ತಾಂತ್ರಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಂ.ಜಿ. ಈಶ್ವರಪ್ಪ
ದಾವಣಗೆರೆ, ನ. 19- ಎಲ್ಲಾ ವೃತ್ತಿ ಕ್ಷೇತ್ರಗಳಲ್ಲೂ ಕನ್ನಡ ಬಳಕೆಯಾದರೆ ಮಾತ್ರ ಅದು ಶ್ರೀಮಂತ ಭಾಷೆಯಾಗಲು ಸಾಧ್ಯ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕರೂ ಆದ ಡಾ.ಎಂ.ಜಿ. ಈಶ್ವರಪ್ಪ ಪ್ರತಿಪಾದಿಸಿದರು.
ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಬಸವೇಶ್ವರ ಸಭಾಂಗಣದಲ್ಲಿ ಗುರುವಾರ ತಾಂತ್ರಿಕ ಉಪನ್ಯಾಸ ಮಾಲೆ ಕಾರ್ಯಕ್ರಮ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಆಯಾ ಕ್ಷೇತ್ರಕ್ಕೆ ತಕ್ಕಂತೆ ಕನ್ನಡ ಭಾಷೆಯನ್ನು ಬಳಸಿದರೆ ಅದು ಶ್ರೀಮಂತ ವಾಗುವುದರ ಜೊತೆಗೆ ನಮಗೆ ಗೊತ್ತಿರುವ ಜ್ಞಾನವು ಪ್ರತಿಯೊಬ್ಬರಿಗೂ ತಲುಪುತ್ತದೆ. ಹೀಗೆ ಜ್ಞಾನ ತಲುಪಿಸುವ ಕೆಲಸ ಮಾಡುವುದೇ ನಮ್ಮ ನಾಡು ನುಡಿಗೆ ಸಲ್ಲಿಸುವ ಸೇವೆಯ ಒಂದು ಅಂಶ ಎಂದವರು ಹೇಳಿದರು.
ಇಂಗ್ಲೀಷ್ ಹದಿನಾರನೇ ಶತಮಾನದ ಭಾಷೆಯಾದರೂ, ಅಲ್ಲಿನ ಜನರು ಸಾಹಸಿಗಳು. ಯಾವ ಪ್ರದೇಶಕ್ಕೆ ಬೇಕಾದರೂ ಹೋಗಿ ಭಾಷೆ ಬೆಳೆಸುತ್ತಿದ್ದರು. ಆದ್ದರಿಂದಲೇ ಅದು ಅಂತರರಾಷ್ಟ್ರೀಯ ಭಾಷೆಯಾಗಲು ಸಾಧ್ಯವಾ ಯಿತು. ಆದರೆ ಕನ್ನಡಿಗರು ಸಾಹಸಿಗಳಾಗದ ಕಾರಣ ಬೇರೆ ಬೇರೆ ಕ್ಷೇತ್ರಗಳಲ್ಲಿ ಭಾಷೆಯನ್ನು ಸಮೃದ್ಧವಾಗಿ ಬೆಳೆಸಲು ಸಾಧ್ಯವಾಗಿಲ್ಲ ಎಂದು ಅಭಿಪ್ರಾಯಿಸಿದರು.
‘ಬಾಲು ಕ್ಯಾಂಟಿನ್’ ನಂಟು
ವ್ಯಾಸಂಗ ಪೂರ್ಣಗೊಂಡ ನಂತರ ಎಂ.ಜಿ. ಈಶ್ವರಪ್ಪನವರು ಡಿ.ಆರ್.ಎಂ. ಕಾಲೇಜು ಆಯ್ಕೆ ಮಾಡಿಕೊಂಡರೆ, ನಾನು ಬಿ.ಡಿ.ಟಿ. ಕಾಲೇಜು ಸೇರಿಕೊಂಡೆ. ಚಹಾ ಕುಡಿಯಲು ಸಮೀಪದಲ್ಲಿದ್ದ ‘ಬಾಲು ಕ್ಯಾಂಟಿನ್’ಗೆ ಹೋಗುತ್ತಿದ್ದಾಗ ನಮ್ಮಿಬ್ಬರ ಸ್ನೇಹ ಹೆಚ್ಚಾಯಿತು ಎಂದು ವೃಷಭೇಂದ್ರಪ್ಪ ನೆನಪಿಸಿಕೊಂಡರು.
