ಮನೆ ಬಾಗಿಲಿಗೆ ಪಾಲಿಕೆ ರಾಷ್ಟ್ರದಲ್ಲೇ ಮೊದಲು

ಜನಸ್ನೇಹಿ ಯೋಜನೆಗೆ ಹಿನ್ನಡೆಯಾಗದಂತೆ ಜಾರಿಗೆ ತರಲು ಸಚಿವ ಭೈರತಿ ಕರೆ

ದಾವಣಗೆರೆ, ನ. 25 – ಇಡೀ ರಾಷ್ಟ್ರದಲ್ಲೇ ಮೊದಲ ಬಾರಿಗೆ ಜಾರಿಗೆ ತರುತ್ತಿರುವ ಮನೆ ಬಾಗಿಲಿಗೆ ಮಹಾನಗರಪಾಲಿಕೆ ಯೋಜನೆಯು ಜನಸ್ನೇಹಿ ಹಾಗೂ ಮಹತ್ವದ ಹೆಜ್ಜೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.

ಗಾಂಧಿನಗರದ ಚೌಡೇಶ್ವರಿ ದೇವಸ್ಥಾನದಲ್ಲಿ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಮನೆ ಬಾಗಿಲಿಗೆ ಮಹಾನಗರಪಾಲಿಕೆ ಹಾಗೂ ಒಂದು ಲಕ್ಷ ಸಸಿ ನೆಡುವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಪಾಲಿಕೆ ನೌಕರರು, ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳೆಲ್ಲರ ಮೇಲೂ ಈ ಯೋಜನೆ ಜಾರಿಯ ಜವಾಬ್ದಾರಿ ಇದೆ. ಪಾಲಿಕೆಯ ಸೌಲಭ್ಯಗಳು ಸಿಗದೇ ಹಿನ್ನಡೆಯಾಗದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಿದೆ ಎಂದವರು ಕಿವಿಮಾತು ಹೇಳಿದ್ದಾರೆ.

ನಗರದ ಪ್ರತಿ ವಾರ್ಡ್‌ಗೂ 2-3 ಕೋಟಿ ರೂ.ಗಳ ವಿಶೇಷ ಅನುದಾನ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ಮನವಿ ಮಾಡಿಕೊಳ್ಳಲಾಗಿದೆ. ಆರ್ಥಿಕ ಪರಿಸ್ಥಿತಿ ನೋಡಿ ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಪಾಲಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು 125 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಹೀಗಾಗಿ ಪಾಲಿಕೆಯ ಕೆಲಸಗಳು ಬಹಳಷ್ಟಿವೆ. ಕೊರೊನಾ ಹಿನ್ನಡೆಯಿಂದ ಹೊರ ಬಂದು ದಾವಣಗೆರೆ ನಂ. 1 ಆಗುವ ರೀತಿಯಲ್ಲಿ ಪಾಲಿಕೆ ಕೆಲಸ ಮಾಡಬೇಕು ಎಂದು ಹೇಳಿದರು.

ಮಳೆಗಾಲ ಇಲ್ಲದಿರುವ ಈ ಸಂದರ್ಭದಲ್ಲಿ ಲಕ್ಷ ಸಸಿಗಳನ್ನು ಯಾವ ರೀತಿ ಬೆಳೆಸುತ್ತಾರೆ ಎಂಬ ಪ್ರಶ್ನೆಗಳೂ ಇವೆ. ಹೀಗಾಗಿ ಆಯಾ ವಾರ್ಡ್‌ಗಳ ಸದಸ್ಯರು ತಮ್ಮಲ್ಲಿನ ಸಸಿಗಳನ್ನು ಬೆಳೆಸಲು ಕಾಳಜಿ ವಹಿಸಬೇಕು ಎಂದವರು ಕರೆ ನೀಡಿದರು.

ಜನನ – ಮರಣ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಸ್.ಎ. ರವೀಂದ್ರನಾಥ್‌, ಮನೆ ಬಾಗಿಲಿಗೆ ಪಾಲಿಕೆ ಎಂಬ ಕಾರ್ಯಕ್ರಮ ಈಗ ಆರಂಭಿಸಲಾಗುತ್ತಿದೆ ಎಂದರೆ ಇದುವರೆಗೂ ಸೇವೆಗಳು ಸರಿಯಾಗಿರಲಿಲ್ಲ. ನೂತನ ಕಾರ್ಯಕ್ರಮವನ್ನು ಪ್ರಚಾರಕ್ಕೆಂಬಂತೆ ಮಾಡಿ ನಿಲ್ಲಿಸದೇ ನಿರಂತರವಾಗಿ ಸೌಲಭ್ಯ ಕಲ್ಪಿಸಿ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಪ್ರತಿಪಕ್ಷದ ನಾಯಕ ಎ.ನಾಗರಾಜ್, ಮನೆ ಬಾಗಿಲಿಗೆ ಪಾಲಿಕೆ ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳು ಅಂದೇ ವಿಲೇವಾರಿಯಾಗಬೇಕು. ಕಾಂಗ್ರೆಸ್‌ನ 5-6 ಸದಸ್ಯರ ವಾರ್ಡುಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದ್ದು, ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್, ಪಾಲಿಕೆಯ ಪ್ರತಿ ವಾರ್ಡ್‌ಗೆ ತಲಾ ಹತ್ತು ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದರೆ ಇಡೀ ನಗರ ಸ್ವಚ್ಛವಾಗಲಿದೆ. ಇದಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ವೇದಿಕೆಯ ಮೇಲೆ ಉಪ ಮೇಯರ್‌ ಸೌಮ್ಯ ನರೇಂದ್ರ ಕುಮಾರ್‌, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಟಿ. ವೀರೇಶ್, ಕೆ. ಪ್ರಸನ್ನಕುಮಾರ್, ಗೌರಮ್ಮ ಗಿರೀಶ್, ಜಯಮ್ಮ ಗೋಪಿನಾಯ್ಕ, ಗಾಂಧಿನಗರದ ಪಾಲಿಕೆ ಸದಸ್ಯ ಜೆ.ಡಿ. ಪ್ರಕಾಶ್, ಎಎಸ್‌ಪಿ ರಾಜೀವ್‌ ಮತ್ತಿತರರು ಉಪಸ್ಥಿತರಿದ್ದರು.

ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸ್ವಾಗತಿಸಿದರು.  ರೇಷ್ಮಾ ಹಾನಗಲ್ ವಂದಿಸಿದರು.

error: Content is protected !!