ದಾವಣಗೆರೆ, ನ. 22 – ನೂರು ವರ್ಷಗಳ ಹಿಂದೆ ಸಾಮ್ರಾಜ್ಯಶಾಹಿ ಬ್ರಿಟಿಷರ ಆಡಳಿತದಲ್ಲಿ ಕಾರ್ಮಿಕರಿಗೆ ಹಕ್ಕು ಕೊಡಿಸಲು ಎಐಟಿಯುಸಿ ವಿಮೋಚನಾ ಹೋರಾಟ ನಡೆಸಿತ್ತು. ಈಗ ಬ್ಯಾಂಕ್, ಎಲ್.ಐ.ಸಿ., ರೈಲು ಮುಂತಾದವುಗಳ ಖಾಸಗೀಕರಣ ಮಾಡಲು ಸಿದ್ಧವಾಗಿರುವವರಿಂದ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಎರಡನೇ ವಿಮೋಚನಾ ಹೋರಾಟ ಮಾಡುತ್ತಿದೆ ಎಂದು ಎ.ಐ.ಟಿ.ಯು.ಸಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ. ವಿಜಯಭಾಸ್ಕರ್ ಹೇಳಿದ್ದಾರೆ.
ಎಐಟಿಯುಸಿಯ ಶತಮಾನೋತ್ಸವ ಸಂದರ್ಭದಲ್ಲಿ ಜಿಲ್ಲಾ ಸಮಿತಿ ವತಿಯಿಂದ ನಗರದ ಸಿ.ಪಿ.ಐ. ಕಾಂಪ್ಲೆಕ್ಸ್ನಲ್ಲಿ ಇಂದು ಆಯೋಜಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೂರು ವರ್ಷಗಳ ಹಿಂದೆ ಹಾಗೂ ಪ್ರಸಕ್ತ ಕಾಲಮಾನದಲ್ಲಿ ಹೋಲಿಕೆ ಇದೆ. ಆಗ ಸ್ಪಾನಿಶ್ ಫ್ಲು ಕಾಡಿದ್ದರೆ, ಈಗ ಕೊರೊನಾ ಇದೆ. ಆಗಲೂ ಆರ್ಥಿಕ ಬಿಕ್ಕಟ್ಟಿತ್ತು, ಈಗ ಆರ್ಥಿಕ ಕುಸಿತ ಉಂಟಾಗಿದೆ. ಆಗ ಕಾರ್ಮಿಕರಿಗೆ ಸಂಘಟನೆ, ಸುರಕ್ಷತೆ, ಹಕ್ಕುಗಳು ಇರಲಿಲ್ಲ. ಇವುಗಳಿಗಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಟ ಎ.ಐ.ಟಿ.ಯು.ಸಿ. ಹೋರಾಟ ನಡೆಸಿತ್ತು ಎಂದವರು ತಿಳಿಸಿದರು. ಆಗ ಬ್ರಿಟಿಷರ ಬೂಟು ಒರೆಸಿದವರೇ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾರೆ. ಇವರು ಕಾರ್ಮಿಕ ವಿರೋಧಿ ನಿಲುವು ತಳೆದಿದ್ದಾರೆ. ಈಗ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಇವರ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಬರುವ ನವೆಂಬರ್ 26ರಂದು ಕರೆ ನೀಡಿರುವ ರಾಷ್ಟ್ರೀಯ ಮುಷ್ಕರದಲ್ಲಿ ದೇಶಾದ್ಯಂತ 30 ಕೋಟಿ ಕಾರ್ಮಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಈಗ ಅಮೆರಿಕದ ಬಾಲಂಗೂಚಿಯಂತಿರುವ ಮೋದಿ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ನಡೆಸಲಾಗುತ್ತಿದೆ. ಇದು ಎರಡನೇ ರಾಷ್ಟ್ರ ವಿಮೋಚನಾ ಹೋರಾಟ ಎಂದವರು ಬಣ್ಣಿಸಿದರು.
ಬ್ರಿಟಿಷರ ವಿರುದ್ಧ ಕಾರ್ಮಿಕರಿಂದ ಮೊದಲ ವಿಮೋಚನಾ ಹೋರಾಟ ನಡೆಸಲಾಗಿತ್ತು. ಈಗ ಕಾರ್ಮಿಕ ವಿರೋಧಿ ಕೇಂದ್ರದ ವಿರುದ್ಧ ಎರಡನೇ ವಿಮೋಚನಾ ಹೋರಾಟ ನಡೆಸಲಾಗುತ್ತಿದೆ.
