ನಗರದಲ್ಲಿ ಮಂದಿರ ನಿರ್ಮಾಣದ ಸಂಭ್ರಮ

ಶ್ರೀರಾಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಸಿಹಿ ಹಂಚಿಕೆ

ದಾವಣಗೆರೆ, ಆ. 5- ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೂಮಿ ಪೂಜೆಯ ನೆರವೇರಿಸುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಸಂಭ್ರಮ ಮನೆ ಮಾಡಿತ್ತು.

ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಹಿಂದೂ ಪರ ಸಂಘಟನೆಗಳು ಶ್ರೀರಾಮ ದೇವನಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಸಂಭ್ರಮದಲ್ಲಿ ಭಾಗಿ ಯಾಗಿದ್ದವು. ಹೊಂಡದ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ನಿರ್ಮಿಸಲಾಗಿದ್ದ ಶ್ರೀರಾಮನ ಬೃಹತ್ ಕಟೌಟ್‌ಗೆ ಪೂಜೆ ಸಲ್ಲಿಸಲಾಯಿತು. ನೂರಾರು ರಾಮಭಕ್ತರು ಭಾಗವಹಿಸಿದ್ದರು.  ಪಿ.ಜೆ. ಬಡಾವಣೆಯ ಶ್ರೀರಾಮ ಮಂದಿರ ಮತ್ತು ದೊಡ್ಡಪೇಟೆಯ ವಿಠಲ್ ರುಕ್ಮಾಯಿ ದೇವಾಲಯದಲ್ಲಿ ಶ್ರೀರಾಮ ದೇವರಿಗೆ ವಿಶೇಷ ಪೂಜೆ ನಡೆಸಲಾಯಿತು.

ಪಿ.ಜೆ. ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ನೇತೃತ್ವದಲ್ಲಿ ಆಯೋಧ್ಯೆ ರಾಮ ಮಂದಿರದ ನಿರ್ಮಾಣದ ಭೂಮಿ ಪೂಜೆ   ನಿರ್ವಿಘ್ನದಿಂದ ನಡೆಯುವಂತೆ ಪೂಜೆ ಸಲ್ಲಿಸಲಾಯಿತು.

ಪ್ರತಿಮೆಗಳಿಗೆ ಮಾಲಾರ್ಪಣೆ : ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಪರ ಸಂಘಟನೆಗಳಿಂದ ನಗರದ ಪ್ರಮುಖ ವೃತ್ತದಲ್ಲಿರುವ ಬಸವೇಶ್ವರ, ಸಂಗೋಳ್ಳಿ ರಾಯಣ್ಣ, ಮದಕರಿ ನಾಯಕ, ಅಂಬೇಡ್ಕರ್, ಶಿವಾಜಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಉಪಮೇಯರ್ ಸೌಮ್ಯ ನರೇಂದ್ರ ಕುಮಾರ್, ಪಾಲಿಕೆ ಸದಸ್ಯರಾದ ಎಸ್.ಟಿ. ವೀರೇಶ್, ಎಲ್.ಡಿ. ಗೋಣೆಪ್ಪ, ನರೇಂದ್ರ, ಸೋಗಿ ಶಾಂತಕುಮಾರ್, ರಾಕೇಶ್ ಜಾಧವ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.

ರಾಂ ಅಂಡ್ ಕೋ ವೃತ್ತದಲ್ಲಿ ಕಾಂಗ್ರೆಸ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮತ್ತು ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್  ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸಿ, ನಂತರ ಸಿಹಿ ಹಂಚಲಾಯಿತು. ಬೆಳ್ಳೂಡಿ ಮಂಜುನಾಥ್, ದ್ರಾಕ್ಷಯಣಮ್ಮ, ಯುವರಾಜ್, ಶ್ರೀಕಾಂತ್ ಬಗರೆ ಇತರರು ಉಪಸ್ಥಿತರಿದ್ದರು.

