ತಾಲ್ಲೂಕು ಕಸಾಪದ ಅಂತರ್ಜಾಲ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಆನಂದ ಋಗ್ವೇದಿ
ದಾವಣಗೆರೆ, ನ.13- `ಕಾವ್ಯ ಮೀಮಾಂಸೆ’ ಯು ನಮ್ಮ ಭಾರತೀಯ ಕಾವ್ಯ ಪರಂಪರೆಗೆ ಸಿಕ್ಕ ಒಂದು ಅಮೂಲ್ಯ ಕೊಡುಗೆ ಎಂದು ಹಿರಿಯ ಸಾಹಿತಿ ಡಾ.ಆನಂದ ಋಗ್ವೇದಿ ಹೇಳಿದರು.
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 65 ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಅಂತರ್ಜಾಲದ ಮೂಲಕ ಆಯೋಜಿಸಲಾಗಿರುವ ಕನ್ನಡ ನುಡಿ ಹಬ್ಬದ 7 ನೇ ದಿನದ ಕಾರ್ಯಕ್ರಮದಲ್ಲಿ ಅವರು `ಸಮಕಾಲೀನ ಕಾವ್ಯದ ಸವಾಲುಗಳು – ಬಿಕ್ಕಟ್ಟುಗಳು’ ಕುರಿತು ಉಪನ್ಯಾಸ ನೀಡಿದರು.
ಕಾವ್ಯ ಮೀಮಾಂಸೆ ಕುರಿತಾಗಿ ಎರಡು ವಿಷಯಗಳನ್ನು ಬಹು ಮುಖ್ಯವಾಗಿ ಗ್ರಹಿಸಬೇಕಾಗಿದೆ. ಅದರಲ್ಲಿ ಒಂದು ವಿವೇಕ ಮತ್ತು ಇನ್ನೊಂದು ಔಚಿತ್ಯ. ಈ ವಿವೇಕ ಮತ್ತು ಔಚಿತ್ಯ ಇಲ್ಲದೇನೇ ಕಾವ್ಯ ಇಲ್ಲ ಅಥವಾ ಇವುಗಳ ಹೊರತಾಗಿ ನಮ್ಮ ಕಾವ್ಯ ಸಂಪೂರ್ಣವಾಗಲು ಸಾಧ್ಯವೇ ಇಲ್ಲ.
ಕವಿತೆಯನ್ನು ತಾನು ಏಕೆ ಬರೆಯುತ್ತಿದ್ದೇನೆ, ವರ್ತಮಾನಕ್ಕೆ ಇದರ ಅಗತ್ಯತೆ ಇದೆಯೇ? ಇದರ ತಾತ್ವಿಕತೆ ಯೇನು? ಕವಿತೆ ಕುರಿ ತಾಗಿ ತನ್ನ ಯೋಚನೆ, ಭಾವನೆಗಳೇನು? ಎಂಬುದು ವಿವೇಕ.
ಕವಿತೆ ಸಾರ್ವಕಾಲಿಕವಾಗ ಬೇಕಾದರೆ ವಿವೇಕ ಅತ್ಯಗತ್ಯ. ತನ್ನ ಕವಿತೆ ಮತ್ತೊಬ್ಬರಿಗೆ ಮುಜುಗರವನ್ನು ತರಬಾರದೆಂಬುದು ಸಹ ವಿವೇಕ. ಈ ವಿವೇಕ ಸರಿಯೇ.. ತಪ್ಪೇ.. ಇದು ಸಾಮಾಜಿಕ ಜೀವನಕ್ಕೆ ಸಮರ್ಪಕವಾಗುವಂ ತದ್ದೇ ಅಲ್ಲವೇ.. ಇವೆಲ್ಲವೂ ಯೋಚನೆ ಮಾಡು ವುದೇ ಔಚಿತ್ಯ ಪ್ರಜ್ಞೆಯಾಗಿದೆ ಎಂದರು.
