ಜಗಳೂರು ಪಟ್ಟಣ ಪಂಚಾಯಿತಿ ಬಿಜೆಪಿ ವಶಕ್ಕೆ

ಅಧ್ಯಕ್ಷರಾಗಿ ಆರ್. ತಿಪ್ಪೇಸ್ವಾಮಿ, ಉಪಾಧ್ಯಕ್ಷರಾಗಿ ಲಲಿತಮ್ಮ ಶಿವಣ್ಣ ಅವಿರೋಧ ಆಯ್ಕೆ 

ಜಗಳೂರು, ನ. 9- ಪಟ್ಟಣ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಪಕ್ಷದ ಆರ್. ತಿಪ್ಪೇ ಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಲಲಿತಮ್ಮ ಶಿವಣ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿ ಪಕ್ಷದ ಆರ್. ತಿಪ್ಪೇಸ್ವಾಮಿ ಅಧ್ಯಕ್ಷ ಸ್ಥಾನಕ್ಕೆ ಮತ್ತು ಲಲಿತಮ್ಮ ಶಿವಣ್ಣ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.

ನಾಮಪತ್ರಗಳ ಪರಿಶೀಲನೆಯ ನಂತರ ನಿಗದಿತ ಸಮಯಕ್ಕೆ ಸರಿಯಾಗಿ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಡಾ. ನಾಗವೇಣಿ ಅವರು ಆರ್. ತಿಪ್ಪೇಸ್ವಾಮಿಯವರು ಅಧ್ಯಕ್ಷರಾಗಿ ಮತ್ತು ಲಲಿತಮ್ಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.

ಒಟ್ಟು 18 ಸದಸ್ಯ ಬಲ ಹೊಂದಿರುವ ಪಟ್ಟಣ ಪಂಚಾಯ್ತಿಯಲ್ಲಿ ಬಿಜೆಪಿಯ 11 ಜನ ಸದಸ್ಯರಿದ್ದು, ನಿಚ್ಚಳ ಬಹುಮತ ಪಡೆದಿದೆ. ಉಳಿದಂತೆ ಕಾಂಗ್ರೆಸ್‌ನ 5 ಮತ್ತು ಜೆಡಿಎಸ್‌ನ ಇಬ್ಬರು ಸದಸ್ಯರಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಚುನಾಯಿತ ಎಲ್ಲಾ 18 ಜನ ಸದಸ್ಯರು ಪಾಲ್ಗೊಂಡಿದ್ದರು. ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಸಹಜವಾಗಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿತ್ತು.

ಬಿಜೆಪಿ ಸದಸ್ಯರಿಗೆ ವಿಪ್ ಜಾರಿ : ಶಾಸಕ ಎಸ್.ವಿ. ರಾಮಚಂದ್ರ  ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಇಂದು ಬೆಳಿಗ್ಗೆ ಬಿಜೆಪಿಯ ಎಲ್ಲಾ 11 ಸದಸ್ಯರಿಗೆ ಬಿಜೆಪಿ ಮಂಡಲ ಅಧ್ಯಕ್ಷ ಹೆಚ್.ಸಿ. ಮಹೇಶ್ ವಿಪ್ ಜಾರಿ ಮಾಡಿದ್ದರು. ಪಕ್ಷದ ಹೈಕಮಾಂಡ್ ಸೂಚಿಸಿದವರು ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸ ಮಾಡಬೇಕೆಂದು ಶಾಸಕರು ಎಲ್ಲಾ ಸದಸ್ಯರಿಗೆ ಕಿವಿಮಾತು ಹೇಳಿದರು.

5ನೇ ವಾರ್ಡ್‌ನಿಂದ ಸತತವಾಗಿ ಮೂರು ಬಾರಿ  ಆಯ್ಕೆಯಾಗಿರುವ ಹಿರಿಯ ಸದಸ್ಯ ತಿಪ್ಪೇಸ್ವಾಮಿ ಅಧ್ಯಕ್ಷರಾಗಿ  ಮತ್ತು 17ನೇ ವಾರ್ಡಿನ ಲಲಿತಮ್ಮ ಶಿವಣ್ಣ ಅವರು ಉಪಾಧ್ಯಕ್ಷರಾಗಿ  ಮೊದಲ ಅವಧಿಗೆ ಆಯ್ಕೆ ಮಾಡಿದ್ದು, ಎಲ್ಲಾ ಸದಸ್ಯರು ಸಹಕಾರ ನೀಡಬೇಕು. ಮುಂದಿನ ಅವಧಿಯಲ್ಲಿ ಎಲ್ಲಾ ಸದಸ್ಯರಿಗೂ ಅಧಿಕಾರ ಹಂಚಿಕೆ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದ್ದರು.

