ಕೆರೆ, ಪಾರ್ಕು, ರಸ್ತೆ ಒತ್ತುವರಿ ಮುಲಾಜಿಲ್ಲದೆ ತೆರವು – ರಾಜನಹಳ್ಳಿ ಶಿವಕುಮಾರ್, ದೂಡಾ ಅಧ್ಯಕ್ಷ
ದಾವಣಗೆರೆ, ನ. 20- ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಖಾಸಗಿ ವ್ಯಕ್ತಿಗಳು ಸರ್ಕಾರಿ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಸರ್ವೇ ನಡೆಸಿ ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದ್ದಾರೆ.
ತಮ್ಮ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಸಹಿತ ಮಾಹಿತಿ ನೀಡಿದ ಅವರು, ಬಾತಿ ಕೆರೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ವೇ ಮಾಡಿಸಿದಾಗ ದೊಡ್ಡಬಾತಿ ಗ್ರಾಮದ ಸರ್ವೇ ನಂ.148 ಹಾಗೂ 149ರಲ್ಲಿನ ಸುಮಾರು 4 ಎಕರೆ 2 ಗುಂಟೆ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಿರುವುದು ಗಮನಕ್ಕೆ ಬಂತು ಎಂದರು.
ಕೆರೆ ನೀರು ನಿಲ್ಲುವ ಸ್ಥಳ ರಿಸನಂ.150ರ ಪ್ರದೇಶದಲ್ಲಿ 73.11 ಎಕರೆ ಪ್ರದೇಶವಿದೆ. ಕೆರೆಯ ಪಕ್ಕದಲ್ಲಿ ಹೆಚ್ಚುವರಿಯಾಗಿ 44.4 ಎಕರೆ ಪ್ರದೇಶವನ್ನು 1972ರಲ್ಲಿ ಸರ್ಕಾರ ವಶಪಡಿಸಿಕೊಂಡಿತ್ತು. ಈ ಜಮೀನು ಇಲ್ಲಿಯವರೆಗೆ ಪಹಣಿಯಲ್ಲಿ ಇಂಡೀಕರಣಗೊಂಡಿರಲಿಲ್ಲ. ತಾವು ತಹಶೀಲ್ದಾರ್ ಅವರಿಗೆ ಪತ್ರ ಬರೆದು ಇಂಡೀಕರಣ ಮಾಡಿಸಿದ್ದಾಗಿ ಹೇಳಿದರು. ಸರ್ವೇ ನಂ.148 ಹಾಗೂ 149ರಲ್ಲಿ ಹಿಂದೆ ಭೂ ಪರಿವರ್ತನೆಯಾದ ಆದೇಶವನ್ನು ವಜಾ ಮಾಡಲು ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಜಿಲ್ಲಾಧಿಕಾರಿ ಆದೇಶ ಬಂದ ನಂತರ ಒತ್ತು ವರಿ ಬಡಾವಣೆ ತೆರವಿಗೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಈ ಎಲ್ಲಾ ಒತ್ತುವರಿಗಳು ಕಾಂಗ್ರೆಸ್‌ನ ರಾಮಚಂದ್ರಪ್ಪ ಅವರು ಅಧ್ಯಕ್ಷರಾಗಿದ್ದ ವೇಳೆ, ಆಯುಕ್ತರಾಗಿ ಆದಪ್ಪ ಅವರಿದ್ದ ವೇಳೆ ನಡೆದಿವೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
6 ಪಾರ್ಕುಗಳಿಗೆ ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರ ಹೆಸರು
ನಗರದ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿರುವ 6 ಉದ್ಯಾನವನಗಳಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ದಾವಣಗೆರೆಯ ಯೋಧರ ಹೆಸರನ್ನಿಡಲಲು ತೀರ್ಮಾನಿಸಲಾಗಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದರು.
ಕ್ವಿಟ್ ಇಂಡಿಯಾ ಚಳವಳಿ ವೇಳೆ ಬ್ರಿಟೀಷರ ವಿರುದ್ಧ ಪ್ರತಿಭಟಿಸಿ ಅವರ ಗುಂಡಿಗೆ ಎದೆ ಕೊಟ್ಟು ಪ್ರಾಣಾರ್ಪಣೆ ಮಾಡಿದ ಹಳ್ಳೂರೂ ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದಕುಂದಿ ನಿಂಗಪ್ಪ, ಹದಡಿ ನಿಂಗಪ್ಪ, ಹಮಾಲಿ ತಿಮ್ಮಣ್ಣ ಹಾಗೂ ಮಾಗನಹಳ್ಳಿ ಹನುಮಂತಪ್ಪ ಅವರ ಹೆಸರುಗಳನ್ನು ಪಾರ್ಕುಗಳಿಗೆ ನಾಮಕರಣ ಮಾಡಲಾಗುವುದು ಎಂದರು.
