ಮುಂದಿನ ವರ್ಷ ಜಿಲ್ಲೆಯಲ್ಲಿ ವಿಜೃಂಭಣೆಯ ರಾಜ್ಯೋತ್ಸವ

ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ಸಾಧಕರನ್ನು ಸನ್ಮಾನಿಸಿದ ಉಸ್ತುವಾರಿ ಸಚಿವ ಭೈರತಿ ಬಸವರಾಜ್ 

ದಾವಣಗೆರೆ, ನ.25- ಕನ್ನಡ ಭಾಷೆಯನ್ನು ಮತ್ತಷ್ಟು ಸಶಕ್ತಗೊಳಿಸಲು ಮುಂದಿನ ಒಂದು ವರ್ಷದ ಅವಧಿ ಯನ್ನು ‘ಕನ್ನಡ ಕಾಯಕ ವರ್ಷವಾಗಿ’ ಆಚರಿಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ತಿಳಿಸಿದ್ದಾರೆ.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಜಿಲ್ಲೆಯಲ್ಲಿ ನಾಡು-ನುಡಿಗಾಗಿ ಸೇವೆ ಸಲ್ಲಿಸಿದ ಸಾಧಕರ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ನಿಯಮಾನುಸಾರ ಸರಳವಾಗಿ ಕನ್ನಡ ರಾಜ್ಯೋತ್ಸವವನ್ನು ಜಿಲ್ಲೆಯಲ್ಲಿ ಆಚರಿಸಲಾಯಿತು. ಆದರೆ ಮುಂದಿನ ಬಾರಿ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸೋಣ ಎಂದರು.

ಸುಮಾರು 2,500 ವರ್ಷಗಳ ಹಿಂದೆ ಜನಿಸಿದ ಕನ್ನಡವೆಂಬ ಶಿಶು ಇಂದು ಪ್ರಬುದ್ದಳಾಗಿ ಬೆಳೆದಿದ್ದಾಳೆ. ಅನ್ಯ ಭಾಷೆಗಳ ಒಳಹರಿವಿನ ಪರಿಣಾಮ ಅನೇಕ ಸವಾಲುಗಳು ಮುಖಾಮುಖಿಯಾಗಿದ್ದು ಅವನ್ನು ದಿಟ್ಟವಾಗಿ ನಾವೆಲ್ಲ ಎದುರಿಸಬೇಕಾಗಿದೆ. ಜೊತೆಗೆ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನಕ್ಕೆ ತಕ್ಕಂತೆ ಕನ್ನಡ ಭಾಷೆಯನ್ನು ಸಜ್ಜುಗೊಳಿಸಬೇಕಾಗಿ ರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕಳೆದ ಸಾಲಿನಲ್ಲಿ ನೆರೆ ಹಾವಳಿಯ ಕಾರಣದಿಂದ ಹಲವು ಕಾರ್ಯಕ್ರಮಗಳ ಮತ್ತು ವಿವಿಧ ಜಯಂತಿಗಳ ಅನುದಾನವನ್ನು ನೆರೆ ಸಂತ್ರಸ್ತರ ನಿಧಿಗೆ ನೀಡಲಾಗಿತ್ತು. ಈ ಬಾರಿಯೂ ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಮಾರ್ಗಸೂಚಿ ಯನ್ವಯ ಸರಳವಾಗಿ ಆಚರಿಸಲಾಗಿದೆ. 

ಇದೀಗ ಕೋವಿಡ್ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಮತ್ತು ಹಿರಿಯರು ರಾಜ್ಯೋತ್ಸವ ಪ್ರಯುಕ್ತ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕಳೆದ ಸಾಲು ಮತ್ತು ಪ್ರಸಕ್ತ ಸಾಲಿನ ಸಾಧಕರನ್ನು ಗುರುತಿಸಿ ನವೆಂಬರ್ ಮಾಹೆಯಲ್ಲಿ ಸನ್ಮಾನಿಸುವಂತೆ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿ ರಚಿಸಿ, ಸಾಧಕರನ್ನು ಆಯ್ಕೆ ಮಾಡಿ ಇಂದು ಅವರನ್ನು ಸನ್ಮಾನಿಸುವ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಸನ್ಮಾನಿತರು ಜಿಲ್ಲೆಯ ಹೆಸರನ್ನು ಎತ್ತರಕ್ಕೆ ತೆಗೆದುಕೊಂಡು ಹೋದವರಾಗಿದ್ದು, ನಿಮ್ಮ ಸಾಧನೆ ದೊಡ್ಡದು. 

ಈ ಸನ್ಮಾನ ಒಂದು ಸಾಂಕೇತಿಕ ಮಾತ್ರ, ಆದರೆ ಸಾಧಕರು ತೃಪ್ತರಾಗುವುದಿಲ್ಲ. ಇನ್ನೂ ಹೆಚ್ಚಿನ ಸಾಧನೆ ಮಾಡಿ, ಕೊಡುಗೆ ನೀಡಬೇಕೆಂಬ ಹಂಬಲ ಅವರಲ್ಲಿ ಇದ್ದೇ ಇರುತ್ತದೆ ಹಾಗೂ ಈ ಸನ್ಮಾನ ಕೂಡ ಅದನ್ನೇ ಸೂಚ್ಯವಾಗಿ ಹೇಳುತ್ತದೆ. ಸನ್ಮಾನಿತರು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

error: Content is protected !!