ಕಾವ್ಯ ಕೃಷಿಗೆ ಬಹಳ ಮುಖ್ಯವಾಗಿ ಬೇಕಾಗಿರುವುದು ಭಾಷೆ. ಸುಂದರವಾದ ಕನ್ನಡ ಭಾಷೆ ನಮಗೆ ದೊರೆತಿರುವುದು ಒಂದು ದೊಡ್ಡ ಉಡುಗೊರೆಯಾಗಿದೆ. ಏಕೆಂದರೆ ನಮ್ಮ ಪೂರ್ವ ಪರಂಪರೆಯ 2500 ವರ್ಷಗಳ ಹಿಂದಿನಿಂದ ಹಾದು ಬಂದಿರುವ ಒಂದು ವಿಶೇಷವಾದ, ಅದ್ಭುತವಾದ ಭಾಷೆಯನ್ನು ನಾವು ಬಳಸುತ್ತಾ ಬಂದಿದ್ದೇವೆ ಎಂದರು.
ವರ್ತಮಾನದ ಕಾವ್ಯವು ಧಾರ್ಮಿಕ, ಸಾಮಾಜಿಕ ಹಾಗೂ ಆರ್ಥಿಕವಾದ ಆಯಾಮಗಳನ್ನು ಪ್ರತಿಬಿಂಬಿಸುತ್ತದೆ. ಕಾವ್ಯದ ಧರ್ಮವು ಎಲ್ಲ ಧರ್ಮಗಳನ್ನು ನನ್ನ ಧರ್ಮದ ಹಾಗೆ ಎಂದು ಪರಿಭಾವಿಸಬೇಕು ಅಥವಾ ಸ್ವೀಕರಿಸುವಂತದ್ದಾಗಿದೆ. ಹಾಗೆ ಸ್ವೀಕರಿಸಿದಾಗ ಮಾತ್ರ ಕಾವ್ಯ ತನ್ನ ಧರ್ಮವನ್ನು ಎತ್ತಿ ಹಿಡಿಯುವುದಕ್ಕೆ ಸಾಧ್ಯವಾಗುತ್ತದೆ. ಇದೇ ಮಾನವೀಯ ಧರ್ಮ ಎಂಬುದಾಗಿ ಡಾ. ಆನಂದ ಋಗ್ವೇದಿ ಹೇಳಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ದಾವಣಗೆರೆ ತಾಲ್ಲೂಕು ಕ. ಸಾ. ಪ. ಅಧ್ಯಕ್ಷ ಬಿ. ವಾಮದೇವಪ್ಪ, ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಕಾವ್ಯಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಉತ್ಕೃಷ್ಟ ಕವಿತೆಗಳು ಸಮಾಜದ ಹಲವಾರು ಸಮಸ್ಯೆಗಳನ್ನು ಪ್ರತಿಬಿಂಬಿಸುವುದಲ್ಲದೇ ಪರಿಹಾರವನ್ನೂ ಸೂಚಿಸುವಂತಿರುತ್ತದೆ. ಇಂತಹ ಕವಿತೆಗಳು ಸಾರ್ವಕಾಲಿಕವಾಗಿ ಜನ ಮಾನಸದಲ್ಲಿ ಉಳಿಯಬಲ್ಲವು ಎಂದು ಹೇಳಿದರು.
ಜಿಲ್ಲಾ ಕ.ಸಾ.ಪ. ಕಛೇರಿ ಕಾರ್ಯದರ್ಶಿ ಜಿ. ಆರ್. ಷಣ್ಮುಖಪ್ಪ ಸ್ವಾಗತಿಸಿದರು. ವಿನಾಯಕ ಬಡಾವಣೆ ವಿನೂತನ ಮಹಿಳಾ ಸಮಾಜದ ತಂಡದವರಾದ ಮಮತಾ ಶ್ರೀಧರ್, ರೇಖಾ ಓಂಕಾರಪ್ಪ, ಶೈಲಜಾ ತಿಮ್ಮೇಶ್ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.