ಜೆಡಿಎಸ್ ಸದಸ್ಯರಾದ ಲುಕ್ಮಾನ್ ಉಲ್ಲಾಖಾನ್ ಮತ್ತು ನಜರತ್ ಉನ್ನೀಸಾ ಶಾಸಕರ ನಿವಾಸಕ್ಕೆ ಭೇಟಿ ನೀಡಿ ಬಿಜೆಪಿ ಸದಸ್ಯರೊಂದಿಗೆ ಗುರುತಿಸಿಕೊಂಡಿದ್ದು ವಿಶೇಷವಾಗಿತ್ತು.

ಬಿಜೆಪಿ ಸದಸ್ಯರಾದ ಪಾಪಲಿಂಗಪ್ಪ, ದೇವರಾಜ್, ಲೋಕಮ್ಮ, ನಿರ್ಮಲ ಕುಮಾರಿ, ನವೀನ್ ಕುಮಾರ್, ರೇವಣ್ಣ, ಸರೋಜಮ್ಮ, ಮಂಜಮ್ಮ, ವಿಶಾಲಾಕ್ಷಮ್ಮ ಮತ್ತು ಕಾಂಗ್ರೆಸ್ ಸದಸ್ಯರಾದ ಶಕೀಲ್ ಅಹ್ಮದ್, ಮಂಜಣ್ಣ, ರಮೇಶ್, ಮಹ್ಮದ್ ಹಾಗೂ ರವಿಕುಮಾರ್, ಜೆಡಿಎಸ್ ಸದಸ್ಯರಾದ ಲುಕ್ಮಾನ್ ಉಲ್ಲಾಖಾನ್ ಮತ್ತು ನಜರತ್ ಉನ್ನೀಸಾ, ಪಟ್ಟಣ ಪಂಚಾಯ್ತಿ ಮುಖ್ಯ ಅಧಿಕಾರಿ ರಾಜು ಬಣಕಾರ್ ಚುನಾವಣಾ ಪ್ರಕ್ರಿಯೆಯಲ್ಲಿ ಹಾಜರಿದ್ದರು.

ಪಟ್ಟಣ ಪಂಚಾಯ್ತಿ ನೂತನ ನಾಮ ನಿರ್ದೇಶನ ಸದಸ್ಯರಾದ ಬಿ.ಪಿ. ಸುಭಾನ್‌ಸಾಬ್, ಬಿ. ರುದ್ರಮುನಿ, ಜಿ.ಎಸ್. ಗಿರೀಶ್ ಉಪಸ್ಥಿತರಿದ್ದರು.

ಬಿಜೆಪಿ ಮಂಡಲ ಅಧ್ಯಕ್ಷ ಹೆಚ್.ಸಿ. ಮಹೇಶ್, ಜಿಲ್ಲಾ ಉಪಾಧ್ಯಕ್ಷ ಡಿ.ವಿ. ನಾಗಪ್ಪ, ಜಿ.ಪಂ. ಸದಸ್ಯರಾದ ಎಸ್.ಕೆ ಮಂಜುನಾಥ್, ಮುಖಂಡರಾದ ಸೋಮನಹಳ್ಳಿ ಶ್ರೀನಿವಾಸ್, ಶಿವಕುಮಾರಸ್ವಾಮಿ, ಜೆ.ವಿ. ನಾಗರಾಜ್, ಓಬಳೇಶ್, ಪಿ. ಶಿವಣ್ಣ, ವಕೀಲರಾದ ಹನುಮಂತಪ್ಪ, ಎಂ.ಜೆ. ತಿಪ್ಪೇಸ್ವಾಮಿ ಮತ್ತಿತರರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು.

error: Content is protected !!