ಚನ್ನಗಿರಿ, ನ.10- ತಾಲ್ಲೂಕಿನ ಸೂಳೆಕೆರೆಯ ನೀರನ್ನು ಭೀಮಸಮುದ್ರಕ್ಕೆ ಹರಿಸುವ ಹುನ್ನಾರ ವನ್ನು ನಾನು ಎಂದಿಗೂ ಮಾಡಿಲ್ಲ. ಕೆರೆಗೆ ನೀರು ತುಂಬಿಸುವ ಪ್ರಯತ್ನ ಮಾಡುತ್ತಿದ್ದೇನೆಯೇ ವಿನಃ ನೀರು ಖಾಲಿ ಮಾಡುವ ಚಿಂತನೆ ನಮ್ಮದಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸ್ಪಷ್ಟಪಡಿಸಿದರು.
ಅವರು, ಇಂದು ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಮೈ ತುಂಬಿದ ಕಾರಣ ಬಾಗಿನ ಅರ್ಪಿಸಿ, ನಂತರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ವೇದಿಕೆ ಕಾರ್ಯ ಕ್ರಮವನ್ನುದ್ದೇಶಿಸಿ ಮಾತನಾಡಿದರು.
2009ರಲ್ಲಿ ಡ್ಯಾಂನಲ್ಲಿ ನೀರು ಕುಸಿತ ಕಂಡಿತ್ತು. ಮಳೆ ಸಮರ್ಪಕವಾಗಿ ಬಾರದ ಕಾರಣ ಸೂಳೆಕೆರೆ ಬರಿದಾ ಗಿತ್ತು. ಆದರೆ, ಈ ಸಂದರ್ಭದಲ್ಲಿ ಸೂಳೆಕೆರೆ ನೀರಿನ್ನು ಭೀಮಸಮುದ್ರಕ್ಕೆ ಕೊಂಡೊಯ್ದು ನನ್ನ ಅಡಿಕೆ ತೋಟಕ್ಕೆ ನೀರನ್ನು ಹಾಕಿರುವುದಾಗಿ ಕೆಲ ವಿರೋಧಿಗಳು ನನ್ನ ಮೇಲೆ ಸುಳ್ಳು ಅಪಪ್ರಚಾರ ಮಾಡಿದ್ದರು. ಈ ಅಪಪ್ರಚಾರವನ್ನು ಜನರು ನಂಬಿದ್ದರು. ಇದರಿಂದ ನನಗೆ ವೈಯಕ್ತಿಕವಾಗಿ ಬಹಳ ದುಃಖವಾಗಿ ಕಣ್ಣೀರು ಹಾಕಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು.
ಜನರಿಗೆ ಅಪಪ್ರಚಾರದ ಸತ್ಯಾಂಶ ತಿಳಿಯಿತು. ತದ ನಂತರ ನಡೆದ ಚುನಾವಣೆಯಲ್ಲಿ ಚನ್ನಗಿರಿ ಮತದಾರರು ನನ್ನ ಕೈಹಿಡಿದು 2024 ಮತಗಳ ಅಂತರದಿಂದ ಗೆಲುವು ತಂದುಕೊಟ್ಟರು. ಈ ಮೂಲಕ ನನ್ನ ಮೇಲಿದ್ದ ಅಪಪ್ರಚಾರಕ್ಕೆ ತೆರೆ ಎಳೆದಂತಾಯಿತು ಎಂದು ತಿಳಿಸಿದರು.