ಅಲ್ಲದೆ ಪ್ರಾಧಿಕಾರದ ಸಭಾಂಗಣಕ್ಕೆ ಲೋಕಸಭಾ ಸದಸ್ಯ ದಿ.ಜಿ.ಮಲ್ಲಿಕಾರ್ಜುನಪ್ಪ ಸಭಾಂಗಣ ಎಂದು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿನ ಸರ್ಕಾರಿ ನೌಕರರ ಭವನದ ಎದುರು ಇರುವ ಪ್ರಾಧಿಕಾರದ ಜಾಗಕ್ಕೆ ಅಮಲ್ ಜವಾನ್ ಉದ್ಯಾನವನ ಎಂದು ನಾಮಕರಣ ಮಾಡಲಾಗಿದೆ. ಜೊತೆಗೆ ಹುತಾತ್ಮ ಸೈನಿಕರ ಸ್ಮಾರಕ ನಿರ್ಮಿಸಲು ತೀರ್ಮಾನಿಸಿ, ಪ್ರಾಧಿಕಾರದಿಂದ 75 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
20 ಕೋಟಿ ರೂ. ವೆಚ್ಚದಲ್ಲಿ ಬಾತಿ ಕೆರೆ ಅಭಿವೃದ್ಧಿ
ದೂಡಾ ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಹಾಗೂ ಒತ್ತುವರಿ ತೆರವುಗೊಳಿಸಲು ನಿರ್ಧರಿಸಾಲಾಗಿದೆ.
ಬಾತಿಕೆರೆ ಅಭಿವೃದ್ಧಿಗೆ ಸುಮಾರು 20 ಕೋಟಿ ರೂ. ಅಂದಾಜಿನಲ್ಲಿ ಕಾಮಗಾರಿ ಮಾಡಲು ಯೋಜನೆ ರೂಪಿಸಲಾಗಿದೆ. ಕೆರೆಯ ಸುತ್ತಲೂ ವಾಕಿಂಗ್ ಪಾತ್, ಅಲಂಕಾರಿಕ ದೀಪಗಳು, ಬೋಟಿಂಗ್, ತೇಲುವ ಹೋಟೆಲ್ ಜೊತೆಗೆ ಕೆರೆಗೆ ಸಂಬಂಧಿಸಿದ 40 ಎಕರೆ ಜಮೀನಿನಲ್ಲಿ ವಾಟರ್ ಪಾರ್ಕ್ ನಿರ್ಮಾಣಕ್ಕೆ ಯೋಜನೆ ತಯಾರಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು. ಜೊತೆಗೆ ನಗರದ ಟಿವಿ ಸ್ಟೇಷನ್ ಕೆರೆಗೆ 2.75 ಕೋಟಿ ರೂ., ನಾಗನೂರು ಕೆರೆಗೆ 44 ಲಕ್ಷ ರೂ., ಹೊನ್ನೂರು ಕೆರೆಗೆ 35 ಲಕ್ಷ ರೂ. ನೀಡಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಸಭೆಯಲ್ಲಿ ಅನುಮೋದನೆಯಾಗಿದೆ. ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.
ಎಸ್.ಎಸ್. ಮಾಲ್ : ದಾಖಲೆ ಪರಿಶೀಲನೆ
ಸರ್ವೇ ನಂ.76/1, 76/2ರಲ್ಲಿನ ಸರ್ಕಾರಿ ಜಾಗದಲ್ಲಿ ಎಸ್.ಎಸ್. ಮಾಲ್ ಕಟ್ಟಿದ್ದಾರೆಂದು ಆಪಾದಿಸಿ ಅದರ ರದ್ದತಿಗೆ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ದಾಖಲೆಗಳನ್ನು ಪರಿಶೀಲಿಸಲಾಯಿತು. ರಸ್ತೆ ಹಾಗೂ ಪಾರ್ಕ್ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ನೀಡಬಾರೆಂದು ನ್ಯಾಯಾಲಯದ ಆದೇಶವಿದೆ. ಆದಾಗ್ಯೂ ಅಲ್ಲಿ ಕಟ್ಟಡ ಕಟ್ಟಲಾಗಿದೆ. ದಾಖಲಾತಿ ತಪ್ಪಿದ್ದಲ್ಲಿ ವಿನ್ಯಾಸ ರದ್ದುಪಡಿಸುವ ಅಧಿಕಾರ ನಗರಾಭಿವೃದ್ಧಿ ಪ್ರಾಧಿಕಾರಕ್ಕಿದೆ. ಹಾಗಾಗಿ ಕಾನೂನು ಸಲಹೆ ತೆಗೆದುಕೊಂಡು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ದೂಡಾದಿಂದ ಶೀಘ್ರವೇ ಹೊಸ ಬಡಾವಣೆ
