ಬಳಕೆ ಶುದ್ಧವಾಗಿದ್ದರೆ ಕನ್ನಡ ಭಾಷೆಗೆ ಅವಸಾನವಿಲ್ಲ

ಬಳಕೆ ಶುದ್ಧವಾಗಿದ್ದರೆ ಕನ್ನಡ ಭಾಷೆಗೆ ಅವಸಾನವಿಲ್ಲ - Janathavaniಅಂತರ್ಜಾಲ ಕನ್ನಡ ಕಬ್ಬದಲ್ಲಿ ಎಚ್‌.ಬಿ. ಮಂಜುನಾಥ್

ದಾವಣಗೆರೆ, ನ.15- ಯಾವುದೇ ಭಾಷೆಯಾಗಲಿ ಬಳಸುತ್ತಿದ್ದರೆ ಉಳಿಯುತ್ತದೆ, ಬಳಸದಿದ್ದರೆ ನಶಿಸುತ್ತದೆ. ಹಾಗೆ ಬಳಸುವಾಗ ಆ ಭಾಷೆಯು ಸಾಧ್ಯವಾದಷ್ಟು ಶುದ್ಧವಾಗಿರಬೇಕು, ಕಲಬೆರಕೆಯಾದರೆ ಕ್ರಮೇಣ ಭಾಷೆ ಅವನತಿ ಕಾಣುತ್ತದೆ ಎಂದು ಹಿರಿಯ ಪತ್ರಕರ್ತ ಎಚ್.ಬಿ ಮಂಜುನಾಥ್  ಅಭಿಪ್ರಾಯಪಟ್ಟರು.

ನಗರದ ಗ್ರಂಥ ಸರಸ್ವತಿ ಪ್ರತಿಭಾರಂಗವು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನೆರ ವೇರಿಸುತ್ತಿರುವ ಅಂತರ್ಜಾಲ ಕಾರ್ಯಕ್ರಮ ದಲ್ಲಿ `ಕರ್ನಾಟಕ ಏಕೀಕರಣ ಮತ್ತು ಕನ್ನಡ ಭಾಷೆ’ ಕುರಿತು ಅವರು ಮಾತನಾಡಿದರು.

ಯಾವುದೇ ಭಾಷೆಯ ಅವನತಿಗೆ ಮತ್ತೊಂದು ಭಾಷೆಯನ್ನು ಹೊಣೆ ಮಾಡುವ ಮೊದಲು ನಾವು ನಮ್ಮ ಭಾಷೆಯನ್ನು ಎಷ್ಟು ಶುದ್ಧವಾಗಿ ಮಾತನಾಡುತ್ತಿದ್ದೇವೆಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ನಾವೀಗ ಮಾತನಾಡುತ್ತಿರುವ ಕನ್ನಡದಲ್ಲಿ ಅನವಶ್ಯಕವಾಗಿ , ಅತಿಯಾಗಿ ಆಂಗ್ಲ ಪದಗಳನ್ನು ನಮಗರಿವಿಲ್ಲದೆ ಬಳಸುತ್ತಿದ್ದೇವೆ. ಇದಕ್ಕೆ ಆಂಗ್ಲ ಭಾಷೆ ಕಾರಣವಲ್ಲ, ನಾವೇ ಕಾರಣ. ನಮ್ಮ ಅಲಕ್ಷ್ಯವೇ ಕಾರಣವೆಂಬುದನ್ನು ನಾವರಿತಾಗ ನಮ್ಮ ಭಾಷಾ ಕಲಬೆರಕೆ ಕಡಿಮೆಯಾಗುತ್ತದೆ. ಅಂದಾಕ್ಷಣ ಮಾತಿನಲ್ಲಿ ನಡುನಡುವೆ ಆಂಗ್ಲ ಅಥವಾ ಅನ್ಯಭಾಷಾ ಪದಗಳನ್ನು ಬಳಸಲೇಬಾರದೆಂದಲ್ಲ. ಅನಿವಾರ್ಯ ವೆನಿಸಿದಾಗ ಅಥವಾ ಸೂಕ್ತ ಪದವಿಲ್ಲದಿದ್ದಾಗ, ಇದ್ದರೂ ಬಳಸುತ್ತಿರುವ ಅನ್ಯಭಾಷಾ ಪದವೇ ಜನಜನಿತ ಮತ್ತು ಸರಳವೆನಿಸಿದಾಗ ಮಾತ್ರ ಬಳಸಬಹುದು. 

