ಬಳ್ಳಾರಿ ವಿಭಜನೆ, 31ನೇ ಜಿಲ್ಲೆಯಾಗಿ ವಿಜಯನಗರ ರಚನೆ
ಬೆಂಗಳೂರು, ನ. 18 – ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಸಚಿವ ಸಂಪುಟದ ಉಪಸಮಿತಿ ರಚನೆಗೆ ಸರ್ಕಾರ ನಿರ್ಧರಿಸಿದೆ.
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ಯಲ್ಲಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಈ ವಿಷಯ ತಿಳಿಸಿದ್ದಲ್ಲದೆ, ಒಂದು ವಾರದಲ್ಲಿ ಸಮಿತಿ ರಚನೆಯಾಗಲಿದ್ದು, ಸಮಿತಿಯಲ್ಲಿ ಯಾರಿರಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ವರ್ಗದವರಿಗೆ ಮೀಸಲಾತಿ ಹೆಚ್ಚಳ ಮಾಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಇದಕ್ಕೆ ಸರ್ಕಾರ ಸ್ಪಂದಿಸಿದ್ದು, ನ್ಯಾಯಮೂರ್ತಿ ನಾಗ ಮೋಹನದಾಸ್ ಸಮಿತಿಯ ವರದಿ ಅನ್ವಯ ಉಪಸಮಿತಿ ತೀರ್ಮಾನ ಕೈಗೊಳ್ಳಲಿದೆ.
ಪರಿಶಿಷ್ಟ ಜಾತಿಗೆ ಶೇ. 13 ರಿಂದ 15ಕ್ಕೆ, ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ. 5 ರಿಂದ 7ಕ್ಕೆ ಮೀಸಲು ಹೆಚ್ಚಳ ಮಾಡುವ ಬೇಡಿಕೆ ಇತ್ತು. ಕೆಲವು ಗೊಂದಲಗಳು ಇದ್ದ ಕಾರಣ ಮೀಸ ಲಾತಿ ಹೆಚ್ಚಳ ಮಾಡುವ ಸಂಬಂಧ ಉಪಸಮಿತಿ ರಚನೆ ಮಾಡಿ, ಸಮಿತಿ ನೀಡುವ ತೀರ್ಮಾನವನ್ನು ಮುಂದೆ ಸರ್ಕಾರ ಅನು ಷ್ಠಾನಗೊಳಿಸುವ ಬಗ್ಗೆ ನಿರ್ಧಾರ ಮಾಡಲಿದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ, ಹೊಸಪೇಟೆ ಸೇರಿದಂತೆ ಕೆಲವು ತಾಲ್ಲೂಕು ಗಳನ್ನೂ ಒಳಗೊಂಡಂತೆ ವಿಜಯನಗರ ಜಿಲ್ಲೆ ನಿರ್ಮಾಣಕ್ಕೆ ಸಂಪುಟ ಅಸ್ತು ನೀಡಿದೆ.
ಬಳ್ಳಾರಿ ವಿಭಜನೆಗೆ ಪರ-ವಿರೋಧದ ದನಿ
ಬೆಂಗಳೂರು, ಜ. 18 – ವಿಜಯನಗರ ಹೊಸ ಜಿಲ್ಲೆ ರಚನೆಗೆ ರಾಜ್ಯ ಸಂಪುಟ ಒಪ್ಪಿಗೆ ನೀಡಿದ ಬೆನ್ನಲ್ಲೇ ಪರ ಹಾಗೂ ವಿರೋಧದ ದನಿಗಳು ವ್ಯಕ್ತವಾಗುತ್ತಿವೆ.