ಹೊಸ ಬಡಾವಣೆ ನಿರ್ಮಿಸಿ, ನಿವೇಶನ ನೀಡಲು ಕುಂದುವಾಡದ ಬಳಿ ಈಗಾಗಲೇ 150 ಎಕರೆ ಜಮೀನು ಗುರುತಿಸಲಾಗಿದೆ. ಈ ಬಗ್ಗೆ ಸಂಸದ ಸಿದ್ದೇಶ್ವರ್, ಶಾಸಕ ರವೀಂದ್ರನಾಥ್ ನೇತೃತ್ವದಲ್ಲಿ ಮೂರ್ನಾಲ್ಕು ಸಭೆಗಳನ್ನು ನಡೆಸಲಾಗಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದರು. ಮಧ್ಯವರ್ತಿಗಳಿಲ್ಲದೆ ರೈತರೇ ನೇರವಾಗಿ ಜಮೀನು ನೀಡಲಿ ಎಂಬ ಉದ್ದೇಶ ನಮ್ಮದು. ಆದ್ದರಿಂದ ತುಸು ತಡವಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ನಗರದ ಲಕ್ಷ್ಮೀ ಫ್ಲೋರ್‌ಮಿಲ್‌ನಿಂದ ಕುಂದುವಾಡ ಕೆರೆಗೆ ಹೋಗುವ ಮಾರ್ಗದ ಎಡಬದಿ ಸರ್ವೇ ನಂ.39 ಹಾಗೂ 40 ರಲ್ಲಿ ಮಾಜಿ ಸಚಿವರ ಹತ್ತಿರ ಸಂಬಂಧಿ ಯೊಬ್ಬರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. 120 ಅಡಿಯ ರಿಂಗ್ ರಸ್ತೆಯನ್ನು 110 ಅಡಿ ಎಂದು ದಾಖಲೆ ತೋರಿಸಿ, 10 ಅಡಿ ರಸ್ತೆ ಅತಿಕ್ರಮಿಸಿದ್ದರು. ಈಗಾಗಲೇ ಅವರಿಗೆ ಒತ್ತುವರಿ ತೆರವಿಗೆ ನೊಟೀಸ್ ನೀಡಲಾ ಗಿದೆ. ಅಲ್ಲದೇ ಅಲ್ಲಿನ ಸರ್ಕಾರಿ ಜಾಗದಲ್ಲಿ ಕೆರೆಗೆ ಬರುವ ವಾಯು ವಿಹಾರಿಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿ ಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಪಾಲಿಕೆ ವ್ಯಾಪ್ತಿಯ ಎಲ್ಲಾ ಪಾರ್ಕ್ ಗಳ ಸರ್ವೇ: ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಬರುವ ಎಲ್ಲಾ ಪಾರ್ಕುಗಳನ್ನು ಸರ್ವೇ ನಡೆಸುವಂತೆ ಆದೇಶಿಸಲಾಗಿದೆ. ಯಾವುದೇ ವ್ಯಕ್ತಿ ಸರ್ಕಾರಿ ಜಾಗ ಒತ್ತುವರಿ ಮಾಡಿದ್ದರೆ ತೆರವುಗೊಳಿಸಲಾಗುವುದು ಎಂದ ಶಿವಕುಮಾರ್, ಈಗಾಗಲೇ ನಗ ರದ ಪಾರ್ಕ್ ಜಾಗದಲ್ಲಿ ಖಾಸಗಿ ವ್ಯಕ್ತಿಯೊ ಬ್ಬರು 2 ಕೋಟಿ ವೆಚ್ಚದ 2 ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ದೂಡಾದಿಂದ ಕೆಲಸ ನಿಲ್ಲಿಸುವಂತೆ ಈಗಾಗಲೇ ಸೂಚಿಸ ಲಾಗಿದೆ. ಕಟ್ಟಿದ ಕಟ್ಟಡವನ್ನು ಶೀಘ್ರವೇ ತೆರವುಗೊಳಿಸಲಿದ್ದೇವೆ ಎಂದರು.
ಅಗಸನಕೆರೆ ಒತ್ತುವರಿ: ಹರಿಹರದ ಬಳಿ ಇರುವ ಅಗಸನಕೆರೆಯೂ ಒತ್ತುವರಿ ಯಾಗಿದ್ದು, ಶೀಘ್ರವೇ ಒತ್ತುವರಿ ತೆರವು ಗೊಳಿಸಿ ಹರಿಹರ ಜನತೆಗೆ ಕುಡಿ ಯುವ ನೀರಿಗೆ ಅನುಕೂಲವಾಗುವಂತೆ ಕೆರೆ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೂಡಾ ಸದಸ್ಯರಾದ ಜಯರುದ್ರೇಶ್, ದೇವಿರಮ್ಮ, ಸೌಭಾಗ್ಯ ಮುಕುಂದ್, ರಾಜು ರೋಖಡೆ ಉಪಸ್ಥಿತರಿದ್ದರು.