ಆದರೆ, ಈಗೀಗಂತೂ ನಾವು ಮಾತನಾಡುವ ಕನ್ನಡ ಮಾತಿನಲ್ಲಿ ಅನವಶ್ಯಕ ವಾದ ಆಂಗ್ಲ ಪದಗಳೇ ಹೆಚ್ಚಾಗಿರುತ್ತವೆ ಎಂದರು. 

ಕರ್ನಾಟಕ ರಾಜ್ಯೋತ್ಸವ ಪ್ರೋಗ್ರಾಂ ಗ್ರಾಂಡಾಗಿ ಸೆಲಬ್ರೇಟ್‌ ಮಾಡಲು ಆರೆಂಜ್‌ಮೆಂಟೆಲ್ಲಾ ಮಾಡಿಕೊಂಡಿದ್ದೇವೆ. ನೀವೇ ಚೀಫ್‌ಗೆಸ್ಟು ಅಂತ ಫಿಕ್ಸ್‌ ಮಾಡಿಸಿದ್ದೇವೆ. ಪ್ಲೀಸ್‌ ಡೈರೀಲಿ ನೋಟ್‌ ಮಾಡ್ಕೋಬೇಕು, ನಿಮ್ದೇ ಮೇನ್ ಸ್ಪೀಚು, ಫ್ಲಾಗ್‌ ಹಾಸ್ಟಿಂಗು, ಪ್ರೊಸೆಷನ್ನನ್ನು ಮಾರ್ನಿಂಗ್ ಮಾಡಿರ್ತೀವಿ. ನೀವು ಬಂದ ಕೂಡ್ಲೆ ನಿಮ್ದೇ ಲೆಕ್ಚರು… ಹೀಗೇ ಮಾತಾಡ್ತಾ ಹೋಗ್ತಾರೆ!! ಹಾಗಾದ್ರೆ ಇದಕ್ಕೆಲ್ಲಾ ಕನ್ನಡ ಪದಗಳಿಲ್ಲವೇ? ಆಶ್ಚರ್ಯವೆಂದರೆ ಇವರಾರು ಆಂಗ್ಲ ಮಾಧ್ಯಮ ಶಾಲೆಗಳಿಂದ ಬಂದವರೆೇನೂ ಅಲ್ಲ. ಭಾಷಾ ಕಲಬೆರಕೆ ಈಗ ಗ್ರಾಮೀಣ ಜನರಲ್ಲೂ ಸಾಮಾನ್ಯವಾಗಿದೆ. ಇದಕ್ಕೆ ನಮ್ಮ ಖಾಸಗಿ ದೃಶ್ಯ ಮಾಧ್ಯಮಗಳು ಬಳಸುವ ಭಾಷೆಯೂ ಕಾರಣವಾಗಿದೆ ಎಂದು ಹೇಳಿದರು. 

ತಿನ್ನುವ ಅನ್ನಕ್ಕೆ `ಅನ್ನ’ ಎಂದು ಹೇಳದೆ `ರೈಸ್‌’ ಎಂದೇ ಹೇಳುತ್ತಿರುವ ನಾವು ಕನ್ನಡ ಭಾಷಾ ಅವನತಿಗೆ ಇನ್ನೊಬ್ಬರನ್ನು ಬೆಟ್ಟುಮಾಡ ಬಾರದು. ನಾವು ಆಚರಿಸುತ್ತಿರುವುದು ಅನ್ಯ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕರ್ನಾಟಕದ ನೆಲ ಒಂದಾಗಿ ವಿಶಾಲ ರಾಜ್ಯವಾದ ಕರ್ನಾಟಕ ರಾಜ್ಯೋತ್ಸವವನ್ನು. ಹಾಗಾಗಿ ಕನ್ನಡ ರಾಜ್ಯೋತ್ಸವ ಅನ್ನುವುದಕ್ಕಿಂತಾ ಕರ್ನಾಟಕ ರಾಜ್ಯೋತ್ಸವ ಅನ್ನುವುದು ಸೂಕ್ತ ಎಂದು ಅವರು ಸಲಹೆ ನೀಡಿದರು.

ಗ್ರಂಥ ಸರಸ್ವತಿಯ ಆರ್. ಶಿವಕುಮಾರ ಸ್ವಾಮಿ ಕುರ್ಕಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಮತಿ ಐಶ್ವರ್ಯ ವೈಶ್ರವಣ ಸ್ವಾಗತಿಸಿದರು.

error: Content is protected !!