ಕನ್ನಡದ ಪರಂಪರೆ ಉಳಿಸಲು ಮುಂದಾಗಿ : ಡಾ. ಸಂಧ್ಯಾ ರೆಡ್ಡಿ

ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯ 26ನೇ ವಾರ್ಷಿಕೋತ್ಸವ ಮತ್ತು 65ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ 

ದಾವಣಗೆರೆ, ನ. 22- ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ಹೆಸರಿನಲ್ಲಿ ನಮ್ಮ ಸಾಂಸ್ಕೃತಿಕ ಪರಂಪರೆ ನಿರ್ಲಕ್ಷ್ಯಕ್ಕೆ ಒಳ ಲಾಗುತ್ತಿದೆ. ಲೇಖಕಿಯರು ನಮ್ಮ  ಪರಂಪರೆ ಉಳಿಸಲು, ಬೆಳೆಸಲು ಮುಂದಾಗಬೇಕು ಎಂದು ಹಿರಿಯ ಸಾಹಿತಿ ಶ್ರೀಮತಿ ಡಾ.ಸಂಧ್ಯಾ ರೆಡ್ಡಿ ಕರೆ ನೀಡಿದರು.

ಅಂತರ್ಜಾಲದ ಮೂಲಕ ಭಾನು ವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯು ತನ್ನ 26ನೇ ವಾರ್ಷಿಕೋತ್ಸವ ಮತ್ತು 65ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯೋತ್ಸವವನ್ನು ಒಂದು ದಿನ ಆಚರಣೆಗೆ ಸೀಮಿತ ಮಾಡದೆ, ಪ್ರತಿ ತಿಂಗಳು ನಾಡಿನ ದಾರ್ಶನಿಕರ ಬಗ್ಗೆ ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ, ವಚನ, ಕೀರ್ತನೆಗಳ ಅಭ್ಯಾಸಕ್ಕೆ ಪ್ರೋತ್ಸಾ ಹಿಸಿ. ಇದರಿಂದ ಮಕ್ಕಳಿಗೆ ನಮ್ಮ ಇತಿಹಾಸ, ಪರಂಪರೆ ತಿಳಿಯಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು. ಇಂಗ್ಲಿಷ್ ಕಲಿಕೆ ಹೆಚ್ಚಾದಂತೆ ನಮ್ಮ ಪಾರಂಪರಾಗತ ಪದ್ಧತಿಗಳು, ಪ್ರಾಕೃತಿಕ ಚಿಕಿತ್ಸೆಗಳು, ಜಾನಪದ ಕಲೆಗಳು ಅವಸಾನದ ಅಂಚಿಗೆ ಸರಿಯುತ್ತಿವೆ. ಇಂದಿನ ಲೇಖಕಿಯರು ಕೇವಲ ಕಥೆ, ಕಾದಂಬರಿ ಬರೆಯುವುದಷ್ಟೇ ಸಾಹಿತ್ಯ ಎಂದುಕೊಳ್ಳದೆ, ಜಾನಪದ ವಿಷಯಗಳನ್ನು ಗಂಭೀರವಾಗಿ ಸಂಗ್ರಹಿಸಿ ಪ್ರಕಟಗೊಳಿಸುವತ್ತ ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು.

ಇಂಗ್ಲಿಷ್ ನಿಂದ ಮಾತ್ರ ಉದ್ಯೋಗ, ಹಣ ಗಳಿಸಲು ಸಾಧ್ಯ. ಅದೇ ನಮ್ಮ ಅಭಿವೃದ್ಧಿ ಎಂಬ ತಪ್ಪು ತಿಳಿವಳಿಕೆ  ಜನರಲ್ಲಿ ಹೆಚ್ಚಾಗಿದೆ. ಆ ಕಾರಣಕ್ಕಾಗಿಯೇ ಕನ್ನಡ ಕಲಿಕೆ ಬಿಟ್ಟು ಇಂಗ್ಲೀಷ್ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ ಎಂದು ಕಳವಳ  ವ್ಯಕ್ತಪಡಿಸಿದರು.