– ಡಿ.ಎ. ವಿಜಯಭಾಸ್ಕರ್, ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಆಡಳಿತದಲ್ಲಿರುವ ಸರ್ಕಾರ ಭಾರತ್ ಮಾತಾ ಕಿ ಜೈ ಎಂದು ಭಾವನಾತ್ಮಕವಾಗಿ ದೇಶ ಪ್ರೇಮದ ಮಾತನಾಡುತ್ತದೆ. ಆದರೆ, ರೈಲ್ವೆ, ಬ್ಯಾಂಕ್, ಎಲ್.ಐ.ಸಿ., ರಕ್ಷಣಾ ವಲಯ ಸೇರಿದಂತೆ ಹಲವು ವಲಯಗಳನ್ನು ಖಾಸಗಿಗೆ ಕೊಟ್ಟು ಮಾರಾಟದ ಯತ್ನ ನಡೆಸುತ್ತಿದೆ ಎಂದವರು ತರಾಟೆಗೆ ತೆಗೆದುಕೊಂಡರು.
ಸ್ವಿಸ್ ಬ್ಯಾಂಕಿನಲ್ಲಿ ಹಣ ಇಟ್ಟರೆ ಭ್ರಷ್ಟಾಚಾರ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಅನಿಲ್ ಅಂಬಾನಿಯವರ ಪೇಪರ್ ಕಂಪನಿಗೆ ರಫೇಲ್ ಒಪ್ಪಂದ ಕೊಡುವುದು ಭ್ರಷ್ಟಾಚಾರವಲ್ಲವೇ? ಎಂದು ಪ್ರಶ್ನಿಸಿದರು.
ಎ.ಐ.ಟಿ.ಯು.ಸಿ. ಧ್ವಜಾರೋಹಣ ಮಾತನಾಡಿದ ಎಐಟಿಯುಸಿ ಜಿಲ್ಲಾ ಖಜಾಂಚಿ ಆನಂದರಾಜ್, ನಗರದ ಕಾರ್ಖಾನೆಗಳಲ್ಲಿ ಕೂಲಿಯವರಂತೆ ಸಮಯ ಮಿತಿ ಇಲ್ಲದೇ ದುಡಿಸಿಕೊಳ್ಳಲಾಗುತ್ತಿತ್ತು. ಎಐಟಿಯುಸಿ ಹೋರಾಟದ ನಂತರ ಕೂಲಿಯವರು ಕಾರ್ಮಿಕರಾಗಿ ಹಕ್ಕುಗಳನ್ನು ಪಡೆದರು ಎಂದು ತಿಳಿಸಿದರು.
`ಕೆಂಬಾವುಟ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಎಐಬಿಇಎ ರಾಜ್ಯ ಸಮಿತಿ ಉಪಾಧ್ಯಕ್ಷ ರಾಘವೇಂದ್ರ ನಾಯರಿ, ಆರ್ಥಿಕತೆಯ ಜೀವನಾಡಿಯಾಗಿರುವ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದರ ವಿರುದ್ಧ ಹೋರಾಟ ನಡೆಸಬೇಕಿದೆ. ಬ್ಯಾಂಕ್ಗಳ ಲಾಭವನ್ನು ಜನರಿಗಾಗಿ ಬಳಸದೇ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಲು ಬಳಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೇದಿಕೆಯ ಮೇಲೆ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಕಾರ್ಮಿಕ ಮುಖಂಡರಾದ ಟಿ.ಎಸ್. ನಾಗರಾಜ್, ಎಂ.ಬಿ. ಶಾರದಮ್ಮ, ಮಹಮ್ಮದ್ ಬಾಷಾ, ಹೆಚ್.ಕೆ. ಕೊಟ್ರಪ್ಪ, ಮೊಹಮ್ಮದ್ ರಫೀಕ್, ವಿ. ಲಕ್ಷ್ಮಣ, ರುದ್ರಮ್ಮ, ಪ್ರಸನ್ನ ಕುಮಾರ್, ಸಂತೋಷ್, ಬಾಡದ ವೀರಣ್ಣ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ ವಹಿಸಿದ್ದರು.
ಐರಣಿ ಚಂದ್ರು ಕ್ರಾಂತಿ ಗೀತೆ ಹಾಡಿದರೆ, ಆವರಗೆರೆ ವಾಸು ಸ್ವಾಗತಿಸಿದರು.