ನಿತ್ಯ ಮಾಲಿನ್ಯದ ಎದುರು ದೀಪಾವಳಿ ಮಾಲಿನ್ಯ ಠುಸ್

ದಾವಣಗೆರೆಯಲ್ಲಿ ಪ್ರತಿನಿತ್ಯವೂ ಕಾಡುತ್ತಿದೆ ವಾಯು, ಶಬ್ದ ಮಾಲಿನ್ಯ

ದಾವಣಗೆರೆ, ನ. 18 – ದೀಪಾವಳಿಯ ಪಟಾಕಿ ಸಿಡಿತದಿಂದ ಮಾಲಿನ್ಯ ಹೆಚ್ಚಾಗಿ ಕೊರೊನಾ ಅಪಾಯವಿದೆ ಎಂದು ಬೊಬ್ಬೆ ಹಾಕಿದ ಸರ್ಕಾರ, ಪರಿಸರ ವಾದಿಗಳು, ಪರಿಣಿತರೆಲ್ಲ ‘ಹಸಿರು ಪಟಾಕಿ’ ಕಡ್ಡಾಯಕ್ಕೆ ಕಾರಣವಾದರು. ಆದರೆ, ಇದರಿಂದ ಮಾಲಿನ್ಯ ನಿಯಂತ್ರಣಕ್ಕೆ ಯಾವುದೇ ಪ್ರಯೋಜನವಾಗಿಲ್ಲ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ-ಅಂಶಗಳ ಪ್ರಕಾರ ಇಡೀ ವರ್ಷದ ಮಾಲಿನ್ಯದ ಎದುರು ದೀಪಾವಳಿ ಮಾಲಿನ್ಯ ನಗಣ್ಯ. ನಿತ್ಯ ಮಾಲಿನ್ಯವೇ ದೀಪಾವಳಿಗೆ ಸವಾಲೆಸೆಯುವ ರೀತಿಯಲ್ಲಿದೆ. ಹಸಿರು ಪಟಾಕಿ ಕಡ್ಡಾಯ ಮಾಡಿದರೂ ಒಟ್ಟಾರೆ ಮಾಲಿನ್ಯದ ಮೇಲೆ ಎಳ್ಳಷ್ಟೂ ಪರಿಣಾಮವಾಗಿಲ್ಲ.

ಆರೋಗ್ಯಕರವಾಗಿರಲು ವಾಣಿಜ್ಯ ಪ್ರದೇಶದಲ್ಲಿ 65 ಡೆಸಿಬಲ್, ಕೈಗಾರಿಕಾ ಪ್ರದೇಶದಲ್ಲಿ 75 ಡೆಸಿಬಲ್, ವಸತಿ ಪ್ರದೇ ಶದಲ್ಲಿ 55 ಡೆಸಿಬಲ್‌ಗಿಂತ ಶಬ್ದ ಪ್ರಮಾಣ ಕಡಿಮೆ ಇರಬೇಕು ಎಂದು ಮಾಲಿನ್ಯ ನಿಯಂ ತ್ರಣ ಮಂಡಳಿ ಮಾನದಂಡ ನಿಗದಿಪಡಿಸಿದೆ. ಅಲ್ಲದೇ ಹಬ್ಬಗಳಂತಹ ಸಂದರ್ಭದಲ್ಲಿ ಸದ್ದಿನ ಪ್ರಮಾಣ ಮಾಮೂಲಿಗಿಂತ 10 ಡೆಸಿಬಲ್ ಹೆಚ್ಚಾಗುವುದನ್ನು ಸಾಮಾನ್ಯ ಎಂದೇ ಪರಿಗಣಿಸಲಾಗುತ್ತದೆ.

ದೀಪಾವಳಿ ಹಬ್ಬದ ವೇಳೆ ನಗರದ ಚೌಕಿ ಪೇಟೆಯಲ್ಲಿ ಸರಾಸರಿ ಶಬ್ದದ ಪ್ರಮಾಣ 71 ಡೆಸಿಬಲ್‌ಗಳವರೆಗೆ ತಲುಪಿದೆ. ಹಬ್ಬದ ವೇಳೆ 75 ಡೆಸಿಬಲ್‌ವರೆಗಿನ ಸದ್ದು ಮಿತಿಯೊಳಗಿದೆ ಎಂದು ಭಾವಿಸಲಾಗುತ್ತದೆ. ಹೀಗಾಗಿ ಶಬ್ದ ಮಾಲಿನ್ಯ ಕಡಿಮೆಯೇ ಇದೆ.