ಸೂಳೆಕೆರೆ ತುಂಬಿದ್ದಲ್ಲ ನಾನು ತುಂಬಿಸಿದ್ದೇನೆ
ಚನ್ನಗಿರಿ, ನ.10- ಏಷ್ಯಾ ದಲ್ಲೇ ಎರಡನೇ ಅತಿ ದೊಡ್ಡ ಕೆರೆಯಾಗಿರುವ ಸೂಳೆಕೆರೆಗೆ ನೀರು ಬಂದು ತುಂಬಿದ್ದಲ್ಲ. ನಾನು ಭರ್ತಿ ಮಾಡಿಸಿದ್ದೇನೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು. ಅವರು, ಇಂದು ಸೂಳೆಕೆರೆ ದಂಡೆಯ ಮೇಲೆ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚನ್ನಗಿರಿ ತಾಲ್ಲೂಕಿನ ಜೀವನಾಡಿಯಾಗಿರುವ ಸೂಳೆಕೆರೆಯು 2008-2013ರವರೆಗೆ ತುಂಬಿತ್ತು. ನಂತರ ಬರಿದಾಗಿ ನೆಲ ಕಾಣುವಂತಾಗಿತ್ತು. ಪುನಃ ನಾನು ಶಾಸಕನಾದ ಮೇಲೆ ಕೆರೆಯನ್ನು ತುಂಬಿಸಿದ್ದೇನೆ. ಹಿರೇ ಹಳ್ಳ, ಚನ್ನಗಿರಿಯ ಹರಿದ್ರಾವತಿ ಹಳ್ಳ ಮತ್ತು ನಮ್ಮೂರಿನ ಹಳ್ಳ ಸೇರಿ ಸೂಳೆಕೆರೆಯನ್ನು ಕಟ್ಟಲಾಗಿದೆ. ಇತ್ತೀಚೆಗೆ ಕೆರೆಗಳಿಗೆ ಚೆಕ್ ಡ್ಯಾಂ ಕಟ್ಟುತ್ತಿರುವ ಕಾರಣ ಹಿರೇ ಹಳ್ಳದಿಂದ ನೀರು ಹರಿಯದಂತಾಗಿ ಮತ್ತು ಹಿಂದೆ ಸರಿಯಾಗಿ ಮಳೆಯಾಗದೇ 2.8 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಸೂಳೆಕೆರೆಗೆ ತುಂಬಿ ಹರಿದ ಭದ್ರಾ ಡ್ಯಾಂನ ನೀರು ಹರಿಸಿ ತುಂಬಿಸಲಾಗಿದೆ. ಚನ್ನಗಿರಿ ಪಟ್ಟಣ ಸೇರಿದಂತೆ ತಾಲ್ಲೂಕಿನ 80 ಗ್ರಾಮಗಳು, ಹೊಳಲ್ಕೆರೆ, ಸಿರಿಗೆರೆ, ಚಿತ್ರದುರ್ಗಕ್ಕೆ ಕುಡಿಯುವ ನೀರು ಪೂರೈಸುವ ಸಾಮರ್ಥ್ಯ ಹೊಂದಿದೆ ಎಂದರು.
ಸೂಳೆಕೆರೆಯನ್ನು ಸುಂದರ ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಸುಮಾರು 56 ಸಾವಿರ ಕೋಟಿ ರೂ.ಗಳ ಸೂಳೆಕೆರೆ ಸರ್ಕ್ಯೂಟ್ ಯೋಜನೆಗೆ ರಾಜ್ಯ ಸರ್ಕಾರದಿಂದ ಒಪ್ಪಿಗೆ ಪಡೆಯಲಾಗಿದ್ದು, ಕೇಂದ್ರ ಸರ್ಕಾರದಿಂದ ಮಂಜೂರಾತಿ ಮಾಡಿಸಿ ಸೂಳೆಕೆರೆಯನ್ನು ಸಮಗ್ರ ಅಭಿವೃದ್ಧಿಪಡಿಸುತ್ತೇನೆ. ಇಲ್ಲಿ ಮದುವೆಗಾಗಿ ನಿರ್ಮಿಸಲಾಗಿರುವ ಯಾತ್ರಿ ನಿವಾಸವನ್ನು ಶೀಘ್ರವೇ ಉದ್ಘಾಟಿಸಲಾಗುವುದು. ಇಲ್ಲಿನ ಐತಿಹಾಸಿಕ ಶ್ರೀ ಸಿದ್ದೇಶ್ವರ ದೇವಸ್ಥಾನದ ಅಭಿವೃದ್ಧಿಗೆ 75 ಲಕ್ಷ ರೂ. ಮಂಜೂರಾತಿಯಾಗಿದೆ ಎಂದರು.
