ಬೆಂಗಳೂರು, ನ. 23 – ಡಿಸೆಂಬರ್ ಅಂತ್ಯದ ವರೆಗೆ ಶಾಲೆ – ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.
ಶಾಲೆ ಆರಂಭಿಸುವ ಕುರಿತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮುಖ್ಯಮಂತ್ರಿಯವರು, ಶಿಕ್ಷಣ ಮತ್ತು ಆರೋಗ್ಯ ತಜ್ಞರು ಸದ್ಯಕ್ಕೆ ಶಾಲೆಗಳನ್ನು ತೆರೆಯುವುದು ಬೇಡ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸ ದಿರಲು ತೀರ್ಮಾನ ಕೈಗೊಳ್ಳಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಮತ್ತೊಮ್ಮೆ ಸಭೆ ಸೇರಿ, ಚರ್ಚೆ ನಡೆಸಿ, ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದವರು ತಿಳಿಸಿದ್ದಾರೆ. ಯಾವುದೇ ಸನ್ನಿವೇಶದಲ್ಲಿ ಕೋವಿಡ್ ಜಾಸ್ತಿ ಯಾಗಬಹುದು ಎಂದು ತಜ್ಞರು ಅಭಿ ಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಲೆಗಳನ್ನು ಆರಂಭಿಸಿದರೆ, ಮಕ್ಕಳಿಗೆ ತೊಂದರೆಯಾಗ ಬಹುದು. ಹೀಗಾಗಿ ಒಮ್ಮತ ದಿಂದ ಇಂತಹ ತೀರ್ಮಾನ ಕೈಗೊಂಡಿದ್ದೇವೆ ಎಂದರು.
ಇದಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್, ತಜ್ಞರ ಶಿಫಾರಸ್ಸಿನಂತೆ ಡಿಸೆಂಬರ್ ಕೊನೆಯವರೆಗೂ ಶಾಲೆಗಳನ್ನು ತೆರೆ ಯುವುದಿಲ್ಲ. ಚಳಿಗಾಲವೂ ಆರಂಭವಾಗಿರುವು ದರಿಂದ ಶಾಲೆಗಳನ್ನು ಆರಂಭಿಸುವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಬರಲಾಯಿತು ಎಂದಿದ್ದಾರೆ.
ಡಾ. ಸುದರ್ಶನ್ ನೇತೃತ್ವದ ತಜ್ಞರ ಸಮಿತಿ ಡಿಸೆಂಬರ್ 3ನೇ ವಾರದಲ್ಲಿ ಮತ್ತೆ ಸಭೆ ಸೇರಿ, ಪರಿಸ್ಥಿತಿ ಅವಲೋಕಿಸಲಿದೆ. ಪ್ರಸಕ್ತ ವರ್ಷ 1 ರಿಂದ 8 ತರಗತಿವರೆಗೆ ಶಾಲೆಗಳನ್ನು ಆರಂಭಿಸುವ ಬಗ್ಗೆ ಯೋಚನೆಯನ್ನೇ ಮಾಡಿಲ್ಲ. ಅದಕ್ಕಿಂತ ಮೇಲಿನ ತರಗತಿಗಳನ್ನು ಆರಂಭಿಸುವ ಬಗ್ಗೆ ಮಾತ್ರ ಚಿಂತನೆ ನಡೆದಿತ್ತು ಎಂದವರು ಹೇಳಿದ್ದಾರೆ.
ಡಿಸೆಂಬರ್ ಅಂತ್ಯದ ವೇಳೆಗೆ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪೂರ್ಣ ಪಠ್ಯವನ್ನು ನೀಡಲಾಗು ವುದು. ಅಷ್ಟೇ ಅಲ್ಲದೆ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಯಾವಾಗ ನಡೆಯುತ್ತಿವೆ ಎಂಬುದನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
– ಸುರೇಶ್‍ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
1ರಿಂದ 9ನೇ ತರಗತಿಯವರೆಗಿನ ಮಕ್ಕಳು ಪರೀಕ್ಷೆ ಇಲ್ಲದೇ ಪಾಸ್
ಬೆಂಗಳೂರು, ನ. 23 – ಒಂದರಿಂದ 9ನೇ ತರಗತಿಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆಯದೇ ಪಾಸ್ ಆಗಲಿದ್ದಾರೆ ಎಂದು ರಾಜ್ಯ ಸರ್ಕಾರ ಇಂಗಿತ ವ್ಯಕ್ತಪಡಿಸಿದೆ.
ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಳೆದ ಸಾಲಿನಲ್ಲಿ ಪರೀಕ್ಷೆ ಬರೆಸದೇ ವಿದ್ಯಾರ್ಥಿಗಳಿಗೆ ಮುಂಬಡ್ತಿ ನೀಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಇದೇ ಪರಿಸ್ಥಿತಿ ಮುಂದುವರೆದಿದೆ.
