ಪ್ರತಿ ಹಳ್ಳಿಗೆ ‘ಗ್ರಾಮ ಒನ್‌’ ಸೇವೆ

ಮಾಗಾನಹಳ್ಳಿಯಲ್ಲಿ ಗ್ರಾಮ ಒನ್‌ಗೆ ಚಾಲನೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ

ದಾವಣಗೆರೆ, ನ. 19 – 750ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸುವ ಗ್ರಾಮ ಒನ್ ಕೇಂದ್ರವನ್ನು ಮುಂಬರುವ ದಿನಗಳಲ್ಲಿ ರಾಜ್ಯದ ಪ್ರತಿ ಹಳ್ಳಿಯಲ್ಲೂ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ನೂರು ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಗ್ರಾಮ ಒನ್ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಮಾಗಾನಹಳ್ಳಿಯಲ್ಲಿ ಆನ್‌ಲೈನ್‌ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸರ್ಕಾರಿ ಕಚೇರಿಗಳಿಗೆ ಜನರು ಭೇಟಿ ನೀಡುವ ಅಗತ್ಯವನ್ನು ತಪ್ಪಿಸಲು ಗ್ರಾಮ ಒನ್ ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಜನರ ಸಮಯ ಹಾಗೂ ಹಣ ಉಳಿತಾಯವಾಗಲಿದೆ. ಮಧ್ಯವರ್ತಿಗಳ ಹಾವಳಿಯೂ ಇರುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು.

ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಈ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ. ಮುಂಬರುವ ದಿನಗಳಲ್ಲಿ ಮೈಕ್ರೋ ಬ್ಯಾಂಕ್ ಸೇವೆಯನ್ನೂ ಈ ಕೇಂದ್ರಗಳ ಮೂಲಕ ಸ್ಥಾಪಿಸಲಾಗುವುದು ಎಂದವರು ಹೇಳಿದರು.

ಸಮಯಬದ್ಧ ಸೇವೆಗಳನ್ನು ತಂತ್ರಜ್ಞಾನದ ಬಳಕೆಯಿಂದ ನೀಡಲು ಸಾಧ್ಯವಿರುವುದರಿಂದ ಗ್ರಾಮ- ಒನ್ ಕೇಂದ್ರಗಳು ಜನಸ್ನೇಹಿ ಕೇಂದ್ರಗಳಾಗಲಿವೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಸಮಯ ಬದ್ಧತೆಯಿಂದ ಸೇವೆ ಸಲ್ಲಿಸಬೇಕು. ಜನರಿಗೆ ಸೇವೆ ತಲುಪಿಸುವುದನ್ನು ವಿಳಂಬ ಮಾಡಿದರೆ ಅಧಿಕಾರಿಗಳಿಗೆ ದಂಡ ವಿಧಿಸಲಾಗುವುದು ಎಂದೂ ಮುಖ್ಯಮಂತ್ರಿ ಎಚ್ಚರಿಸಿದರು.

ಮಾಗಾನಹಳ್ಳಿಯಲ್ಲಿ ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸಕಾಲ ಹಾಗೂ ಸೇವಾ ಸಿಂಧು ಯೋಜನೆಗಳ ನಂತರ ಮಹತ್ವದ ಮೈಲಿಗಲ್ಲಾಗಿ ಗ್ರಾಮ ಒನ್ ಯೋಜನೆ ಜಾರಿಗೆ ಬರುತ್ತಿದೆ ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆಯ 100 ಹಳ್ಳಿಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಪ್ರಾಯೋಗಿಕ ವಾಗಿ ಸ್ಥಾಪಿಸಲಾಗಿದೆ. ಕಾರ್ಯಕರ್ತರು ಈ ಯೋಜನೆ ಯಶಸ್ವಿ ಮಾಡಿದರೆ, ರಾಜ್ಯಾ ದ್ಯಂತ ಕೇಂದ್ರಗಳನ್ನು ತೆರೆಯಲಾಗುವುದು. ಈ ಯೋಜನೆ ದೇಶಕ್ಕೇ ಮಾದರಿಯಾಗಲಿದೆ ಎಂದು ಸುರೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಜನರು ಕಚೇರಿಗಳಿಗೆ ಅಲೆದಾಡಿ ಬೇಸತ್ತು ಹೋಗುವುದನ್ನು ತಪ್ಪಿಸಲು ಗ್ರಾಮ ಒನ್ ಸ್ಥಾಪಿಸಲಾಗಿದೆ. ಜನರ ಮನೆ ಬಾಗಿಲಿಗೆ ಸೇವೆಗಳನ್ನು ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಇಲ್ಲಿನ ಗ್ರಾಮ ಒನ್ ಘಟಕ ರಾಜ್ಯಕ್ಕೇ ಮಾದರಿಯಾಗುವ ರೀತಿಯಲ್ಲಿರಲಿ ಎಂದು ಹಾರೈಸಿದರು.

ಮಾಗಾನಹಳ್ಳಿಯ ರೈತ ಮಹಿಳೆಯಾದ ಶಾಂತಮ್ಮ ಅವರು ಮೊಟ್ಟ ಮೊದಲ ಗ್ರಾಮ ಒನ್ ಕೇಂದ್ರವನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು.

ವೇದಿಕೆಯ ಮೇಲೆ ವಾಲ್ಮೀಕಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ.ರಾಮಚಂದ್ರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ದೀಪಾ ಜಗದೀಶ್, ಜಿ.ಪಂ. ಸದಸ್ಯೆ ಮಂಜುಳ ಟಿ.ವಿ., ಎಸ್‌ಪಿ ಹನುಮಂತರಾಯ ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ  ಯಡಿಯೂರಪ್ಪನವರ ಜೊತೆ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ, ಶಾಸಕ ಪ್ರೊ. ಲಿಂಗಣ್ಣ ಆನ್‌ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಐಎಎಸ್ ಅಧಿಕಾರಿ ಸಿಂಧು ಬಿ. ರೂಪೇಶ್ ಸ್ವಾಗತಿಸಿದರೆ, ಉಪನ್ಯಾಸಕಿ ಶೋಭಾ ಚಪ್ಪರದಹಳ್ಳಿಮಠ ನಿರೂಪಿಸಿದರು ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ವಂದಿಸಿದರು.

error: Content is protected !!