ಆಸಕ್ತಿಕರ ವಿಷಯವೆಂದರೆ ಹಬ್ಬವಲ್ಲದ ದಿನಗಳಲ್ಲೂ ನಗರದ ಹಲವಾರು ಪ್ರದೇಶಗಳಲ್ಲಿ ದೀಪಾವಳಿ ಪಟಾಕಿಗಳನ್ನು ಮೀರಿಸುವ ಶಬ್ದ ಮಾಲಿನ್ಯವಿದೆ. ಕಳೆದ ನವೆಂಬರ್ 12ರಂದು ಪಾಲಿಕೆ ಬಳಿ ಶಬ್ದದ ಪ್ರಮಾಣ 70.1 ಡೆಸಿಬಲ್, ಪಿ.ಬಿ. ರಸ್ತೆಯ ಸಂಚಾರಿ ಪೊಲೀಸ್ ಠಾಣೆಯ ಬಳಿ 67.1, ಅರುಣ ಟಾಕೀಸ್ ಬಳಿ 86.5, ಕಾಳಿಕಾದೇವಿ ರಸ್ತೆಯಲ್ಲಿ 69.1, ಗಾಂಧಿ ಸರ್ಕಲ್‌ನಲ್ಲಿ 86.7 ಹಾಗೂ ನಿಟುವಳ್ಳಿಯ ಗ್ರಾಮಾಂತರ ಪೊಲೀಸ್ ಠಾಣೆ ಬಳಿ ವೃತ್ತದಲ್ಲಿ 84.4 ಡೆಸಿಬಲ್‌ನಷ್ಟಿದೆ. 

ವಾಯು ಮಾಲಿನ್ಯವೂ ಕಡಿಮೆ : ವಾಯು ಮಾಲಿನ್ಯ ಅಳತೆ ಮಾಡುವ ಉಪಕರಣಗಳನ್ನು ಹರಿಹರದ ಪಾಲಿಫೈಬರ್ಸ್ ಕ್ವಾರ್ಟರ್ಸ್, ಮಾಲಿನ್ಯ ನಿಯಂತ್ರಣ ಕಚೇರಿಯ ಆವರಣ ಹಾಗೂ ಪಿ.ಬಿ. ರಸ್ತೆಯ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗಿದೆ. 

ಪರಿಸರದಲ್ಲಿ ಪ್ರತಿ ಚದುರ ಮೀಟರ್‌ಗೆ 100ಕ್ಕಿಂತ ಕಡಿಮೆ ದೂಳಿನ ಕಣ ಇರಬೇಕು ಎಂದು ಮಾರ್ಗಸೂಚಿ ತಿಳಿಸಿದೆ. ದೀಪಾವಳಿ ಸಮಯದಲ್ಲೂ ಸಹ ವಸತಿ ಪ್ರದೇಶಗಳಲ್ಲಿ ದೂಳಿನ ಪ್ರಮಾಣ ಗರಿಷ್ಠ ಮಟ್ಟಕ್ಕಿಂತ ಸುಮಾರು ಅರ್ಧದಷ್ಟು ಕಡಿಮೆಯೇ ಇದೆ.

ಪೊಲೀಸ್ ಠಾಣೆಯ ಘಟಕದಲ್ಲಿ ಮಾತ್ರ ವಾಯುಮಾಲಿನ್ಯ ನಿಗದಿಗಿಂತ ಹೆಚ್ಚಾಗಿದೆ. ಈ ಘಟಕದಲ್ಲಿ ದೂಳಿನ ಕಣದ ಪ್ರಮಾಣ ಹಬ್ಬದ ದಿನಗಳಲ್ಲಿ 198ರವರೆಗೂ ತಲುಪಿದೆ. ಈ ಪ್ರದೇಶದಲ್ಲಿ ದೂಳು, ಸಾಮಾನ್ಯ ದಿನಗಳಲ್ಲೂ ತೀರಾ ಹೆಚ್ಚಾಗಿರುತ್ತದೆ. ಹಬ್ಬದ ಮುನ್ನಾ ವಾರದ ನ.9ರಂದೂ ಸಹ ಈ ಪ್ರದೇಶದಲ್ಲಿ ದೂಳಿನ ಕಣದ ಪ್ರಮಾಣ 121ರವರೆಗೆ ಇತ್ತು ಎಂಬುದು  ಗಮನಾರ್ಹ. 

ದೀಪಾವಳಿ ಮಾಲಿನ್ಯದ ನೆಪದಲ್ಲಿ ಪಟಾಕಿ ನಿಷೇಧದಂತಹ ಕ್ರಮಗಳು ಪರಿಸರ ಮಾಲಿನ್ಯ ತಡೆಯಲು ಸಹಕಾರಿಯಾಗುವುದಿಲ್ಲ. ಮಾಲಿನ್ಯ ನಿಯಂತ್ರಣಕ್ಕಾಗಿ ವರ್ಷವಿಡೀ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವಂತೆ ಪಟಾಕಿಗಳನ್ನು ನಿಷೇಧಿಸುವುದರಿಂದ ಮಾಲಿನ್ಯ ಕಡಿಮೆಯಾಗುವುದಿಲ್ಲ ಎಂಬುದನ್ನು ಸಂಬಂಧಿಸಿದವರು ಇನ್ನಾದರೂ ಅರಿಯಬೇಕಿದೆ.


ಎಸ್.ಎ. ಶ್ರೀನಿವಾಸ್,
[email protected]

error: Content is protected !!