ಇದುವರೆಗೂ ಎಂಟು ತಿಂಗಳಾದರೂ, ಶಾಲೆ ಗಳನ್ನು ಆರಂಭಿಸಲು ಸಾಧ್ಯವಾಗಿಲ್ಲ. ತರಗತಿಗಳು ಆರಂಭವಾಗದೆ, ವಿದ್ಯಾರ್ಥಿಗಳು ಮನೆಯಲ್ಲಿ ಪಾಠ ಕಲಿಯುತ್ತಿದ್ದಾರೆ.
ಇನ್ನು ಉಳಿದಿರುವ ನಾಲ್ಕು ತಿಂಗಳ ಅವಧಿಯಲ್ಲಿ ಪೂರ್ಣ ಪಾಠ ನಡೆಸಿ, ಪರೀಕ್ಷೆ ನಡೆಸಬೇಕು. ಸೋಂಕು ತಹಬಂದಿಗೆ ಬಂದಿಲ್ಲ. ಆದ್ದರಿಂದ ಕಳೆದ ಸಾಲಿನ ನಿರ್ಣಯವನ್ನೇ ಈ ಬಾರಿಯು ತೆಗೆದುಕೊಳ್ಳುವ ಸಾಧ್ಯತೆ ಇದೆ.
ತಜ್ಞರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಪರೋಕ್ಷವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮಗೆ ವಿದ್ಯಾರ್ಥಿಗಳ ಹಿತ ಮುಖ್ಯ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಖಾಸಗಿ ಶಾಲೆಗಳು ಬದ್ದರಾಗಬೇಕಾಗುತ್ತದೆ. ಅವರು ನಮ್ಮ ನಿರ್ಧಾರವನ್ನು ತಳ್ಳಿ ಹಾಕುವಂತಿಲ್ಲ ಎಂದು ತಿಳಿಸಿದ್ದಾರೆ. ಇನ್ನೂ ಸಮಯವಿದೆ. ಪರಿಸ್ಥಿತಿ ನೋಡಿ, ಮುಂದೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ಶಾಲೆಗಳನ್ನು ಆರಂಭಿಸುವ ಬಗ್ಗೆ ಎರಡು ರೀತಿಯ ಅಭಿಪ್ರಾಯಗಳು ಬಂದವು. ಆದರೆ ವಿದ್ಯಾ ರ್ಥಿಗಳ ಹಿತದೃಷ್ಟಿಯಿಂದ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.
ಒಂದರಿಂದ 12ನೆ ತರಗತಿ ಮಕ್ಕಳಿಗೆ ಖಾಸಗಿ ಶಾಲೆಗಳು ಆನ್‍ಲೈನ್ ಮೂಲಕ ಶಿಕ್ಷಣ ನೀಡು ತ್ತಿವೆ. ಸರ್ಕಾರಿ ಶಾಲಾ ಮಕ್ಕಳಿಗೆ ಡಿಡಿ ಚಂದನದ ಮೂಲಕ, ವಾಟ್ಸಾಪ್, ಝೂಮ್ ಆಪ್ ಮೂಲಕ ಶಿಕ್ಷಣ ಒದಗಿಸಲಾಗುತ್ತಿದೆ ಎಂದರು.
ಇದಲ್ಲದೆ, ಸರ್ಕಾರಿ ಶಾಲಾ ಮಕ್ಕಳಿಗೆ ಸ್ಥಳೀಯವಾಗಿ ಶಿಕ್ಷಣ ನೀಡಲು ಶಾಲಾ ಶಿಕ್ಷಕರು ಒಂದಲ್ಲಾ ಒಂದು ರೀತಿ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ನಾವು ಎಂದಿನಂತೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಇದರಿಂದ ವಿದ್ಯಾರ್ಥಿಗಳ ಓದಿನ ಕಡೆ ಗಮನಕೊಡಲು ಸಾಧ್ಯವಾಗುತ್ತದೆ. ಸರ್ಕಾರಿ ಶಾಲಾ ಮಕ್ಕಳಿಗೆ ಖಾಸಗಿ ಆನ್‍ಲೈನ್ ಮೂಲಕ ಶಿಕ್ಷಣ ದೊರೆಕಿಸುವ ಚಿಂತನೆ ನಡೆದಿದೆ.
ಖಾಸಗಿ ಶಾಲೆಗಳು ಮೊದಲ ಹಂತದ ಬೋಧನಾ ಶುಲ್ಕ ವಸೂಲಿಗೆ ಅವಕಾಶ ನೀಡಲಾಗಿತ್ತು. ಎರಡನೇ ಹಂತದಲ್ಲಿ ಶುಲ್ಕ ಪಡೆಯಲು ಅನುಮತಿ ಕೋರಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದೆಂದರು.