ಅನುದಾನಕ್ಕೆ ಸಿಎಂ ಸಮ್ಮತಿ : ಮೇಯರ್ ಬಿ.ಜಿ. ಅಜಯ್ ಕುಮಾರ್
ದಾವಣಗೆರೆ, ನ. 12 – ನಗರವನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸುವ ಸದುದ್ಧೇಶದಿಂದ ಮಹಾತ್ಮ ಗಾಂಧಿ ವಿಕಾಸ ಯೋಜನೆಯಡಿಯಲ್ಲಿ 125 ಕೋಟಿ ರೂ. ಗಳ ವಿಶೇಷ ಅನುದಾನವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬಿಡುಗಡೆ ಮಾಡಿದ್ದಾರೆ.
ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ, ದಾವಣಗೆೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮತ್ತು ಮಹಾನಗರ ಪಾಲಿಕೆ ಮಹಾಪೌರ ಬಿ.ಜಿ. ಅಜಯ್ ಕುಮಾರ್ ಅವರುಗಳ ನೇತೃತ್ವದ ನಿಯೋಗವು ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಈ ಅನುದಾನ ನೀಡಿದ್ದಾರೆ.
ಒಂದು ಲಕ್ಷ ರೂ.ಗಳೊಳಗಿನ ತುರ್ತು ಕಾಮಗಾರಿಗಳನ್ನು ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲದೇ ಕೈಗೊಳ್ಳಲು ಮಹಾ ಪೌರರಿಗೆ ಇದ್ದ ಅಧಿಕಾರವನ್ನು 5 ಲಕ್ಷ ರೂ. ಗಳವರೆಗೆ ಹೆಚ್ಚಿಸಿ ನೀಡಲು ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ ಎಂದು ಮಹಾಪೌರ ಅಜಯ್ ಕುಮಾರ್ `ಜನತಾವಾಣಿ’ಗೆ ತಿಳಿಸಿದ್ದಾರೆ.
ಸಂಸದ ಸಿದ್ದೇಶ್ವರ್,ಶಾಸಕ ರವೀಂದ್ರನಾಥ್ ಮೇಯರ್ ಅಜಯ್ಕುಮಾರ್ ನೇತೃತ್ವದ ನಿಯೋಗ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಿಎಂ
ಸ್ಥಗಿತಗೊಂಡಿದ್ದ ಯೋಜನೆಗೆ ಮರು ಚಾಲನೆ : ದಾವಣಗೆರೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಾದ ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಿ ನಗರಪಾಲಿಕೆಯು ಈ ಹಿಂದೆ ಸಲ್ಲಿಸಿದ್ದ ಪ್ರಸ್ತಾವನೆಗೆ ಮಹಾತ್ಮ ಗಾಂಧಿ ವಿಕಾಸ ಯೋಜನೆಯಡಿಯಲ್ಲಿ 125 ಕೋಟಿ ರೂ. ಗಳ ವಿಶೇಷ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಈ ಅನುದಾನ ಬಿಡುಗಡೆಗೆ ಸರ್ಕಾರ ತಡೆ ಹಿಡಿದಿತ್ತು. ಇದೀಗ ಸಂಸದರು ಮತ್ತು ಶಾಸಕರ ನೇತೃತ್ವದಲ್ಲಿ ತಾವು ಮಾಡಿಕೊಂಡ ಮನವಿ ಮೇರೆಗೆ ಆ ಅನುದಾನವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮ್ಮತಿಸಿದ್ದಾರೆ ಎಂದು ಮಹಾಪೌರ ಬಿ.ಜಿ. ಅಜಯ್ ಕುಮಾರ್ ತಿಳಿಸಿದ್ದಾರೆ.
ಸಾರ್ವಜನಿಕರ ಸಮಸ್ಯೆಗಳಿಗೆ ತತ್ ಕ್ಷಣವೇ ಸ್ಪಂದಿಸುವ ನಿಟ್ಟಿನಲ್ಲಿ `ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’ ಶೀರ್ಷಿಕೆಯಡಿಯ ವಿನೂತನ ಕಾರ್ಯಕ್ರಮವನ್ನು ತಾವು ನಡೆಸಲುದ್ದೇಶಿಸಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರತಿ ವಾರ್ಡಿನ ಅಭಿವೃದ್ಧಿಗಾಗಿ ತಲಾ 1 ಕೋಟಿ ರೂ. ಗಳಂತೆ ಒಟ್ಟು ಎಲ್ಲಾ 45 ವಾರ್ಡುಗಳಿಗೂ ಅಗತ್ಯವಾಗಿರುವ 45 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡುವಂತೆ ತಾವು ಮಾಡಿಕೊಡ ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅಜಯ್ ಕುಮಾರ್ ವಿವರಿಸಿದ್ದಾರೆ.
125 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿರುವ ಮುಖ್ಯಮತ್ರಿ ಯಡಿಯೂರಪ್ಪ ಮತ್ತು ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವುದರ ಮೂಲಕ ಸಹಕರಿಸಿದ ಸಂಸದ ಸಿದ್ದೇಶ್ವರ, ಹಿರಿಯ ಶಾಸಕ ರವೀಂದ್ರನಾಥ್, ಸಚಿವ ಭೈರತಿ ಬಸವರಾಜ್ ಅವರುಗಳಿಗೆ ಮೇಯರ್ ಅಜಯ್ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.
ನಗರಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎಸ್.ಟಿ. ವೀರೇಶ್, ಪ್ರಸನ್ನ ಕುಮಾರ್ ಅವರುಗಳಲ್ಲದೇ, ಸದಸ್ಯರು, ಆಯುಕ್ತ ವಿಶ್ವನಾಥ ಮುದಜ್ಜಿ ನಿಯೋಗದಲ್ಲಿದ್ದರು.