ಸೂಳೆಕೆರೆಗೆ ಒಂದು ಟಿಎಂಸಿ ನೀರು ತರುವ ಯೋಜನೆಯನ್ನು ಸಿದ್ದಪಡಿಸಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಈ ಯೋಜನೆಗೆ ಅನುಮೋದನೆ ನೀಡುವಂತೆ ಸಂಸದರೊಂದಿಗೆ ಒತ್ತಾಯ ಮಾಡಿದ್ದೇನೆ. ಈ ಯೋಜನೆಗೆ ಒಪ್ಪಿಗೆ ಸಿಕ್ಕಲ್ಲಿ, ಈ ಭಾಗದ ಅಚ್ಚುಕಟ್ಟು ಪ್ರದೇಶದ ಜನರಿಗೆ ಅನುಕೂಲವಾಗಲಿದೆ ಎಂದರು.
13ಕ್ಕೆ ಜನಸ್ಪಂದನ: ಚನ್ನಗಿರಿ ತಾಲ್ಲೂಕಿನ ಜನರಿಗೆ ಸರ್ಕಾರದ ಸೌಲಭ್ಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಇದೇ ದಿನಾಂಕ 13ಕ್ಕೆ ಚನ್ನಗಿರಿಯಲ್ಲಿ ಜನಸ್ಪಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದರಲ್ಲಿ ಒಂದು ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ, ಸಾಗುವಳಿ ಪತ್ರ ಹಾಗೂ ವಿವಿಧ ಪರಿಕರಗಳನ್ನು ವಿತರಣೆ ಮಾಡಲಾಗುವುದು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.
ವಸತಿ ಶಾಲೆಗೆ ಶಂಕು ಸ್ಥಾಪನೆ: ಚನ್ನಗಿರಿ ತಾಲ್ಲೂಕಿನ ಚಿಕ್ಕ ಮಾಡಾಳ್ ಗ್ರಾಮದಲ್ಲಿ ಏಳು ಎಕರೆ ಸರ್ಕಾರಿ ಜಮೀನು ಇದ್ದು, ಈ ಭೂಮಿ ಒತ್ತುವರಿ ಆಗಬಾರದು ಎಂಬ ಉದ್ದೇಶದಿಂದ ಅಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯನ್ನು 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಬರುವ ಡಿಸೆಂಬರ್ 13ರಂದು ಈ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆಯನ್ನು ಸಚಿವ ಶ್ರೀರಾಮುಲು ನೆರವೇರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಭಾಗವಹಿಸ ಲಿದ್ದಾರೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.
