ರಾಜ್ಯದಲ್ಲಿ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ರಾಣೇಬೆನ್ನೂರು, ನ.8- ಆಂಧ್ರಪ್ರದೇಶದಲ್ಲಿ ಮಾಡಿರುವ ದೇವಾಂಗ ಅಭಿವೃದ್ಧಿ ನಿಗಮದ ಮಾದರಿಯಲ್ಲೇ ರಾಜ್ಯದಲ್ಲೂ ಕೂಡ ನೇಕಾರರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂದು ರಾಜ್ಯ ಬಿಜೆಪಿ ನೇಕಾರ ಪ್ರಕೋಷ್ಠದ ವತಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ನಗರದ ಬಿಜೆಪಿ ಮುಖಂಡ ಹಾಗೂ ನೇಕಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ.ಬಸವರಾಜ ಕೇಲಗಾರ ಹೇಳಿದರು.

ಮಂಗಳೂರಿನಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ನಂತರ  ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದು ಒಂದೂವರೇ ವರ್ಷವಾದರೂ ಇಲ್ಲಿಯವರಿಗೂ ನೇಕಾರರಿಗೆ ವಿಧಾನ ಪರಿಷತ್ ಸದಸ್ಯರಾಗಲೀ, ನಿಗಮ-ಮಂಡಳಿಗಳ ಅಧ್ಯಕ್ಷ ಹಾಗೂ ನಿರ್ದೇಶಕರ ಹುದ್ದೆಗಳನ್ನು ನೀಡದೇ ಇರುವುದು ನೇಕಾರ ಸಮುದಾಯವು ಪಕ್ಷದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ.  ಇನ್ನೂ ನೆರೆ ರಾಜ್ಯದಲ್ಲಿ ದೇವಾಂಗ ಅಭಿವೃದ್ಧಿ ನಿಗಮ ರಚಿಸಿ, ನೇಕಾರರಿಗೆ ಆರ್ಥಿಕ ನೆರವು ನೀಡಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಕೂಡ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಿ, 100 ಕೋಟಿ ರೂ. ವಿಶೇಷ ಅನುದಾನ ನೀಡಬೇಕು ಎಂದರು.

 

ನೇಕಾರರ ಸಮುದಾಯಗಳ ಜನಸಂಖ್ಯೆಗಿಂತ ಕಡಿಮೆ ಜನಸಂಖ್ಯೆ ಹೊಂದಿರುವ ವಿಶ್ವಕರ್ಮ, ಬೆಸ್ತ ಸಮುದಾಯಗಳಿಗೆ ನಿಗಮಗಳನ್ನು ರಚಿಸಿರುವಂತೆ ನೇಕಾರ ಅಭಿವೃದ್ಧಿ ನಿಗಮ ರಚಿಸುವುದರ ಕಡೆ ಸರ್ಕಾರ ಗಮನಹರಿಸಬೇಕು. ಮಹಾರಾಷ್ಟ್ರ ರಾಜ್ಯದಲ್ಲಿ ನೀಡಿರುವಂತೆ ಇಲ್ಲಿಯೂ ಕೂಡ ನೇಕಾರರಿಗೆ ಶೇ.2ರ ಮೀಸಲಾತಿ ನೀಡಿದರೆ, ಸಮುದಾಯವು ಶೈಕ್ಷಣಿಕವಾಗಿ ಮುಂದುವರೆಯಲು ಸಾಧ್ಯವಾಗುತ್ತಿತ್ತು. ರಾಜ್ಯದಲ್ಲಿರುವ ದೇವಾಂಗ, ಕುರುಹಿನಶೆಟ್ಟಿ, ಪದ್ಮಶಾಲಿ, ಪಟ್ಟಸಾಲಿ, ತೊಗಟ ವೀರ, ಶೆಟ್ಟಿಗಾರ, ಸ್ವಕುಳಸಾಳಿ, ಕೋಷ್ಠಿ, ಹಟಗಾರ, ಶಿವಸಮಸಾಲಿ, ಜಾಡ ಹೆಸರಿನಿಂದ ಗುರುತಿಸ ಲ್ಪಟ್ಟಿದ್ದು, ಅಂದಾಜು 50 ಲಕ್ಷ ಜನಸಂಖ್ಯೆಯನ್ನು ನೇಕಾರ ಸಮುದಾಯ ಒಳಗೊಂಡಿದೆ. ಆದರೂ ಸಹಿತ ಪ್ರಗತಿ ಸಾಧ್ಯವಾಗುತ್ತಿಲ್ಲ ಎಂದರು.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ತಡೆ ಹಿಡಿದಿರುವ ವಿದ್ಯಾಸಿರಿ ಯೋಜನೆಯನ್ನು ಪುನರಾರಂಭಿಸಬೇಕು.

ನೇಕಾರ ಸಮುದಾಯಗಳ ಶೇ.90 ಜನರು ಬಿಜೆಪಿ ಬಗ್ಗೆ ವಿಶ್ವಾಸವಿಟ್ಟುಕೊಂಡು ಬೆಂಬಲಿಸುತ್ತಾ ಬಂದಿದ್ದಾರೆ. ಆದ್ದರಿಂದ ಸರ್ಕಾರ ನೇಕಾರರ ಅಸಮಾಧಾನಕ್ಕೆ ಗುರಿಯಾಗದೇ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.

ಸಹ ಸಂಚಾಲಕ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.

error: Content is protected !!