ಮತ್ತೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ವನಮಾಲಾ ಸಂಪನ್ನಕುಮಾರ್ ಮಾತನಾಡಿ, ತಾಯಿಯನ್ನು ಪ್ರೀತಿಸಿ, ಗೌರವಿಸುವಂತೆ ಕನ್ನಡ ನಾಡು, ನುಡಿಯ ಮೇಲೂ ಅಭಿಮಾನ, ಪ್ರೀತಿ ಹೊಂದುವ ಮೂಲಕ ಮುಂದಿನ ಜನಾಂಗಕ್ಕೂ ಕೊಂಡೊಯ್ಯಬೇಕಿದೆ ಎಂದರು.

ಮಹಿಳೆಯರು ಆಲೋಚನಾ ವಿಧಾನಗಳಲ್ಲಿ ಹೊಸ ತನ ಕಂಡು ಕೊಳ್ಳುತ್ತಾ ಬರಹದ ಕಡೆ ವಾಲುತ್ತಿರುವುದು ಸಂತಸದ ಸಂಗತಿ. ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲೂ ಲೇಖಕಿಯರು ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ. ಕಥೆ, ಕಾದಂಬರಿ, ಕವಿತೆ, ವೈಚಾರಿಕ ಬರಹ, ಅನುವಾದ ಎಲ್ಲಾ ಹೆಜ್ಜೆಗಳನ್ನು ವೇಗವಾಗಿಸಿಕೊಂಡು ಸಾಹಿತ್ಯ ಲೋಕಕ್ಕೆ ಉತ್ತಮ ಕೊಡುಗೆ ನೀಡುತ್ತಾ ಮಾದರಿ ವ್ಯಕ್ತಿಗಳಾಗುತ್ತಿರುವುದು ಸ್ತ್ರೀಕುಲಕ್ಕೆ ಸಂತೋಷದ ವಿಚಾರ ಎಂದರು.

`ಜನತಾವಾಣಿ’ ಸಂಪಾದಕ  ವಿಕಾಸ್ ಮೆಳ್ಳೇಕಟ್ಟೆ ಮಾತನಾಡಿ, ಮಹಿಳೆಯರ ಮೇಲಿನ ಕಾಳಜಿ ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ನಾಗಮ್ಮನವರಿಗೆ ಸಹಕಾರಿಯಾಗಬೇಕೆಂಬ ಸದುದ್ದೇಶ ಹಾಗೂ ಪ್ರತಿಭಾನ್ವಿತ ಸಾಹಿತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವನಿತಾ ಸಮಾಜದ ಅಂಗ ಸಂಸ್ಥೆ ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯಲ್ಲಿ ಜನತಾವಾಣಿ ಪತ್ರಿಕೆ ಸಂಸ್ಥಾಪಕ ಸಂಪಾದಕರೂ, ನನ್ನ ತಂದೆಯವರೂ ಆದ ಹೆಚ್.ಎನ್. ಷಡಾಕ್ಷರಪ್ಪ ಅವರು ತಮ್ಮ ತಾದೆ-ತಾಯಿ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿದ್ದಾಗಿ ನೆನಪಿಸಿಕೊಂಡರು.

ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಕಳೆದ ವರ್ಷ ತನ್ನ 25ನೇ ವರ್ಷದ ರಜತ ಮಹೋತ್ಸವ ಮತ್ತು ನಾವು ನೀಡುತ್ತಿರುವ ಪ್ರಶಸ್ತಿ ವಿತರಣೆ ಸಮಾರಂಭದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ಆಚರಿಸಿದ ನೆನಪು ಇನ್ನೂ ಹಸಿಯಾಗಿರುವಾಗಲೇ, 26ನೇ ವಾರ್ಷಿಕೋತ್ಸವ ಆಚರಣೆ ನನ್ನಲ್ಲಿ ಸಂತಸ ಹೆಚ್ಚಿಸಿದೆ. ಮುಂದೆಯೂ ತಮ್ಮೆಲ್ಲರ  ಪ್ರೋತ್ಸಾಹ ಮತ್ತು ಸಹಕಾರದಿಂದ ಪ್ರಶಸ್ತಿ ವಿತರಣೆಯ ಪ್ರಾಯೋಜಕತ್ವವನ್ನು ಮುಂದು ವರೆಸಿಕೊಂಡು ಹೋಗುತ್ತೇನೆ ಎಂದರು.

ವನಿತಾ ಸಮಾಜದ ಸಂಸ್ಥಾಪಕ ಅಧ್ಯಕ್ಷರೂ, ಮಾಜಿ ಸಚಿವರೂ ಆದ ಡಾ. ನಾಗಮ್ಮ ಕೇಶವಮೂರ್ತಿ ಅವರು ಸಮಾರಂಭವನ್ನು ಉದ್ಘಾಟಿಸಿದರು.

ಹಿರಿಯ ಸಾಹಿತಿಗಳಾದ ಶ್ರೀಮತಿ ಜಯಮ್ಮ ನೀಲಗುಂದ, ಶ್ರೀಮತಿ ಭಾಗ್ಯಲಕ್ಷ್ಮಿ ಸು. ಅಮೃತಾಪುರ, ಶ್ರೀಮತಿ ಸಂಧ್ಯಾ ಸುರೇಶ್, ಶ್ರೀಮತಿ ಸುನೀತಾ ಪ್ರಕಾಶ್, ಶ್ರೀಮತಿ ಉಮಾ ಮಹದೇವ್, ಡಾ. ರೂಪಾ ಶಶಿಕಾಂತ್ ಅವರುಗಳು ಸ್ವರಚಿತ ಕವನಗಳನ್ನು ವಾಚಿಸಿದರು. 

ಶ್ರೀಮತಿ ಎನ್.ಎಸ್. ಗಿರಿಜಾ ಸಿದ್ದಲಿಂಗಪ್ಪ, ಶ್ರೀಮತಿ ಸುನಿತಾ ರಾಜು, ಶ್ರೀಮತಿ ಸೀತಾ ಎಸ್. ನಾರಾಯಣ, ಶ್ರೀಮತಿ ಜಯಲಕ್ಷ್ಮಿ ಮಲ್ಲನಗೌಡ್ರು ಅವರುಗಳು ತಮ್ಮ ಆಯ್ಕೆಯ ಗಾದೆಗಳ ವಿಸ್ತರಣೆ ಮಾಡಿದರು. ಹಿರಿಯ ಸಾಹಿತಿ ಶ್ರೀಮತಿ ಅರುಂಧತಿ ರಮೇಶ್ ಗಾದೆಗಳ ಕುರಿತು ಮಾತನಾಡಿದರು. 

ವನಿತಾ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಎಸ್.ಎಂ. ಮಲ್ಲಮ್ಮ ನಾಗರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಹಿರಿಯ ಸಾಹಿತಿ ಶ್ರೀಮತಿ ವೀಣಾ ಕೃಷ್ಣಮೂರ್ತಿ ಸ್ವಾಗತಿಸಿದರು. ಹಿರಿಯ ಸಾಹಿತಿ ಶ್ರೀಮತಿ ಓಂಕಾರಮ್ಮ ರುದ್ರಮುನಿ ಸ್ವಾಮಿ ಅತಿಥಿಗಳ ಪರಿಚಯ ಮಾಡಿಕೊಟ್ಟರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಹೆಚ್.ಕೆ. ಸತ್ಯಭಾಮ ಮಂಜುನಾಥ್ ಮತ್ತು ಸಂಗಡಿಗರು ನಾಡಗೀತೆ ಹಾಡಿದರು.

error: Content is protected !!