ಶಾಸನಗಳು ಕಾವ್ಯ ರಚನೆಗೆ ಪ್ರೇರಣೆ

ರಾಜ್ಯದ ಸಹಕಾರಿ ಬ್ಯಾಂಕುಗಳು ದೇಶದಲ್ಲಿ ಮೊದಲ ಸ್ಥಾನದಲ್ಲಿವೆ: ಸಚಿವ ಸೋಮಶೇಖರ್

ದಾವಣಗೆರೆ, ನ. 17 – ಕೃಷಿ, ಆರೋಗ್ಯ, ವಿದ್ಯುತ್, ಹೈನುಗಾರಿಕೆ ಸೇರಿ ದಂತೆ, ಹತ್ತಾರು ವಲಯಗಳಲ್ಲಿ ಸಹಕಾರಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ‘ಸಹಕಾರ’ ಇಲ್ಲದ ಕ್ಷೇತ್ರವೇ ಇಲ್ಲ ಎನ್ನಬ ಹುದಾಗಿದೆ ಎಂದು ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸ ಲಾಗಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭವನ್ನು ಉದ್ಘಾಟಿಸಿ, ಅವರು ಮಾತನಾಡುತ್ತಿದ್ದರು.

ಬೀದರ್‌ನಲ್ಲಿ ಸಹಕಾರಿ ಸಂಸ್ಥೆಯ ಮೂಲಕ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುವ ಆಸ್ಪತ್ರೆ ತೆರೆಯಲಾಗಿದೆ. ಬೆಳಗಾವಿಯಲ್ಲಿ ಸಹಕಾರಿ ಸಂಸ್ಥೆಯ ಮೂಲಕ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ರಾಜ್ಯದ 2.43 ಕೋಟಿ ಜನರು ಸಹಕಾರಿ ಸಂಸ್ಥೆಗಳ ಸದಸ್ಯರಾಗಿದ್ದು, ಲಕ್ಷಾಂತರ ಜನರಿಗೆ ಈ ವಲಯ ಉದ್ಯೋಗ ನೀಡುತ್ತಿದೆ ಎಂದವರು ತಿಳಿಸಿದರು.

 ರಾಜ್ಯದ ಸಹಕಾರಿ ಬ್ಯಾಂಕುಗಳ ಕಾರ್ಯ ನಿರ್ವಹಣೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ರಾಜ್ಯದ 289 ಸಹಕಾರ ಬ್ಯಾಂಕುಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜನರ ಠೇವಣಿಗಳನ್ನು ನಿರ್ವಹಿಸುತ್ತಿವೆ, ಉದ್ಯೋಗ ಹಾಗೂ ಡಿವಿಡೆಂಡ್ ಕಲ್ಪಿಸುತ್ತಾ ಬಂದಿವೆ. ಬೆಂಗಳೂರಿನ ಒಂದು ಬ್ಯಾಂಕ್ ಸಮಸ್ಯೆಗೆ ಸಿಲುಕಿದೆ ಎಂಬ ಮಾತ್ರಕ್ಕ ಉಳಿದವುಗಳಿಗೆ ಕಳಂಕ ಬಳಿಯಬಾರದು ಎಂದವರು ಹೇಳಿದರು.

ಸಹಕಾರ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಮಾತನಾಡಿ, ಸಹಕಾರಿ ಸಂಘಗಳು ಹೈನುಗಾರಿಕೆ, ಮೀನುಗಾರಿಕೆ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ನೆರವು ನೀಡುವ ಮೂಲಕ ಆರ್ಥಿಕ ಸದೃಢತೆಗೆ ಸಹಕಾರ ನೀಡಬೇಕಿದೆ ಎಂದರು.

ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮಾತನಾಡಿ, ಸಹಕಾರಿ ಸಂಸ್ಥೆಗಳು ಖಾಸಗಿ ಬ್ಯಾಂಕುಗಳ ರೀತಿ ಲಾಭಕ್ಕಾಗಿ ಅನಾರೋಗ್ಯಕರ ಪೈಪೋಟಿ ನಡೆಸಬಾರದು. ಈ ರೀತಿ ಮುಂದುವರೆದರೆ ಸಹಕಾರಿ ತತ್ವಕ್ಕೆ ಅರ್ಥವಿರುವುದಿಲ್ಲ.  ಸಹಕಾರಿ ಕ್ಷೇತ್ರವನ್ನು ಆರೋಗ್ಯಕರವಾಗಿ ಬೆಳೆಸಬೇಕಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಜೆ.ಆರ್ ಷಣ್ಮುಖಪ್ಪ, ಸಹಕಾರಿ ಸಂಸ್ಥೆಗಳ ಸದಸ್ಯರಿಗೆ ಮತ್ತೆ ಯಶಸ್ವಿನಿ ಆರೋಗ್ಯ ವಿಮೆ ಆರಂಭಿಸಬೇಕು. ನಿರ್ದೇಶಕ ಸ್ಥಾನ ತೆರವಾದಾಗ ಚುನಾವಣೆ ಕಡ್ಡಾಯಗೊಳಿಸುವುದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎನ್.ಎ. ಮುರುಗೇಶ್, ಸಹಕಾರಿ ವಲಯ ದೇಶದ ಮೂರನೇ ದೊಡ್ಡ ವಲಯವಾಗಿದೆ. ಜಿ.ಡಿ.ಪಿ.ಯಲ್ಲಿ ಸೇ.8ರಷ್ಟು ಪಾಲು ಹೊಂದಿದ್ದು, ಒಟ್ಟು ಉದ್ಯೋಗದಲ್ಲಿ ಶೇ.13.30ರಷ್ಟು ಪಾಲು ಹೊಂದಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿ ರೈತರಿಗೆ ಸಾಲ ದೊರೆಯುವುದು ದುರ್ಲಭವೆನಿಸಿದ ಸಂದರ್ಭಗಳಲ್ಲಿ ಸಹಕಾರಿ ಬ್ಯಾಂಕ್‍ಗಳು ರೈತರಿಗೆ ನೆರವು ನೀಡಿ, ಅವರನ್ನು ಆರ್ಥಿಕವಾಗಿ ಸದೃಢರಾಗಲು ಸಹಕರಿಸುತ್ತಿವೆ ಎಂದರು.

ಸಮಾರಂಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ. ರಾಮಚಂದ್ರ,  ಶಾಸಕರಾದ ಪ್ರೊ. ಎನ್. ಲಿಂಗಣ್ಣ, ಎಸ್. ರಾಮಪ್ಪ, ಜಿ.ಪಂ. ಅಧ್ಯಕ್ಷೆ ದೀಪಾ ಜಗದೀಶ್,  ಪಾಲಿಕೆ ಮಹಾಪೌರರಾದ ಬಿ.ಜೆ. ಅಜಯ್‍ಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಆರ್.ಎಂ. ರವಿ, ದಾವಣಗೆರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ. ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.  

ಈ ಸಂದರ್ಭದಲ್ಲಿ ಸಹಕಾರಿ ವಲಯದ ಪ್ರಮುಖರಾದ ಆರ್.ಜಿ. ಶ್ರೀನಿವಾಸಮೂರ್ತಿ, ಎಂ.ಜಿ. ಸಂಗಮೇಶ್ವರ ಗೌಡ್ರು, ಜಯಕುಮಾರ್, ತಿಪ್ಪೇಸ್ವಾಮಿ ಏಕಬೋಟೆ, ಗುರುಸಿದ್ದಯ್ಯ, ಲೋಕಿಕೆರೆ ಸಿದ್ದಪ್ಪ, ಕೆ. ಅಣ್ಣಪ್ಪ, ಹೆಚ್.ಪಿ. ಪರಮೇಶ್ವರಪ್ಪ, ಎನ್.ಎ. ಮುರುಗೇಶ್ ಅವರನ್ನು ಸನ್ಮಾನಿಸಲಾಯಿತು.

 ಸಂಗೀತಾ ರಾಘವೇಂದ್ರ ಪ್ರಾರ್ಥಿಸಿದರು. ಹೆಚ್.ಬಿ. ಮಂಜುನಾಥ್ ನಿರೂಪಿಸಿದರು. ಆರ್.ಜಿ. ಶ್ರೀನಿವಾಸಮೂರ್ತಿ ವಂದನಾರ್ಪಣೆ ನೆರವೇರಿಸಿದರು.

error: Content is protected !!