ದೇಶದ ಆರ್ಥಿಕತೆ ಬಲಿಷ್ಠಗೊಳಿಸುವಲ್ಲಿ ಸಹಕಾರಿ ಕ್ಷೇತ್ರ ಮುಂಚೂಣಿ

ದೇಶದ ಆರ್ಥಿಕತೆ ಬಲಿಷ್ಠಗೊಳಿಸುವಲ್ಲಿ ಸಹಕಾರಿ ಕ್ಷೇತ್ರ ಮುಂಚೂಣಿ - Janathavaniದಾವಣಗೆರೆ,ನ.18- ಆರ್ಥಿಕವಾಗಿ ಶೋಷಣೆಗೊಳಗಾದವರನ್ನು ಸಬಲರನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಹಕಾರ ಕ್ಷೇತ್ರವು ರಾಜ್ಯ ಮತ್ತು ದೇಶದ ಆರ್ಥಿಕ ಪರಿಸ್ಥಿತಿಯನ್ನು ಬಲಿಷ್ಠಗೊಳಿಸುವ ಕಾರ್ಯದಲ್ಲಿ ಮುಂಚೂಣಿ ಯಲ್ಲಿದೆ ಎಂದು ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಅಧ್ಯಕ್ಷರೂ ಆದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎನ್.ಎ. ಮುರುಗೇಶ್ ತಿಳಿಸಿದ್ದಾರೆ.

ಜಿಲ್ಲಾ ಸಹಕಾರಿ ಯೂನಿಯನ್ ನೇತೃತ್ವದಲ್ಲಿ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಏರ್ಪಾಡಾಗಿದ್ದ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ತಮ್ಮ ಸ್ವಾಗತ ಭಾಷಣದಲ್ಲಿ ಅವರು ಮಾತನಾಡಿದರು.

ಸುದೀರ್ಘ 112 ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಸಹಕಾರ ಕ್ಷೇತ್ರವು ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. ಇದರಿಂದಾಗಿ ಈ ಕ್ಷೇತ್ರವನ್ನು ದೇಶದ ಆರ್ಥಿಕತೆಯಲ್ಲಿ ಬಹುದೊಡ್ಡ ಕೊಡುಗೆ ನೀಡುತ್ತಿರುವ 3ನೇ ಅತಿದೊಡ್ಡ ವಲಯವೆಂದು ಗುರುತಿಸಲಾಗಿದ್ದು, ಇದು ಸಹಕಾರ ಕ್ಷೇತ್ರದ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಗ್ರಾಮೀಣ ಭಾಗದ, ಸಮಾಜದ ದುರ್ಬಲ ವರ್ಗದ, ರೈತಾಪಿ ವರ್ಗದ ಹಿತಾಸಕ್ತಿಗಳಿಗೆ ಪೂರಕವಾಗಿ ಅತ್ಯಂತ ಪರಿಣಾಮಕಾರಿಯಾಗಿ ಸಹಕಾರ ಕ್ಷೇತ್ರ ಕಾರ್ಯ ನಿರ್ವಹಿಸುತ್ತಿದೆ. ದೇಶದ ಶೇ.98 ಗ್ರಾಮೀಣ ಪ್ರದೇಶವನ್ನು ವ್ಯಾಪಿಸಿರುವ ಈ ಸಹಕಾರಿ ಆಂದೋಲನ ಪ್ರಪಂಚದಲ್ಲೇ ದೊಡ್ಡದು. ದೇಶದ ಒಟ್ಟು ಸುಮಾರು 7.5 ಲಕ್ಷ ಹಳ್ಳಿಗಳ ಪೈಕಿ ಸುಮಾರು 6,44,458 ಹಳ್ಳಿಗಳನ್ನು ಪ್ರಾಥಮಿಕ ಸಹಕಾರ ಸಂಘಗಳು ವ್ಯಾಪಿಸಿರುವುದು ಈ ಕ್ಷೇತ್ರದ ಆಗಾಧತೆಯನ್ನು ನಿರೂಪಿಸುತ್ತದೆ ಎಂದರು.

ದೇಶದ ಆರ್ಥಿಕತೆಯ ವಿವಿಧ ಆಯಾಮಗಳಲ್ಲಿ ಸಹಕಾರಿ ಕ್ಷೇತ್ರದ ಶೇಕಡವಾರು ಪಾಲನ್ನು ನೋಡುವುದಾದರೆ ನೇರ ಉದ್ಯೋಗದಲ್ಲಿ ಶೇ.13.30 ಕೊಡುಗೆಯನ್ನು ನೀಡಿದ್ದು, ಸ್ವಯಂ ಉದ್ಯೋಗವೊಂದರಲ್ಲೇ ಸುಮಾರು ಶೇ.10.91 ಪಾಲನ್ನು ಹೊಂದಿದೆ. ಗ್ರಾಮೀಣ ಭಾಗದ ಜನರಲ್ಲಿ ಉತ್ತಮ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವಂತಹ ತರಬೇತಿ ನೀಡಿ, ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಸಹಕಾರಿ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿರುವುದು ಬಹುಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದು ಅವರು ತಿಳಿಸಿದರು.

ದೇಶದ ಜಿಡಿಪಿ ಸುಮಾರು ಶೇ. 8ರಷ್ಟು ಪಾಲನ್ನು ನೀಡುತ್ತಿರುವ ಸಹಕಾರಿ ಕ್ಷೇತ್ರವು ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿದ್ದು, ಈ ಕ್ಷೇತ್ರಕ್ಕೊಂದು ಸ್ಪಷ್ಟ ರಾಷ್ಟ್ರೀಯ ನೀತಿ ರೂಪಿಸುವ ಅಗತ್ಯತೆ ಇದೆ ಎಂದು ಮುರುಗೇಶ್ ಅಂಕಿ-ಅಂಶಗಳೊಂದಿಗೆ ಪ್ರತಿಪಾದಿಸಿದರು.

error: Content is protected !!