ಚಿಕಿತ್ಸೆ ಸಿಗದಿದ್ದರೆ ಅಧಿಕಾರಿಗಳೇ ಹೊಣೆ

ಖಾಸಗಿ ಆಸ್ಪತ್ರೆ ಸಹಕಾರ ನೀಡದಿದ್ದರೆ ಕ್ರಿಮಿನಲ್ ಪ್ರಕರಣ : ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಎಚ್ಚರಿಕೆ

ದಾವಣಗೆರೆ, ಆ. 7 – ಜಿಲ್ಲೆಯಲ್ಲಿ ಕೊರೊನಾ ಪರಿಸ್ಥಿತಿ ಕಳೆದ ಮೂರ್ನಾಲ್ಕು ದಿನಗಳಿಂದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೊರೊನಾ ಹಾಗೂ ಕೊರೊನೇತರ ಇಬ್ಬರಿಗೂ ಆಸ್ಪತ್ರೆಯಲ್ಲಿ ಬೆಡ್‌ ಗಳಿಲ್ಲದೇ ಸಾವನ್ನಪ್ಪುತ್ತಿದ್ದಾರೆ. ಹತ್ತಾರು ಆಸ್ಪತ್ರೆಗಳಿಗೆ ಅಲೆದರೂ ಚಿಕಿತ್ಸೆ ಸಿಗುತ್ತಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕರೆಯಲಾಗಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಹಲವಾರು ಸದಸ್ಯರು, ಕಳೆದ ವಾರದಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಆದರೆ, ಖಾಸಗಿ ಆಸ್ಪತ್ರೆಗಳು ಬೆಡ್ ಇಲ್ಲ ಎಂದು ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವುದಿರಲಿ ಗೌರವವನ್ನೂ ಕೊಡುತ್ತಿಲ್ಲ ಎಂದು ಹೇಳಿದರು.

ಗ್ರಾಮ ಮಟ್ಟದಲ್ಲಿ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ. ಆದರೆ, ಸಮಿತಿಗಳಿಗೆ ಯಾವುದೇ ಅನುದಾನವಿಲ್ಲ. ಮಾಸ್ಕ್ ಹಾಗೂ ಸ್ಯಾನಿಟೈಜರ್ ಖರೀದಿಸಲೂ ಹಣ ಇಲ್ಲ. ದಾವಣಗೆರೆಗೆ ಬರಲು ಹೆದರುತ್ತಿರುವ ಜನರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದಲೇ ಜ್ವರಕ್ಕೆ ಗುಳಿಗೆ ಪಡೆಯುತ್ತಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಉಲ್ಬಣಿಸುತ್ತಿದೆ ಎಂದು ಸದಸ್ಯರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಸದಸ್ಯ ಬಸವಂತಪ್ಪ, ಆಲೂರಿನ ಮಹಿಳೆಯೊಬ್ಬರು ನಿನ್ನೆ ರಾತ್ರಿ 1 ಗಂಟೆಯವರೆಗೂ ದಾಖಲಾಗಲು ಹಲವಾರು ಆಸ್ಪತ್ರೆಗಳಿಗೆ ಅಲೆದು ಸಾವನ್ನಪ್ಪಿದ್ದಾರೆ. ಗಾಂಧಿನಗರದ 21 ವರ್ಷದ ಪೌರ ಕಾರ್ಮಿಕರೊಬ್ಬರು ವೆಂಟಿಲೇಟರ್‌ ಸಿಗದೇ ಕೊನೆಯುಸಿರೆಳೆದಿದ್ದಾರೆ ಎಂದರು.

ಕೊರೊನಾ ಟೆಸ್ಟ್ ಕೇಂದ್ರಗಳನ್ನು ಸಂಜೆ 5 ಗಂಟೆಗೆ ಮುಚ್ಚುತ್ತಿದ್ದಾರೆ. ಇದರಿಂದಾಗಿ ಆಸ್ಪತ್ರೆಗೆ ಸಂಜೆ ನಂತರ ಬಂದವರು ಪರೀಕ್ಷೆಗಾಗಿ ಮರು ದಿನದವರೆಗೂ ಕಾಯಬೇಕಿದೆ. ಅಷ್ಟರಲ್ಲೇ ಜೀವಕ್ಕೆ ಏನಾ ದರೂ ಆದರೆ ಗತಿ ಏನು? ಎಂದವರು ಪ್ರಶ್ನಿಸಿದರು.

