ತನ್ನಷ್ಟಕ್ಕೆ ತಾನು ಸಮರ್ಥ ಮತ್ತು ಸಮೃದ್ಧವಾಗಿದೆ. ಆದರೆ ಅದರಿಂದ ಕಲಿಯಬೇಕಾಗಿರುವುದು ನಾವು. ಭಾಷೆಯ ಬಗೆಗಿನ ಅರಿವು ಒಂದು ಸಂಸ್ಕೃತಿಯ ಅರಿವಿನ ಪ್ರಶ್ನೆಯಾಗಿದೆ. ನಮ್ಮ ದೇಶ, ನಮ್ಮ ನಾಡು ಬಹು ಸಂಸ್ಕೃತಿಯ ನೆಲೆವೀಡಾಗಿದೆ. ಅದಕ್ಕೆ ಕುವೆಂಪುರವರು ಹೇಳಿರುವುದು `ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ’. ಇಲ್ಲಿ ಎಲ್ಲ ಭಾಷಿಕರು ಭಾರತದ ಮಕ್ಕಳು. ಆ ಮಕ್ಕಳಲ್ಲಿ ಕರ್ನಾಟಕವು ಕೂಡ ಒಂದು. ಕರ್ನಾಟಕವನ್ನು ಅರಿವಿನ ಮೂಲಕವೇ ನಮ್ಮಲ್ಲಿ ಅಳವಡಿಸಿಕೊಳ್ಳಬೇಕಾದಂತಹ ಅವಶ್ಯಕತೆ ಇದೆ
– ಡಾ. ದಾದಾಪೀರ್ ನವಿಲೇಹಾಳ್
ದಾವಣಗೆರೆ, ನ.27- ಕನ್ನಡದ ಅಭಿ ಮಾನ ಅರಿವಿನ ಮೂಲಕ ಹುಟ್ಟಬೇಕು. ಅದು ಕೇವಲ ವಸ್ತುವಾಗಬಾರದು. ಹಾಡುವುದರಿಂ ದಾಗಲೀ ಅಥವಾ ಕನ್ನಡದ ಬಾವುಟ ಹಾರಿಸುವುದರಿಂದಾಗಲೀ ಅಥವಾ ಕನ್ನಡ ವಿರೋಧಿಗಳಿಗೆ ಮಸಿ ಬಳಿಯುವುದರಿಂದಾ ಗಲೀ ನಾವು ಕನ್ನಡವನ್ನು ಕಾಪಾಡುತ್ತೇವೆ ಎನ್ನುವುದು ಅರ್ಧ ಸತ್ಯ ಮಾತ್ರ ಎಂದು ಡಾ. ದಾದಾಪೀರ್ ನವಿಲೇಹಾಳ್ ತಿಳಿಸಿದರು.
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿರುವ ಅಂತರ್ಜಾಲದ ಮೂಲಕ ಕನ್ನಡ ನುಡಿಹಬ್ಬ ಕಾರ್ಯಕ್ರಮದ 25ನೇ ದಿನದ ಉಪನ್ಯಾಸದಲ್ಲಿ `ನನ್ನ ಅರಿವಿನ ಭಾಷೆಯಾಗಿ ಕನ್ನಡ’ ಎಂಬ ವಿಷಯ ಕುರಿತಾಗಿ ಮಾತನಾಡಿದರು.
ಕನ್ನಡದ ರಕ್ಷಣೆ ವಾಸ್ತವವಾಗಿ ಕನ್ನಡವನ್ನು ಸೃಜನಶೀಲವಾಗಿ ಬಳಸುವುದರ ಮೂಲಕ ಕನ್ನಡವನ್ನು ನಾವು ಕಟ್ಟಬೇಕಾಗಿದೆ. ಸೃಜನಶೀ ಲತೆ ಅಂತಿಮವಾಗಿ ಒಂದು ತಾತ್ವಿಕ ಅರಿವನ್ನು ರೂಪಿಸಬೇಕಾದಂತಹ ಮತ್ತು ಈಗಾಗಲೇ ಇರುವ ಅರಿವನ್ನು ಹೆಚ್ಚು ಹೆಚ್ಚು ಹರಡುವ ಮೂಲಕ ಅದು ಸಾಧ್ಯವಾಗಬೇಕು ಎಂದು ತಿಳಿಸಿದರು.
ಕನ್ನಡ ಸಾಹಿತ್ಯವನ್ನು, ಕನ್ನಡ ಪರಂಪರೆ ಯನ್ನು ಮತ್ತೆ ಮತ್ತೆ ನಾವು ಪರಿಭಾವಿಸಬೇಕು, ಪರಿಶೀಲನೆ ಮಾಡಬೇಕು, ಅನುಸಂಧಾ ನಗೊಳಿಸಬೇಕು. ಅಂದರೆ ನಾವು ಈ ಸಾಹಿತ್ಯ ವನ್ನು ಮತ್ತು ಕಲೆಯ ಚರಿತ್ರೆ ಮತ್ತು ವಾಸ್ತು ಶಿಲ್ಪದ ಎಲ್ಲ ಬಗೆಯ ಅರಿವನ್ನು ಇಟ್ಟುಕೊಂಡು ಮುಂದುವರೆಯಬೇಕಾಗಿದೆ ಎಂದರು.
