ಚನ್ನಗಿರಿ, ನ. 13 – ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಮುಂದಿನ ಎರ ಡೂವರೆ ವರ್ಷಗಳವರೆಗೆ ಅಧಿ ಕಾರದಲ್ಲಿ ಮುಂದುವರೆಯಲಿ ದ್ದಾರೆ. ಅವರ ನೇತೃತ್ವದಲ್ಲೇ ಬಿಜೆಪಿ ಚುನಾವಣೆಗೆ ಹೋದರೆ ಮತ್ತೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಲ್ಲಿ ಅನುಮಾನವಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.
ಇಲ್ಲಿನ ಸರ್ಕಾರಿ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜನಸ್ಪಂದನ ಹಾಗೂ ವಿವಿದ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇತ್ತೀಚೆಗೆ ನಡೆದ ವಿಧಾನಸಭಾ ಉಪ ಚುನಾವಣೆ ಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಎರಡೂ ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ. ಪರಿಷತ್‌ಗೆ ನಡೆದ ನಾಲ್ಕು ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಎಲ್ಲಾ ಸ್ಥಾನಗಳನ್ನು ಗೆದ್ದಿದೆ ಎಂದು ಹೇಳಿದರು.
ನಾಲ್ಕು ಪರಿಷತ್ ಸ್ಥಾನಗಳ ಪೈಕಿ ಒಂದು ಮಾತ್ರ ಚುನಾವಣೆಗೆ ಮುಂಚೆ ಬಿಜೆಪಿ ಬಳಿ ಇತ್ತು. ಈಗ ನಾಲ್ಕರಲ್ಲೂ ಬಿಜೆಪಿ ಗೆದ್ದಿದೆ. ಯಡಿಯೂರಪ್ಪ ನಾಯಕತ್ವದ ಈ ಗೆಲುವುಗಳು ಅವಿಸ್ಮರಣೀಯ ಎಂದು ಸಿದ್ದೇಶ್ವರ ಹೇಳಿದ್ದಾರೆ.
ಮನೆ ಬಾಗಿಲಿಗೇ ಸರ್ಕಾರ, ಕಾಟ ಇಲ್ಲದೇ ಕೆಲಸ
ತಮ್ಮ ತಂದೆ ನಿಧನರಾದ ನಂತರ ತಾಯಿ ವಿಧವಾ ವೇತನ ಪಡೆಯಲು ತಹಶೀಲ್ದಾರ್ ಕಚೇರಿಗೆ ಅಲೆದಾಡಿದ ಹಾಗೂ ಕಷ್ಟ ಎದುರಿಸಿದ್ದನ್ನು ನೆನಪಿಸಿ ಕೊಂಡ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಅಂತಹ ಪರಿಸ್ಥಿತಿ ಮತ್ತೆ ಬರಬಾರದು ಎಂದು ಮನೆ ಬಾಗಿಲಿಗೆ ಸರ್ಕಾರ ತರುವ ಜನಸ್ಪಂದನ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ವಿಧವೆಯರು, ವೃದ್ಧರು ಮತ್ತಿತರರಿಗೆ ಈಗ ಮನೆ ಬಾಗಿಲಿಗೇ ಯಾವುದೇ ಕಾಟ ಇಲ್ಲದೇ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಪಟಾಕಿ ಬೇಡ, ದೀಪ ಹಚ್ಚಿ : ಸಚಿವ ಭೈರತಿ ಬಸವರಾಜ್
ಪರಿಸರ ಹಾನಿ ತಡೆಯಲು ಹಾಗೂ ಕೊರೊನಾ ಹರಡುವುದನ್ನು ತಡೆಯಲು ಪಟಾಕಿ ನಿಷೇಧಿಸುವ ದಿಟ್ಟ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೆಗೆದುಕೊಂಡಿದ್ದಾರೆ ಎಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ದೀಪಾವಳಿಯಲ್ಲಿ ಪಟಾಕಿ ಹೊಡೆಯದೇ ಮನೆಯಲ್ಲಿ ದೀಪ ಹಚ್ಚಿ ಎಂದು ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ, ಕೊರೊನಾ ಬಂದವರಿಗೆ ಉಸಿರು ಕಟ್ಟಿದ ಕಾರಣಕ್ಕಾಗಿಯೇ ಸಾವು ಸಂಭವಿಸುತ್ತದೆ. ಹೀಗಾಗಿ ಕೊರೊನಾ ರೋಗಿಗಳಿಗೆ ಪಟಾಕಿ ಇನ್ನಷ್ಟು ಸಮಸ್ಯೆ ತರುತ್ತದೆ. ಕೊರೊನಾ ಹೆಮ್ಮಾರಿ ಹೋದ ನಂತರ ಪಟಾಕಿ ಹೊಡೆಯೋಣ ಎಂದರು.
ಸಮಾರಂಭದಲ್ಲಿ ಮಾತನಾಡಿದ ಶಾಸಕ ಹಾಗೂ ಕೆ.ಎಸ್.ಡಿ.ಎಲ್. ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ, ಯಡಿಯೂರಪ್ಪ ನಾಯಕತ್ವ ಬದಲಾಗುವುದಿಲ್ಲ. ಅವರೇ ಮುಂದುವರೆಯ ಬೇಕು ಎಂಬುದು ರಾಜ್ಯದ ಜನತೆಯ ಇಚ್ಛೆ. ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲು ಅವರ ನಾಯಕತ್ವ ಬೇಕು ಎಂಬ ಭಾವನೆ ಇದೆ ಎಂದರು.
ಬಡವರು ಹಾಗೂ ರೈತರ ಬಗ್ಗೆ ಯಡಿಯೂರಪ್ಪ ಕಾಳಜಿ ಹೊಂದಿದ್ದಾರೆ ಎಂದ ವಿರೂಪಾಕ್ಷಪ್ಪ, ಬಿ.ವೈ. ವಿಜಯೇಂದ್ರ ಅವರು ಉಪ ಚುನಾವಣೆಯ §ಎಕ್ಸ್ ಪರ್ಟ್’ ಆಗಿದ್ದಾರೆ. ಅವರಲ್ಲಿ ಒಳ್ಳೆಯ ನಾಯಕತ್ವ ಗುಣವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.