ನಿನ್ನೆ ನಗರದ ಯಾವ ಆಸ್ಪತ್ರೆಯಲ್ಲೂ ವೆಂಟಿಲೇಟರ್ ಸಿಗುತ್ತಿಲ್ಲ. 21 ವರ್ಷದ ಪೌರ ಕಾರ್ಮಿಕನ ತಾಯಿ ದಿನಕ್ಕೆ 20 ಸಾವಿರ ರೂ.ಗಳಾದರೂ ಕೊಡುತ್ತೇವೆ, ವೆಂಟಿಲೇಟರ್ ವ್ಯವಸ್ಥೆ ಮಾಡಿಸಿ ಎಂದು ಗೋಳಾಡುತ್ತಿದ್ದರು. ಆದರೂ, ಎಲ್ಲಿಯೂ ನೆರವು ಸಿಗಲಿಲ್ಲ ಎಂದು ಬಸವಂತಪ್ಪ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಈ ಬಗ್ಗೆ ಡಿ.ಹೆಚ್.ಒ. ಡಾ. ರಾಘವೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೇ, ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಪೊಲೀಸ್, ಕೆಇಬಿ ಹಾಗೂ ಒಳಚರಂಡಿಗೆ ಸಂಬಂಧಿಸಿದ ಅಧಿಕಾರಿಗಳು ಇರಬೇಕು. ಖಾಸಗಿ ಆಸ್ಪತ್ರೆಗಳು ಸಹಕಾರ ನೀಡದೇ ಹೋದರೆ ತಕ್ಷಣವೇ ಮೂಲಭೂತ ಸೌಲಭ್ಯಗಳನ್ನು ನಿಲ್ಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯರು ಕೇಳಿದಾಗಲೂ ಅಧಿಕಾರಿಗಳು ಸ್ಪಂದಿಸುವುದಿಲ್ಲ ಎಂದರೆ ಹೇಗೆ? ಯಾವುದೇ ರೋಗಿಗೆ ಯಾವುದೇ ಚಿಕಿತ್ಸೆ ಅಗತ್ಯವಾದರೂ ಅದಕ್ಕೆ ಸೌಲಭ್ಯ ಕಲ್ಪಿಸುವುದು ಅಧಿಕಾರಿಗಳ ಹೊಣೆ. ವೆಂಟಿಲೇಟರ್‌ ಇರಲಿ, ಬೆಡ್‌ಗಳೇ ಇರಲಿ ರೋಗಿಗಳಿಗೆ ಅಗತ್ಯವಾದ ರೀತಿಯಲ್ಲಿ ಸ್ಪಂದಿಸಬೇಕು ಎಂದು ತಿಳಿಸಿದರು.

ಪ್ರತಿ ಆಸ್ಪತ್ರೆಗೂ ಸಮಿತಿ ಮಾಡುವಂತೆ ತಿಳಿಸಿದ್ದರೂ ಸಮಿತಿ ರಚಿಸಿಲ್ಲ. ಯಾರಾದರೂ ಚಿಕಿತ್ಸೆ ಸಿಗದೇ ಅಲೆದಾಡಿ ಸಾವನ್ನಪ್ಪಿದ್ದರೆ ಅದಕ್ಕೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುತ್ತೇನೆ ಎಂದು ಹೇಳಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರೆ ಇಲ್ಲವೇ ಅವಮಾನಿಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಹೇಳಿದರು.

ಕೋವಿಡ್ ಬೆಡ್‌ಗಳು, ಆಕ್ಸಿಜನ್ ಬೆಡ್, ವೆಂಟಿಲೇಟರ್‌ಗಳ ಸಂಖ್ಯೆ ಹೆಚ್ಚಿಸಿ. ಆಸ್ಪತ್ರೆಗಳ ಸೌಲಭ್ಯಗಳನ್ನು ಹೆಚ್ಚಿಸಬೇಕು. ಇದರಿಂದ ಕೊರೊನಾ ನಂತರದಲ್ಲೂ ರೋಗಿಗಳಿಗೆ ಹೆಚ್ಚು ನೆರವು ಸಿಗುತ್ತದೆ ಎಂದು ತಿಳಿಸಿದರು.