ಎಂ.ಎ. ಮುಗಿಯುತ್ತಿದ್ದಂತೆ ದಾವಣಗೆರೆ ಡಿ.ಆರ್.ಎಂ. ಕಾಲೇಜನ್ನು ಆಯ್ಕೆ ಮಾಡಿಕೊಂಡೆ. ಅಲ್ಲಿಂದ ಇಲ್ಲಿಯವರೆಗೆ ಪ್ರತಿ ದಿನದ ಕೆಲಸ ಕಾರ್ಯಗಳನ್ನು ಸಂತೋಷದಿಂದ ಸಂಭ್ರಮಿಸಿದ್ದೇನೆ. ವೃತ್ತಿಯನ್ನು ಇಷ್ಟಪಟ್ಟಷ್ಟೂ ಪೂರಕವಾದ ಕೆಲಸಗಳನ್ನೇ ಮಾಡುತ್ತಿದ್ದೇನೆ ಎಂದು ಈಶ್ವರಪ್ಪ ಹೇಳಿದರು.
ಬಿಐಇಟಿ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಗು ಹುಟ್ಟಿದಾಗ ಮನೆಯಲ್ಲೆಲ್ಲಾ ಸಂಭ್ರಮವಿರುತ್ತದೆ. ಹಾಗೆಯೇ ಬಾಪೂಜಿ ವಿದ್ಯಾ ಸಂಸ್ಥೆಯಲ್ಲಿರುವ ವ್ಯಕ್ತಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಾಗ ನಮಗೆಲ್ಲರಿಗೂ ಸಂಭ್ರಮ ಎಂದರು.
ಆರಂಭದಲ್ಲಿ ಲಿಂ. ಶಿವಣ್ಣ ಅವರು ಮೊದಲ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪಡೆದರು. ನಂತರ ಕಾಸಲ್ ವಿಠ್ಠಲ್, ಡಾ.ನಿರ್ಮಲಾ ಕೇಸರಿ ಪ್ರಶಸ್ತಿ ಪಡೆದಿದ್ದರು. ಇದೀಗ ಈಶ್ವರಪ್ಪ ಅವರು ಪ್ರಶಸ್ತಿ ಪಡೆಯುವ ಮೂಲಕ ಬಾಪೂಜಿ ವಿದ್ಯಾಸಂಸ್ಥೆಯ ನಾಲ್ಕನೇ ವ್ಯಕ್ತಿಯಾಗಿದ್ದಾರೆ ಎಂದರು.
ಜನಸಂಖ್ಯೆ ಹೆಚ್ಚಿದಂತೆ ಪ್ರಶಸ್ತಿಗೆ ಅರ್ಹರಾಗುವವರ ಸಂಖ್ಯೆಯೂ ಹೆಚ್ಚಿರುತ್ತದೆ. ಪ್ರಶಸ್ತಿ ಸಿಗಲಿಲ್ಲವೆಂಬ ನೋವಿಗೆ ಅರ್ಥವಿಲ್ಲ. ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಮಹಾತ್ಮ ಗಾಂಧಿ ಅವರ ಹೆಸರು 11 ಬಾರಿ ಪ್ರಸ್ತಾಪವಾಗಿತ್ತು. ಪ್ರಶಸ್ತಿ ಸಿಗದಿದ್ದರೂ ಗಾಂಧೀಜಿಯವರ ಗೌರವ ಕಡಿಮೆಯಾಗಿರಲಿಲ್ಲ ಎಂದು ಉದಾಹರಿಸಿದರು.
ಬಿಐಇಟಿ ಕಾಲೇಜು ಪ್ರಾಂಶುಪಾಲ ಡಾ.ಹೆಚ್.ಬಿ. ಅರವಿಂದ್ ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕ ಡೀನ್ ಡಾ.ಜಿ.ಪಿ. ದೇಸಾಯಿ ಅತಿಥಿಗಳನ್ನು ಪರಿಚಯಿಸಿದರು. ಸಿವಿಲ್ ವಿಭಾಗದ ಮುಖ್ಯಸ್ಥ ಸಿ.ಪಿ. ಅನಿಲ್ ಕುಮಾರ್ ನಿರೂಪಿಸಿದರು. ವಿದ್ಯುತ್ ವಿಭಾಗದ ಡಾ.ಎಂ.ಎಸ್. ನಾಗರಾಜ್ ಅತಿಥಿಗಳನ್ನು ಸ್ವಾಗತಿಸಿದರು. ಪೂರ್ಣಿಮಾ ವಂದಿಸಿದರು.