ಬಳ್ಳಾರಿ ಪಶ್ಚಿಮ ಭಾಗದ ತಾಲೂಕುಗಳನ್ನೊಳ ಗೊಂಡ ಈ ನೂತನ ಜಿಲ್ಲೆ ರಚನೆ ಮಾಡ ಬೇಕೆಂಬ ದೀರ್ಘಕಾಲದ ಬೇಡಿಕೆ ಈಡೇರಿದೆ. ಇದು ಐತಿಹಾಸಿಕ ತೀರ್ಮಾನ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಮತ್ತೊಂದೆಡೆ ಸರ್ಕಾರ ಕ್ರಮಕ್ಕೆ ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ
ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿಜಯನಗರ ಜಿಲ್ಲೆ ರಚನೆಗೆ ನನ್ನ ಬೆಂಬಲ ವಿಲ್ಲ. ರಾಜ್ಯ ಸರ್ಕಾರ ಇಂತಹ ನಿರ್ಣಯ ಕೈಗೊಳ್ಳಬಾರದಿತ್ತು. ಈ ಜಿಲ್ಲೆಯ ಜನರು, ವಿಜಯನಗರ ಜಿಲ್ಲೆ ರಚನೆಯ ವಿರೋಧಿಸಿ ಹೋರಾಟ ಮಾಡಿದರೆ ಅವರೊಂದಿಗೆ ನಾನೂ ನಿಲ್ಲುತ್ತೇನೆ ಎಂದು ಎಚ್ಚರಿಸಿದ್ದಾರೆ.
ಈ ನಡುವೆ ಹೇಳಿಕೆ ನೀಡಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ವಿಜಯನಗರ ಜಿಲ್ಲೆಗೆ ಕಂಪ್ಲಿ ತಾಲ್ಲೂಕು ಸೇರಿಸುವಂತೆ ಪ್ರಸ್ತಾವನೆ ಕಳಿಸಲಾಗುವುದು. ಸೇರ್ಪಡೆ ಮಾಡದಿದ್ದರೆ ಜನತೆ, ಮುಖಂಡರೊಂದಿಗೆ ಸೇರಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಡಿ.7ರಿಂದ ಚಳಿಗಾಲದ ವಿಧಾನ ಮಂಡಲ ಅಧಿವೇಶನ
ಬೆಂಗಳೂರು, ನ. 18 – ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ಡಿಸೆಂಬರ್ 7 ರಿಂದ 15 ರವರೆಗೆ ನಡೆಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.
ರಾಜ್ಯದಲ್ಲಿ ಇತ್ತೀಚೆಗೆ ಬಿದ್ದ ಭಾರೀ ಮಳೆ ಮತ್ತು ನೆರೆಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಒಂದು ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಂಪುಟ ಸಭೆಯಲ್ಲಿ ಸಮ್ಮತಿಸಲಾಗಿದೆ.
ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ, ಕೊರೊನಾ ಸಾಂಕ್ರಾಮಿಕ ರೋಗದ ನಡುವೆಯೂ ನಿಗದಿತ ಸಮಯದಲ್ಲಿ ಅಧಿವೇಶನ ನಡೆಸಬೇಕೆಂಬ ಉದ್ದೇಶದಿಂದ ಏಳು ದಿನಗಳ ಕಾಲ ಸದನ ನಡೆಸುವ ತೀರ್ಮಾನ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಲವು ಪ್ರಮುಖ ಮಸೂದೆಗಳಿಗೆ ಅಂಗೀಕಾರ ಪಡೆದುಕೊಳ್ಳಲಾಗುವುದು. ಸದನ ನಡೆಸುವ ಸಂಬಂಧ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಉಭಯ ಸದನಗಳ ಪೀಠಾಸೀನಾಧಿಕಾರಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ಸರ್ಕಾರ ಬದ್ದವಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಭಾರೀ ಮಳೆ ಮತ್ತು ನೆರೆಯಿಂದ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಮಲೆನಾಡು ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಹಾನಿಯುಂಟಾಗಿದೆ. ರಾಜ್ಯ ಸರ್ಕಾರದ ಕೋರಿಕೆಗೆ ಮನ್ನಣೆ ನೀಡಿ, ಕೇಂದ್ರ ಐದು ನೂರು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಈ ಹಣವೂ ಸೇರಿದಂತೆ, ವಿವಿಧ ಅಭಿವೃದ್ದಿ ಕಾರ್ಯಗಳನ್ನು ಈ ಪ್ರದೇಶದಲ್ಲಿ ಕೈಗೊಳ್ಳಲಾಗುವುದು. ಕೇಂದ್ರಿದಂದ ನಮಗೆ ಮತ್ತಷ್ಟು ಪರಿಹಾರ ದೊರೆಯುವ ನಿರೀಕ್ಷೆ ಇದೆ. ಇದರ ಜೊತೆಗೆ ಬೆಳೆ ಪರಿಹಾರವೂ ದೊರೆಯಬಹುದಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಇಷ್ಟರ ನಡುವೆಯೂ ರಾಜ್ಯದ ಅನುದಾನದಲ್ಲೇ ತುರ್ತು ಕಾಮಗಾರಿಗಳನ್ನು ಮತ್ತು ಪರಿಹಾರಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.