ಮನೆಗಳಲ್ಲಿ ದೀಪ ಬೆಳಗಿ ಪೂಜೆ: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಸುಸೂತ್ರವಾಗಿ ನಡೆಯುವಂತೆ ಮನೆಗಳಲ್ಲಿ ದೀಪ ಬೆಳಗಿಸಿ ಪ್ರಾರ್ಥಿಸುವಂತೆ ಹಿಂದೂ ಸಂಘಟನೆಗಳು ಮಾಡಿದ್ದ ಮನವಿಗೆ ಸ್ಪಂದಿಸಿದ ಜನತೆ, ದೀಪ ಬೆಳಗಿಸಿ ಪ್ರಾರ್ಥಿಸಿಕೊಂಡರು.

ಮಹಾಲಕ್ಷ್ಮೀ ಬಡಾವಣೆಯ ಕಾವೇರಿ ಅಪಾರ್ಟ್‍ಮೆಂಟ್‍ನ ಮನೆ ಮನೆಗಳಲ್ಲಿ ಶ್ರೀ ರಾಮನ ಧ್ಯಾನದೊಂದಿಗೆ ಪೂಜೆ ಪುನಸ್ಕಾರ ಜ್ಯೋತಿ ಬೆಳಗಲಾಯಿತು. ಕಾವೇರಿ ವಸತಿಗೃಹ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಾಲಿಗ್ರಾಮ ಗಣೇಶ್ ಶೆಣೈ ದಂಪತಿ, ಸಮಿತಿ ಕೋಶಾಧ್ಯಕ್ಷ ಹರೀಶ್ ದಂಪತಿ, ಸಹ ಕಾರ್ಯದರ್ಶಿ ರವಿ ದಂಪತಿ, ಶೋಭಾ ದಿನೇಶ್, ಸುಜಾತ ತಿಪ್ಪೇಸ್ವಾಮಿ, ನಿರ್ಮಲಾ ಚಂದ್ರಪ್ಪ, ಸವಿತಾ ಶ್ರೀನಿಧಿ ಮತ್ತಿತರರಿದ್ದರು.

ಜಲ, ಮೃತ್ತಿಕೆ ರವಾನೆ: ಶ್ರೀರಾಮ ಸೇನೆ ವತಿಯಿಂದ ಸಂಭ್ರಮಾಚರಣೆ ಮಾಡಲಾಯಿತು. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಹರಿಹರದ ಪುಣ್ಯ ಕ್ಷೇತ್ರದಲ್ಲಿನ ತುಂಗಾಭದ್ರ ನದಿಯ ನೀರು ಮತ್ತು ಮೃತ್ತಿಕೆ (ಮಣ್ಣ) ಮತ್ತು ಬೆಳ್ಳಿ ಇಟ್ಟಿಗೆ ರವಾನಿಸಲಾಯಿತು. 

ಪಿ.ಜೆ. ಬಡಾವಣೆಯ ರಾಮ ಮಂದಿರದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಶ್ರೀರಾಮ ಸೇನಾ ರಾಜ್ಯ ಸಂಪರ್ಕ ಪ್ರಮುಖ್ ಪರುಶುರಾಮ್ ನಡುಮನಿ, ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ ರಾಜ್, ಜಿಲ್ಲಾ ಸಂಪರ್ಕಿ ಪ್ರಮುಖ ಕುಮಾರ ನಾಯಕ, ಆನಂದ ಜ್ಯೋತಿ, ಶ್ರೀಧರ್, ಸಾಗರ್, ರಮೇಶ್ ಹನುಮಂತ ಮತ್ತಿತರರು ಭಾಗವಹಿಸಿದ್ದರು.

ಶಾಮನೂರಿನಲ್ಲೂ ಸಹ ರಾಮ ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.  ಆಂಜನೇಯನ ದೇವಸ್ಥಾನದಲ್ಲಿ ಶ್ರೀ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ದೇವಾಲಯಕ್ಕೆ ಬಂದ ಭಕ್ತರಿಗೆ ಪ್ರಸಾದ ನೀಡಿದರು. 

ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿದ್ದು, ನಗರದ ಜಯದೇವ, ವಿದ್ಯಾರ್ಥಿಭವನ, ಗುಂಡಿ ಸರ್ಕಲ್, ಗಾಂಧಿ ವೃತ್ತಗಳು ಸೇರಿ, ರಾಮ ದೇವಾಲಯಗಳ ಮುಂಭಾಗ ಬಿಗಿಭದ್ರತೆ ಕಲ್ಪಿಸಲಾಗಿತ್ತು.

error: Content is protected !!