‘ಸಹಕಾರ’ ದುರ್ಬಲವಾದರೆ ಈಸ್ಟ್ ಇಂಡಿಯಾದಂತಹ ಗುಲಾಮಗಿರಿ

'ಸಹಕಾರ' ದುರ್ಬಲವಾದರೆ ಈಸ್ಟ್ ಇಂಡಿಯಾದಂತಹ ಗುಲಾಮಗಿರಿ - Janathavaniದೊಡ್ಡ ಬ್ಯಾಂಕುಗಳೇ ಉತ್ತಮ ಎಂಬುದು ಕೇಂದ್ರ ಸರ್ಕಾರದ ಭ್ರಾಂತಿ -ಹೆಚ್.ಕೆ. ಪಾಟೀಲ್

ದಾವಣಗೆರೆ, ಜ. 18 – ಆರ್ಥಿಕ ವಲಯದಲ್ಲಿ ಬ್ಯಾಂಕುಗಳು ದೊಡ್ಡದಿರಲಿ ಎಂಬ ಭ್ರಾಂತಿ ಕೇಂದ್ರ ಸರ್ಕಾರದ್ದಾಗಿದೆ. ಇದರಿಂದಾಗಿ ಸಹಕಾರಿ ಬ್ಯಾಂಕುಗಳಿಗೆ ಹಿನ್ನಡೆ ತರುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಜನ ಸಮುದಾಯವನ್ನು ಮತ್ತೆ ಈಸ್ಟ್ ಇಂಡಿಯಾ ಕಾಲದಂತಹ ಗುಲಾಮಗಿರಿಗೆ ದೂಡಲಾಗುತ್ತಿದೆ ಎಂದು ಶಾಸಕ ಹಾಗೂ ಸಹಕಾರಿ ಧುರೀಣ ಹೆಚ್.ಕೆ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ನಿನ್ನೆ ಆಯೋಜಿಸಲಾಗಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. 

ರಾಷ್ಟ್ರೀಕೃತ ಬ್ಯಾಂಕುಗಳು ಸ್ವತಂತ್ರ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವುಗಳನ್ನು ವಿಲೀನ ಮಾಡಲಾಗುತ್ತಿದೆ. ಆದರೆ, ಸಣ್ಣ ಬ್ಯಾಂಕುಗಳು ಸೇವೆ  ಪರಿಣಾಮಕಾರಿಯಾಗಿ ನೀಡುತ್ತವೆ ಎಂದವರು ಅಭಿಪ್ರಾಯ ಪಟ್ಟರು.

ಸಹಕಾರಿ ಸಂಸ್ಥೆಗಳು ರೂಪುಗೊಳ್ಳುವ ಮುಂಚೆ ಸ್ವಾಭಿಮಾನ ಒತ್ತೆ ಇಡುವಂತೆ ಸಾಹು ಕಾರರ ಬಳಿ ಸಾಲ ಕೇಳಬೇಕಿತ್ತು. ಸಹಕಾರಿ ವಲಯದ ಹಿರಿಯರು ಈ ಪರಿಸ್ಥಿತಿ ತಪ್ಪಿಸಲು ಸಮಾಜದ ವಿವಿಧ ಸಮುದಾಯಗಳಿಗೆ ಪತ್ತಿನ ಸಹಕಾರ ಸಂಘಗಳನ್ನು ರಚಿಸಿ ಸ್ವಾಭಿಮಾನಿಗ ಳಾಗುವಂತೆ ಮಾಡಿದರು ಎಂದು ಪಾಟೀಲ್ ಹೇಳಿದರು. ಆದರೆ, ಈಗ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಸಣ್ಣ ಬ್ಯಾಂಕುಗಳನ್ನು ಮುಚ್ಚಿ ಸುವ ಯೋಚನೆ ನಡೆಸಿದೆ. ಇದು ಜನರ ಹಾಗೂ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತರುತ್ತದೆ. ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ಕಾಲದಂತೆ ಸಮುದಾಯವನ್ನು ಗುಲಾಮರನ್ನಾಗಿ ಮಾಡಲಿದೆ ಎಂದವರು ಎಚ್ಚರಿಸಿದರು.