ಕಾವೇರಿ ಜಲ ಅಭಿವೃದ್ಧಿ ನಿಗಮ, ಕೃಷ್ಣಾ ಜಲ ಅಭಿವೃದ್ಧಿ ನಿಗಮ ಹಾಗೂ ವಿಶ್ವೇಶ್ವರಯ್ಯ ಅಭಿವೃದ್ಧಿ ನಿಗಮಗಳ ವ್ಯಾಪ್ತಿಯಲ್ಲಿ ನೀರಾವರಿ ಕಾಮಗಾರಿ ಕೈಗೆತ್ತಿಕೊಳ್ಳಲು ಮತ್ತು ಹೊಲಗಳಿಗೆ ಹೊಸದಾಗಿ ನೀರುಣಿಸಲು ಒಟ್ಟಾರೆ ಎರಡು ಸಾವಿರ ಕೋಟಿ ರೂ. ಹಣವನ್ನು ಈ ಸಂಸ್ಥೆಗಳು ಸಾಲವಾಗಿ ಪಡೆಯಲು ಸರ್ಕಾರ ಅನುಮತಿ ನೀಡಿದೆ ಎಂದು ತಿಳಿಸಿದರು.
2021 ರ ಸಾರ್ವತ್ರಿಕ ರಜೆಗೆ ಅನುಮೋದನೆ ನೀಡಿದ್ದು, ಇದರಲ್ಲಿ 21 ಸಾರ್ವತ್ರಿಕ ರಜೆಗಳು ಮತ್ತು 19 ನಿರ್ಬಂಧಿತ ರಜೆಗಳಿಗೆ ಸಂಪುಟ ಅನುಮೋದನೆ ನೀಡಿದೆ ಎಂದರು.
ಹೊಸ ಜಿಲ್ಲೆಗೆ ಯಾವ ತಾಲ್ಲೂಕುಗಳು ಮತ್ತು ಪಂಚಾಯಿತಿಗಳನ್ನು ಸೇರಿಸಬೇಕು, ಅದರ ವ್ಯಾಪ್ತಿ ಮತ್ತು ವಿಸ್ತೀರ್ಣ ಎಷ್ಟಿರಬೇ ಕೆಂಬುದರ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು.
ನಂತರ ಬಳ್ಳಾರಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಒಮ್ಮತದಿಂದ ವಿಜಯ ನಗರ ಜಿಲ್ಲಾ ಸ್ಥಾಪನೆಗೆ ಸಮ್ಮತಿಸಿದ್ದಾರೆ ಎಂದು ರಾಮುಲು ಇದೇ ಸಂದರ್ಭದಲ್ಲಿ ತಿಳಿಸಿದರು.
ಮರಾಠ ಸಮುದಾಯ ನಿಗಮ ಸ್ಥಾಪಿಸಲು ಸಂಪುಟ ಸಮ್ಮತಿಸಿದೆ. ಈ ನಿಗಮಕ್ಕೆ ಎಷ್ಟು ಹಣ ನಿಗದಿ ಮಾಡಬೇಕೆಂಬುದರ ಬಗ್ಗೆ ಇನ್ನು ಚರ್ಚೆಯಾಗಿಲ್ಲ. ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ನಿಗಮ ಮಾಡುತ್ತದೆಯೇ ಹೊರತು, ಪ್ರಾಧಿಕಾರ ರಚನೆ ಮಾಡುತ್ತಿಲ್ಲ ಎಂದವರು ಸ್ಪಷ್ಟಪಡಿಸಿದರು.
ಒಂದು ಸಮುದಾಯದ ಅಭಿವೃದ್ಧಿ ವಿಷಯದಲ್ಲಿ ಯಾಕೆ ವಿರೋಧ ಮಾಡುತ್ತಿದ್ದಾರೆ. ಸರ್ಕಾರ ಕೆಲವು ನಿರ್ಧಾರ ತೆಗೆದುಕೊಂಡಾಗ ಪರ, ವಿರೋಧ ಕೇಳಿ ಬರುತ್ತದೆ. ಆದರೂ ಅಭಿವೃದ್ದಿ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಧುಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.