ನಾಯಕ ಸಮಾಜಕ್ಕೆ ಶೇ. 7.5 ಮೀಸಲಾತಿ ನೀಡದಿದ್ದರೆ ಹೋರಾಟ

ನಾಯಕ ಸಮಾಜಕ್ಕೆ ಶೇ. 7.5 ಮೀಸಲಾತಿ ನೀಡದಿದ್ದರೆ ಹೋರಾಟ - Janathavaniಹೊಸಪೇಟೆ ನ.24-  ವಾಲ್ಮೀಕಿ ಜಾತ್ರಾ ಮಹೋತ್ಸವದೊಳಗೆ  ವಾಲ್ಮೀಕಿ ನಾಯಕ ಸಮಾಜಕ್ಕೆ  ಶಿಕ್ಷಣ ಮತ್ತು  ಉದ್ಯೋಗದಲ್ಲಿ ಶೇಕಡ 7.5 ಮೀಸಲಾತಿಯನ್ನು ಸರ್ಕಾರ ನೀಡದಿದ್ದರೆ ಪುನಃ ಹೋರಾಟ ಆರಂಭಿಸಲಾಗುವುದು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಶ್ರೀಗಳು ನಗರದಲ್ಲಿ ಜರುಗಿದ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇತ್ತೀಚೆಗೆ ಮೀಸಲಾತಿ ಹೆಚ್ಚಿಸುವಂತೆ  ಬೆಂಗಳೂರು ಸೇರಿದಂತೆ  ರಾಜ್ಯದಾದ್ಯಂತ ಹೋರಾಟ ನಡೆಸಲಾಗಿತ್ತು.  ಅದಕ್ಕೆ ಮಣಿದ ಸರ್ಕಾರ ಸದ್ಯ ಚುನಾವಣೆ ನೀತಿ ಸಂಹಿತೆ ಇದೆ ಡಿಸೆಂಬರ್ ಒಳಗೆ ಬೇಡಿಕೆ ಈಡೇರಿಸಲಾಗುವುದು ಎಂದು ತಿಳಿಸಿತ್ತು. ಕೊನೆಯ ಪಕ್ಷ 2021ರ ಫೆಬ್ರವರಿಯಲ್ಲಿ ಜರುಗುವ ವಾಲ್ಮೀಕಿ ಜಾತ್ರಾ ಮಹೋತ್ಸವದೊಳಗೆ   ಮೀಸಲಾತಿ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು. 

ಹೊಸಪೇಟೆ, ಹರಪನಹಳ್ಳಿ ಸೇರಿದಂತೆ, ರಾಜ್ಯದ ನೂರಾರು ವಿಧಾನಸಭಾ ಕ್ಷೇತ್ರಗಳಲ್ಲಿ ವಾಲ್ಮೀಕಿ ನಾಯಕ ಸಮಾಜದವರು ನಿರ್ಣಾಯಕರಾಗಿದ್ದಾರೆ. ಆದರೆ ಆರ್ಥಿಕ, ಸಾಮಾಜಿಕವಾಗಿ ಪ್ರಬಲರಾದವರಿಗೆ ಪಕ್ಷಗಳು ಟಿಕೆಟ್ ನೀಡುತ್ತಿವೆ. ಅಸಂಘಟಿತ ವಾಲ್ಮೀಕಿ ನಾಯಕ ಸಮಾಜದಲ್ಲಿ  ಈಗಷ್ಟೇ ಅರಿವು ಮೂಡುತ್ತಿದೆ. ಅಲ್ಲದೆ ಟಿಕೆಟ್ ಕೊಡುವಾಗ ರಾಜಕೀಯ ಪಕ್ಷಗಳು ಅನುಸರಿಸುವ ಮಾನದಂಡಗಳೇ ಬೇರೆ. ಅದರೂ ಸಮಾಜದ  ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಅನೇಕ ನಾಯಕರು ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದು ಬರುತ್ತಿದ್ದಾರೆ ಎಂದರು. 

ಫೆಬ್ರವರಿಯಲ್ಲಿ ಜರುಗುವ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ನಾಡಿನ ವಿವಿಧ ಭಾಗಗಳಿಂದ  ಸಮಾಜದ ಅಸಂಖ್ಯ ಜನ ಪಾಲ್ಗೊಳಲಿದ್ದು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ವಿಷಯಗಳ ಕುರಿತು ಸಮಾಜದವರಿಗೆ ಅರಿವು ಮೂಡಿಸಲಾಗುವುದು. ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಸರ್ಕಾರಕ್ಕೆ  ಹಕ್ಕೊತ್ತಾಯ ಕೂಡ ಮಾಡಲಾಗುವುದು ಎಂದು ತಿಳಿಸಿದರು. 

ವಿಜಯನಗರ ಜಿಲ್ಲೆ ಘೋಷಣೆ ಸಂತಸದ ವಿಷಯ: ಹಂಪಿ, ಕಿಷ್ಕಿಂಧೆ, ಹಾಗೂ ಪಂಪಾ ಸರೋವರಗಳ ಉಲ್ಲೇಖ ಮಹರ್ಷಿ ವಾಲ್ಮೀಕಿ ಅವರು ಬರೆದಿರುವ ರಾಮಾಯಣದಲ್ಲಿ ಬರುತ್ತದೆ. ಈ ಸ್ಥಳ ಚಾರಿತ್ರ್ಯಿಕವಾಗಿ ಮಹತ್ವ ಪಡೆದಿದೆ. ವಿಜಯನಗರ ಜಿಲ್ಲೆಯಾಗುತ್ತಿರುವುದರಿಂದ ಈ ಭಾಗದ ಸಮಗ್ರ ಅಭಿವೃದ್ಧಿಗೆ  ಪೂರಕವಾಗಲಿದೆ ಎಂದರು.

 ಇದೇ ಸಂದರ್ಭದಲ್ಲಿ ವಾಲ್ಮೀಕಿ ಸೇವಾ ಸಮಿತಿಗೆ  ( ವಿ.ಎಸ್.ಎಸ್) ಪದಾಧಿಕಾರಿಗಳ ಆಯ್ಕೆ ಮಾಡಿ ಪೋಸ್ಟರ್ ಬಿಡುಗಡೆ ಮಾಡಿದರು. ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಜಂಬಯ್ಯ ನಾಯಕ,  ಮುಖಂಡರಾದ ಕಟಗಿ ಜಂಬಯ್ಯ ನಾಯಕ, ಗುಜ್ಜಲ ಭರ್ಮಪ್ಪ ಇನ್ನಿತರರಿದ್ದರು.

error: Content is protected !!