ಆರೋಗ್ಯ ಮಿತ್ರ ಯೋಜನೆಯಡಿ ಬಡವರಿಗೆ ಉಚಿತ ಕೊರೊನಾ ಪರೀಕ್ಷೆ ನಡೆಸಲು ಕ್ರಮ ತೆಗೆದುಕೊಳ್ಳಬೇಕು ಹಾಗೂ ದಿನದ 24 ಗಂಟೆಯೂ ಟೆಸ್ಟ್ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು ಎಂದವರು ಇದೇ ಸಂದರ್ಭದಲ್ಲಿ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾಸ್ಪತ್ರೆಯಲ್ಲಿ 430 ಬೆಡ್‌ಗಳಿದ್ದವು. ಅವುಗಳ ಸಾಮರ್ಥ್ಯವನ್ನು 900ಕ್ಕೆ ಹೆಚ್ಚಿಸಿದರೂ ಸಿಬ್ಬಂದಿ ಅಷ್ಟೇ ಇದ್ದಾರೆ. ಸಿಬ್ಬಂದಿಯ ಕೊರತೆ ಇದೆ ಎಂದು ಹೇಳಿದರು.

ಜಿ.ಪಂ. ಸದಸ್ಯ ಸಿ.ಜಿ. ಲಿಂಗಪ್ಪ ಮಾತನಾಡಿ, ಹಳ್ಳಿಗಳಲ್ಲಿ ಕೊರೊನಾಗೆ ಹೆದರಿ ರೈತರು ಕೂಲಿ ಕೆಲಸಕ್ಕೆ ಕರೆಯಲೂ ಅನುಮಾನ ಪಡುತ್ತಿದ್ದಾರೆ. ಗ್ರಾಮಗಳಲ್ಲಿ ಆರೋಗ್ಯ ತಪಾಣೆ ಹಾಗೂ ಟೆಸ್ಟ್‌ಗಳನ್ನು ನಡೆಸಿಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ದೀಪಾ ಜಗದೀಶ್, ಜಿ.ಪಂ. ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ್, ಉಪ ಕಾರ್ಯದರ್ಶಿ ಆನಂದ್ ಮತ್ತಿತರರು ಉಪಸ್ಥಿತರಿದ್ದರು.