ಸಹಕಾರಿ ವಲಯವನ್ನು  ಸರ್ಕಾರಗಳು ಇತರೆ ವಲಯಗಳಿಗೆ ಸಮನಾಗಿ ಕಾಣುತ್ತಿಲ್ಲ. ಮುಳುಗುವ ಅಪಾಯವಿದೆ ಎಂದು ಹೇಳ ಲಾಗುವ ಖಾಸಗಿ ಬ್ಯಾಂಕುಗಳಲ್ಲಿ ಸರ್ಕಾರಿ ಇಲಾಖೆಗಳು ಖಾತೆ ತೆರೆಯಲು ಅನುಮತಿ ಇದೆ. ಆದರೆ, ಸಹಕಾರಿ ಬ್ಯಾಂಕುಗಳಲ್ಲಿ ಖಾತೆ ತೆರೆಯದಂತೆ ನಿರ್ಬಂಧಿಸಲಾಗಿದೆ ಎಂದವರು ಆಕ್ಷೇಪಿಸಿದರು.

ನಗರ  ಸಹಕಾರಿ ಬ್ಯಾಂಕುಗಳಲ್ಲಿ 6 ಲಕ್ಷ ಕೋಟಿ ರೂ. ಠೇವಣಿ ಇದೆ. ಇದರ ಶೇ.25ರಷ್ಟು ಹಣವನ್ನು ಎಸ್.ಎಲ್.ಆರ್. ರೂಪದಲ್ಲಿ ಜಿಲ್ಲಾ ಸಹಕಾರಿ, ಇಲ್ಲವೇ ಅಪೆಕ್ಸ್ ಬ್ಯಾಂಕುಗಳಲ್ಲಿ ಇರಿಸಲಾಗಿತ್ತು. ಈಗ ಆ ಹಣವನ್ನು ಆರ್.ಬಿ.ಐ. ನಿರ್ದೇಶನದಂತೆ ಸಹಕಾರಿ ವಲಯದಿಂದ ಹೊರಗಿನ ವ್ಯವಸ್ಥೆಗೆ ತೆಗೆದುಕೊಂಡು ಹೋಗಲಾಗಿದೆ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಉತ್ಪಾದಕರ ಸಂಘಗಳಿಗೆ ಕೇಂದ್ರ ಸರ್ಕಾರ ಶೇ.80ರಷ್ಟು ಸಬ್ಸಿಡಿ ಕೊಡುತ್ತಿದೆ. ಆದರೆ, ಅದೇ ರೀತಿಯ ಕೆಲಸ ಮಾಡುವ ವಿವಿಧೋದ್ಧೇಶ ಸಹಕಾರ ಸಂಘಗಳಿಗೆ ಯಾವುದೇ ಅನುದಾನ ನೀಡುತ್ತಿಲ್ಲ. ಈ ರೀತಿಯ ಭೇದ ಮಾಡುವುದನ್ನು ಸರ್ಕಾರ ನಿಲ್ಲಿಸಬೇಕು ಎಂದರು.

ಪತ್ತಿನ ಸಹಕಾರಿ ಸಂಸ್ಥೆಗಳು ರಾಜ್ಯಗಳ ನಿಯಂತ್ರಣದಲ್ಲಿದ್ದವು. ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ರಾಜ್ಯಗಳ ಅಧಿಕಾರವನ್ನು ಕಸಿದುಕೊಂಡಿದೆ. ಈಗ ಪತ್ತಿನ ಸಹಕಾರ ಬ್ಯಾಂಕುಗಳನ್ನು ಸಂಪೂರ್ಣ ರಿಸರ್ವ್ ಬ್ಯಾಂಕ್ ಅಧೀನಕ್ಕೆ ಒಳಪಡಿಸ ಲಾಗಿದೆ. ರಾಜ್ಯಗಳ ಅಧಿಕಾರಕ್ಕೆ ಲಗಾಮು ಹಾಕಲಾಗಿದೆ. ಇದನ್ನು ಸರಿ ಪಡಿಸಬೇಕಿದೆ ಎಂದು ಪಾಟೀಲ್ ಹೇಳಿದರು.

error: Content is protected !!