ಕೊರೊನಾ ಬಗ್ಗೆ ಉದಾಸೀನ ಬೇಡ
ಜಿಲ್ಲೆಯಲ್ಲಿ ಇದೀಗ ಕೊರೊನಾ ಕ್ಷೀಣಿಸುತ್ತಿದೆ. ಆದರೂ ಸಹ ಉದಾಸೀನ ಮಾಡಬಾರದು. ಕೊರೊನಾ ಯಾರಿಗೆ, ಹೇಗೆ ಬರಲಿದೆ ಎಂಬುದೇ ಗೊತ್ತಿಲ್ಲ. ಕೊರೊನಾ ಬರುವುದಿಲ್ಲವೆಂದು ಉದಾಸೀನ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ವಾಗೀಶ್ ಅವರು ಕೊರೊನಾದಿಂದ ಇತ್ತೀಚೆಗೆ ಮೃತಪಟ್ಟರು. ಹೀಗೆ ಸಾವು-ಬದುಕು ನಮ್ಮ ಕೈಯ್ಯಲಿಲ್ಲ. ಮುಂಜಾಗ್ರತೆ ವಹಿಸಬೇಕು. ಕೊರೊನಾ ಕಾರಣ ದೆಹಲಿಯಲ್ಲಿ ಸೆಷನ್ ನಡೆದರೂ ಸಹ ನಾನು ಭಾಗವಹಿಸಲಿಲ್ಲ. ಮುಂದಿನ ದಿನಗಳಲ್ಲಿ ಎರಡಂಕಿಯಲ್ಲಿ ಬರುವ ಸಾಧ್ಯತೆ ಇದೆ. ಆದರೂ, ಮೈ ಮರೆಯಬಾರದು. ಚಳಿಗಾಲದಲ್ಲಿ ಕೊರೊನಾ ಹೆಚ್ಚಾಗಬಹುದೆಂದು ತಜರು ಸಲಹೆ ನೀಡುತ್ತಿದ್ದಾರೆ. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ ಎಚ್ಚರಿಕೆಯಿಂದ ಇರಬೇಕು. ಮಾಸ್ಕ್ ಅನ್ನು ಪ್ಯಾಷನ್ ಆಗಿ ಬಳಕೆ ಮಾಡುತ್ತಿರುವುದು ಸರಿಯಲ್ಲ. ಕೊರೊನಾಗೆ ವ್ಯಾಕ್ಸಿನ್ ಬರುವ ತನಕವೂ ಮುಂಜಾಗ್ರತೆ ವಹಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ನಾಗರಿಕರಲ್ಲಿ ಮನವಿ ಮಾಡಿದರು.
ಸಿದ್ದೇಶ್ವರ ಅವರು ಮಾಸ್ಕ್ ತೆಗೆಯದೇ, ಭಾಷಣಕ್ಕೆ ಆಗಮಿಸಿದ ವೇಳೆ ಮೈಕ್ ಗೆ ಟಿಶೂ ಪೇಪರ್ ಅಂಟಿಸಿ ಮಾತನಾಡಿದ್ದು, ಭಾಷಣದ ನಂತರ ಸ್ಯಾನಿಟೈಸರ್ ಬಳಸಿದ್ದು ಗಮನ ಸೆಳೆಯಿತಲ್ಲದೇ, ಜನಜಾಗೃತಿಗೆ ಸಾಕ್ಷಿಯಾಯಿತು. ಇದೇ ವೇಳೆ ಅಗಲಿದ ಜಿಲ್ಲಾ ಪಂಚಾಯತ್ ಸದಸ್ಯ ವಾಗೀಶ್ ಅವರಿಗೆ ಮೌನಾಚರಿಸುವ ಮುಖೇನ ಅವರು ಆತ್ಮಕ್ಕೆ ಶಾಂತಿ ಕೋರಲಾಯಿತು.
ಸೂಳೆಕೆರೆಯಿಂದ ಚನ್ನಗಿರಿ, ಚಿತ್ರದುರ್ಗ, ಜಗಳೂರು, ಸಿರಿಗೆರೆ, ಭೀಮಸಮುದ್ರಕ್ಕೆ ಹೋಗುವ ಮಾರ್ಗದಲ್ಲಿ ಕೆಲವು ಗ್ರಾಮಗಳಿಗೆ ಕುಡಿಯುವ ನೀರು ಬಳಕೆಯಾಗುತ್ತಿದೆಯೇ ವಿನಃ ಭೀಮಸಮುದ್ರಕ್ಕೆ ವೈಯಕ್ತಿಕವಾಗಿ ನೀರು ಕೊಂಡೊಯ್ಯಲಿಲ್ಲ. ಆದರೆ, ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಪ್ರೊ. ಲಿಂಗಣ್ಣ ಅವರೊಂದಿಗೆ ನಾನು ಸೇರಿಕೊಂಡು ಸೂಳೆಕೆರೆ ಅಚ್ಚುಕಟ್ಟು ಪ್ರದೇಶದ ಬೆಳೆಗಾರರಿಗೆ ಅನುಕೂಲ ಮಾಡುವ ಉದ್ದೇಶದಿಂದ ಕೆರೆ ಬರಿದಾಗದಂತೆ ಪ್ರತಿ ವರ್ಷ 1 ಟಿಎಂಸಿ ನೀರು ಹರಿಸುವ ಯೋಜನೆ ರೂಪಿಸಿದ್ದು, ಅದು ಅನುಮೋದನೆ ಹಂತದಲ್ಲಿದೆ. ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಇದಕ್ಕೆ ಅನುಮೋದನೆ ನೀಡುವ ಭರವಸೆ ಇದೆ. ಯಾವುದೇ ಕಾರಣಕ್ಕೂ ಸೂಳೆಕೆರೆಗೆ ನಾನು ಅನ್ಯಾಯ ಮಾಡಲ್ಲ. ಸೂಳೆಕೆರೆ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಸೂಳೆಕೆರೆ ರಸ್ತೆಯು ಅಪಘಾತ ವಲಯದಂತಾಗಿ ಸಾವು ಸಂಭವಿಸಿವೆ. ಹಾಗಾಗಿ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿ ಈಗಾಗಲೇ ಈ ಭಾಗದಲ್ಲಿನ ರಸ್ತೆ ಅಭಿವೃದ್ದಿಗೆ ಸರ್ಕಾರ 10 ಕೋಟಿ ರೂ. ಮಂಜೂರು ಮಾಡಿದೆ. ಆದರೆ, ಕೋವಿಡ್ ಸಂದರ್ಭ ಇರುವುದರಿಂದ ಈಗ ಮೊದಲ ಕಂತಿನಲ್ಲಿ ಒಂದೂವರೆ ಕೋಟಿ ರೂ. ಬಿಡುಗಡೆಯಾದ ಹಣದಲ್ಲಿ ಅಪಘಾತ ಸಂಭವಿಸುವ ಸ್ಥಳಗಳಲ್ಲಿ ರಸ್ತೆ ಅಗಲೀಕರಣ ಮಾಡಲಾಗುವುದು. ಆ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಇನ್ನೂ ಎರಡು ತಿಂಗಳಲ್ಲಿ ಉಳಿದ ಅನುದಾನ ಬರಲಿದ್ದು, ಆಗ ಈ ಭಾಗದ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದರು.
ಇದೇ ವೇಳೆ 2019-20ನೇ ಸಾಲಿನ ವಿವಿಧ ಯೋಜನೆಗಳಡಿ ಮಂಜೂರಾಗಿರುವ ಚನ್ನಗಿರಿ ತಾಲ್ಲೂಕಿನ ಮಲ್ಪೆ-ಮೊಳಕಾಲ್ಮೂರು ರಸ್ತೆ ಮತ್ತು ಕೆರೆ ಏರಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಶಾಸಕ ಪ್ರೊ. ಲಿಂಗಣ್ಣ ಮಾತನಾಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ, ಸದಸ್ಯರಾದ ಮಂಜುಳ ಟಿ.ವಿ. ರಾಜು, ಯಶೋಧಮ್ಮ ಮರಳಪ್ಪ, ಚನ್ನಗಿರಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಕವಿತಾ ಕಲ್ಲೇಶ್, ಉಪಾಧ್ಯಕ್ಷೆ ಚಂದ್ರಮ್ಮ ರುದ್ರಪ್ಪ, ಚನ್ನಗಿರಿ ಪುರಸಭೆ ಅಧ್ಯಕ್ಷೆ ಲಕ್ಷ್ಮಿದೇವಿ ನರಸಿಂಹಮೂರ್ತಿ, ಎಪಿಎಂಸಿ ಅಧ್ಯಕ್ಷ ಜಗನ್ನಾಥ್, ತುಮ್ಕೋಸ್ ಅಧ್ಯಕ್ಷ ಆರ್.ಎಂ. ರವಿ ಸೇರಿದಂತೆ ಇತರರು ಇದ್ದರು.