ನ್ಯಾಯಬೆಲೆ ಅಂಗಡಿ ಸಂಖ್ಯೆಗಳನ್ನು ಹೆಚ್ಚಿಸಿ

ಕೆಡಿಪಿ ಸಭೆಯಲ್ಲಿ ಸಚಿವರ ಸೂಚನೆ

ದಾವಣಗೆರೆ, ಆ. 7 – ಕೊರೊನಾ ಸಂದರ್ಭದಲ್ಲಿ ಜನರು ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ಹಾಗೂ ಪಡಿತರ ಖರೀದಿಗಾಗಿ ಅಲೆದಾಟ ತಪ್ಪಿಸಲು ಹೆಚ್ಚಿನ ನ್ಯಾಯ ಬೆಲೆ ಅಂಗಡಿಗಳನ್ನು ತೆರೆಯಲು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸೂಚಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಿಲ್ಲಾಡಳಿತ ಭವನದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಪಂಚಾಯ್ತಿ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ 700ಕ್ಕೂ ಹೆಚ್ಚು ಫಲಾನುಭವಿಗಳಿದ್ದಾರೆ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಹೆಚ್ಚುವರಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯುವಂತೆ ಹರಿಹರ ಶಾಸಕ ಎಸ್. ರಾಮಪ್ಪ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಬಸವರಾಜ್, ಸದ್ಯಕ್ಕೆ ಕೊರೊನಾ ಮುಗಿಯುವ ಲಕ್ಷಣಗಳಿಲ್ಲ. ಒಂದೇ ನ್ಯಾಯಬೆಲೆ ಅಂಗಡಿಯಲ್ಲಿ ಹೆಚ್ಚು ಜನರಿದ್ದರೆ ಸಾಮಾಜಿಕ ಅಂತರ ಸಾಧ್ಯವಿಲ್ಲ. ಶಾಸಕರ ಸೂಚನೆಯಂತೆ 350ಕ್ಕೂ ಹೆಚ್ಚು ಸದಸ್ಯರಿರದ ರೀತಿಯಲ್ಲಿ ಹೆಚ್ಚಿನ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಗಳೂರು ತಾಲ್ಲೂಕು ಆಸ್ಪತ್ರೆಗೆ ಒಂದೇ ಪ್ರವೇಶ ಇದೆ. ಇದು ಕೊರೊನಾ ರೋಗಿಗಳ ಪ್ರವೇಶಕ್ಕೆ ಇನ್ನೊಂದು ಮಾರ್ಗ ರೂಪಿಸಬೇಕು. ತಾಲ್ಲೂಕು ಆಸ್ಪತ್ರೆಯಲ್ಲಿ ಕೊರೊನಾ ಉಪಕರಣಗಳ ಕೊರತೆ ಇದೆ  ಎಂದು ಜಗಳೂರು ಶಾಸಕ ಹಾಗೂ ರಾಜ್ಯ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ ಆಕ್ಷೇಪಿಸಿದರು.

ಚನ್ನಗಿರಿ ತಾಲ್ಲೂಕಿನ ವಡ್ನಾಳ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆಯುಷ್ ಇಲ್ಲವೇ ಆರೋಗ್ಯ ಕೇಂದ್ರವಾಗಿ ಪರಿವರ್ತಿಸಬೇಕು ಎಂದು ಚನ್ನಗಿರಿ ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.

ಮಾಯಕೊಂಡ ಆಸ್ಪತ್ರೆ ದೊಡ್ಡದಿದ್ದರೂ ಕೇವಲ ಒಬ್ಬ ವೈದ್ಯರಿದ್ದಾರೆ. ಅಲ್ಲಿಗೆ ಇನ್ನೊಬ್ಬ ವೈದ್ಯರನ್ನು ನೇಮಿಸಬೇಕು ಹಾಗೂ ಕೊಡಗನೂರು ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಮಾಯಕೊಂಡ  ಶಾಸಕ ಪ್ರೊ.ಎನ್. ಲಿಂಗಣ್ಣ ಆಗ್ರಹಿಸಿದರು.

ಮೆಕ್ಕೆಜೋಳಕ್ಕೆ ರಾಜ್ಯ ಸರ್ಕಾರ ಪ್ರಕಟಿಸಿರುವ 5,000 ರೂ.ಗಳ ಪರಿಹಾರ ಇನ್ನೂ ಹಲವಾರು ರೈತರಿಗೆ ತಲುಪಿಲ್ಲ. ಖಾತೆ ಇದ್ದರೂ ಹಣ ಜಮಾ ಮಾಡಿಲ್ಲ ಎಂದು ಶಾಸಕ ಮಾಡಾಳ್ ಆಕ್ಷೇಪಿಸಿದರು.

ಜಿ.ಪಂ. ದುರಸ್ತಿಗೆ ಪ್ರಸ್ತಾವನೆ : ಜಿಲ್ಲಾ ಪಂಚಾಯ್ತಿ ಕಟ್ಟಡ ನಿರ್ಮಾಣಗೊಂಡು 25 ವರ್ಷಗಳೇ ಕಳೆದಿವೆ. ಈ ಕಟ್ಟಡದ ದುರಸ್ತಿಗಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಬೇಕೆಂದು ಜಿ.ಪಂ. ಅಧ್ಯಕ್ಷೆ ದೀಪಾ ಜಗದೀಶ್ ಅವರು ಈ ಸಂದರ್ಭದಲ್ಲಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಜಿ.ಪಂ. ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ,  ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪದ್ಮಾ ಬಸವಂತಪ್ಪ, ಉಪ ಕಾರ್ಯದರ್ಶಿ ಆನಂದ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!