ಕಲ್ಯಾಣ ಮಂಟಪಗಳು ವ್ಯಾಪಾರಿ ಕೇಂದ್ರಗಳಾಗಿವೆ

ರಾಣೇಬೆನ್ನೂರು ಶ್ರೀ ಸಿದ್ದೇಶ್ವರ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ  ಡಾ. ಎಸ್ಸೆಸ್

ರಾಣೇಬೆನ್ನೂರು, ನ.9- 70-80 ವರ್ಷಗಳ ಹಿಂದೆ ದಾವಣಗೆರೆಯಲ್ಲಿ ರಾಜನಹಳ್ಳಿ ಹನುಮಂತಪ್ಪನವರು ಛತ್ರ ಕಟ್ಟಿಸಿದ್ದರು. ಅದನ್ನು ಪುಕ್ಕಟೆಯಾಗಿಯೇ ಕೊಡುತ್ತಿದ್ದರು. ಅದು ಅಪ್ಪಟ ಧರ್ಮಶಾಲೆಯೇ ಆಗಿತ್ತು. ಈಗ  ಛತ್ರಗಳು ಕಲ್ಯಾಣ ಮಂಟಪಗಳಾಗಿದ್ದು, ಅವು ವ್ಯಾಪಾರೀಕರಣಗೊಂಡಿವೆ ಎಂದು ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು. 

ಅವರು ಪಟ್ಟಣದ ಶ್ರೀ ಸಿದ್ದೇಶ್ವರ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಹಿಂದೆ ಮನೆ ಮುಂದೆ ಚಪ್ಪರ ಹಾಕಿ ಮದುವೆ ಗಳನ್ನು ಮಾಡುತ್ತಿದ್ದರು. ಈಗ ಅದು ಸಾಧ್ಯವಾಗು ವುದಿಲ್ಲ. ಹಾಗಾಗಿ ರಾಣೇಬೆನ್ನೂರು, ದಾವಣಗೆರೆ ಹಾಗೂ ಬೆಂಗಳೂರಿನಂತಹ ನಗರಗಳಲ್ಲಿ ಕಲ್ಯಾಣ ಮಂಟಪಗಳು ದುಡಿಮೆಯ ಮಾರ್ಗಗಳಾಗಿವೆ ಎಂದ ಎಸ್ಸೆಸ್‌, ಸಾರ್ವಜನಿಕರ ಹಣದಿಂದ ಕಟ್ಟಿದ ಈ ಕಲ್ಯಾಣ ಮಂಟಪ ಬಡವರಿಗೂ ದೊರಕುವಂತಾಗಲಿ ಎಂದು ಆಶಿಸಿದರು.

ಉದ್ಘಾಟನೆ ನೆರವೇರಿಸಿದ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ಕೋವಿಡ್ ಹಾವಳಿಯಿಂದ ಸರ್ಕಾರ ಅದ್ಧೂರಿ ಮದುವೆಗಳನ್ನು ನಿಷೇಧಿಸಿದೆ. ಈ ಕಾಯಿಲೆ ಕಡಿಮೆ ಆಗಿದೆಯೇ ಹೊರತು, ಸಂಪೂರ್ಣ ನಾಶವಾಗಿಲ್ಲ. ಕಾಯಿಲೆಗೆ ಇನ್ನೂ ಮದ್ದೇ ಸಿಕ್ಕಿಲ್ಲ. ಮದುವೆ ಮುಂತಾದ ಸಾಮೂಹಿಕ ಕಾರ್ಯಕ್ರಮಗಳು ನಡೆಯುವ ಇಂತಹ ಕಲ್ಯಾಣ ಮಂಟಪಗಳಲ್ಲಿ ಮಾಸ್ಕ್, ಸ್ಯಾನಿಟೈಜರ್ ಹಾಗೂ ಸಾಮಾಜಿಕ ಅಂತರ ಅವಶ್ಯವಿದೆ. ಈ ದಿಶೆಯಲ್ಲಿ ಸಮಿತಿ ಕಡ್ಡಾಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. 

ಗದಗ ಶಿವಾನಂದ ಮಠದ ಶ್ರೀ ಅಭಿನವ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕ ಅರುಣಕುಮಾರ ಪೂಜಾರ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ, ಸಾಧುವೀರಶೈವ ಸಮಾಜದ ಅಧ್ಯಕ್ಷ ಮಲ್ಲೇಶಪ್ಪ ಅರಕೇರೆ ಹಾಗು ಇನ್ನಿತರೆ ಗಣ್ಯರು ವೇದಿಕೆಯಲ್ಲಿದ್ದರು. 

ಸಮಿತಿ ಅಧ್ಯಕ್ಷ ಚೆನ್ನಬಸಪ್ಪ ಗೌಡಶಿವಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಪರಮೇಶ ಗೂಳಣ್ಣನವರ ಸ್ವಾಗತಿಸಿದರು. ಸೋಮು ಗೌಡಶಿವಣ್ಣನವರ ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

error: Content is protected !!