ನಮ್ಮ ಬಹುಮುಖ್ಯ ಸಂಪತ್ತು ಯಾವುದೆಂದರೆ ಅದು ವಿವೇಕ. ಅದು ನನ್ನೊಳಗಿನ ಅರಿವನ್ನು ಎಚ್ಚರಗೊಳಿಸುವಂತಹ ಭಾಷೆಯ ಮೂಲಕವೇ ಹುಟ್ಟಬಹುದಾ ದಂತಹ ಅಸ್ಮಿತೆ ಅದು ಎಂದು ತಿಳಿಸಿದರು.
ಕನ್ನಡವನ್ನು ಉಳಿಸಬೇಕಾದಂತಹ ಮತ್ತು ಗಟ್ಟಿಗೊಳಿಸಬೇಕಾದಂತಹ ಹೊಣೆಯನ್ನು ಹೊತ್ತು ಕೊಳ್ಳುವವರು ಕೃಷಿಯ ಮೂಲದ ಜಾನಪದಕ್ಕೆ ಹೋಗದ ಹೊರತು, ಕನ್ನಡವನ್ನು ಮತ್ತೆ ಮತ್ತೆ ಕಟ್ಟಿ ಕೊಡಲಿಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದರು.
ಜಗತ್ತಿನ ಯಾವ ಭಾಷೆಯಾದರೂ ಜ್ಞಾನವನ್ನು ಕೊಡುತ್ತದೆ. ಯಾವ ಭಾಷೆಯಾದರೂ ಮಾಹಿತಿಯನ್ನು ಕೊಡುತ್ತದೆ. ಆದರೆ ಅರಿವನ್ನು ಕೊಡುವುದು ಮಾತ್ರ ನಮ್ಮ ಮಾತೃಭಾಷೆ ಎಂದು ತಿಳಿಸುತ್ತಾ, ಅರಿವಿನ ಭಾಷೆಯಾಗಿ ಕನ್ನಡ ಎನ್ನುವ ವಿಷಯವನ್ನು ಕುರಿತಂತೆ ಅವರು ಮಾತನಾಡಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಇಂದು ಉಪನ್ಯಾಸ ನೀಡಿದ ಡಾ. ದಾದಾಪೀರ್ ನವಿಲೇಹಾಳ್ ಅವರ ಮಾತುಗಳ ಕುರಿತು ಮಾತನಾಡುತ್ತಾ, ಅವರ ಪ್ರತಿಯೊಂದು ಮಾತುಗಳು ಕನ್ನಡ ಭಾಷೆಯ ನುಡಿಮುತ್ತುಗಳಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭರತ-ಬಾಹುಬಲಿ ಅವರ ತ್ಯಾಗದ ಸಂಕೇತವನ್ನಲ್ಲದೇ, ಡಿ.ಎಸ್. ಕರ್ಕಿಯವರ ಕವನ `ಹಚ್ಚೇವು ಕನ್ನಡದ ದೀಪದ’ ಅರ್ಥೈಸುವಿಕೆ ಹಾಗೂ ಕುವೆಂಪು ಅವರ `ಬಾರಿಸು ಕನ್ನಡ ಡಿಂಡಿಮ’ ಕವನದ ಸಾಲುಗಳ ಅರ್ಥವನ್ನು ಮತ್ತು ಅವುಗಳ ಒಳಹರಿವನ್ನು ಅತ್ಯಂತ ಮನೋಜ್ಞವಾಗಿ ಕನ್ನಡ ಮನಸ್ಸುಗಳ ಹೃದಯವನ್ನು ತಟ್ಟುವ ಮಾತುಗಳನ್ನಾಡಿ ಕನ್ನಡಿಗರ ಮನ ಸೂರೆಗೊಂಡಿರುವುದನ್ನು ಕೊಂಡಾಡಿದರು.
ಸಿ.ಜಿ. ಜಗದೀಶ್ ಕೂಲಂಬಿ ಸ್ವಾಗತಿಸಿ ದರು. ದಾವಣಗೆರೆಯ ಬೆಳಕು ಜಾನಪದ ಕಲಾ ತಂಡದ ಶ್ರೀಮತಿ ರುದ್ರಾಕ್ಷಿ ಬಾಯಿ ಸಿ.ಕೆ. ಪುಟ್ಯಾ ನಾಯ್ಕ್ ನಾಡಗೀತೆ ಹಾಗೂ ಜಾನ ಪದ ಗೀತೆಗಳನ್ನು ಹಾಡುವ ಮೂಲಕ ಈ ಕಾರ್ಯಕ್ರಮಕ್ಕೆ ಮೆರಗನ್ನು ತಂದು ಕೊಟ್ಟರು.