ಕೊಟ್ಟೂರಿನ ಪ.ಪಂ.ನಲ್ಲಿ ಕಾಂಗ್ರೆಸ್ ಆಡಳಿತ

ಕೊಟ್ಟೂರು, ನ.6- ಇಂದು ನಡೆದ ಕೊಟ್ಟೂರು ಪಟ್ಟಣ ಪಂಚಾ ಯಿತಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಭಾರತಿ ಸುಧಾಕರ ಪಾಟೀಲ, ಉಪಾಧ್ಯಕ್ಷರಾಗಿ ಷಫಿಉಲ್ಲಾ ಆಯ್ಕೆಯಾಗಿದ್ದಾರೆ. ಚುನಾವಣೆ ಅಧಿಕಾರಿಯಾಗಿದ್ದ ತಾಲ್ಲೂಕು ದಂಡಾಧಿಕಾರಿ ಇವರ ಆಯ್ಕೆಯನ್ನು ಪ್ರಕಟಿಸಿದರು. 

ಕಾಂಗ್ರೆಸ್‍ನಿಂದ ಅಧ್ಯಕ್ಷ ಸ್ಥಾನಕ್ಕೆ 16ನೇ ವಾರ್ಡ್‍ನಿಂದ ಆಯ್ಕೆಯಾಗಿದ್ದ ಭಾರತಿ ಸುಧಾಕರ ಪಾಟೀಲ, ಉಪಾಧ್ಯಕ್ಷ ಸ್ಥಾನಕ್ಕೆ 19ನೇ ವಾರ್ಡ್‍ನಿಂದ ಷಫಿವುಲ್ಲಾ ಹಾಗೂ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ 10ನೇ ವಾರ್ಡ್‍ನಿಂದ ಆಯ್ಕೆಯಾಗಿದ್ದ ಇಂದಿರಾ ಭರಮಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ 8ನೇ ವಾರ್ಡ್‍ನಿಂದ ಆಯ್ಕೆಯಾಗಿದ್ದ ಬೋರ್‌ವೆಲ್ ತಿಪ್ಪೇಸ್ವಾಮಿ ಇವರು ಸ್ಪರ್ಧಿಸಿದ್ದು 11 – 7 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ. 

ಇಂದಿನ ಚುನಾವಣೆಯಲ್ಲಿ ಸಂಸದ ವೈ. ದೇವೇಂದ್ರಪ್ಪ, ಶಾಸಕ ಭೀಮಾನಾಯ್ಕ ಪಾಲ್ಗೊಂಡಿದ್ದರು. ಬಿಜೆಪಿಯ ಇಬ್ಬರು ಹಾಗೂ ಪಕ್ಷೇತರ ಇಬ್ಬರು ಸದಸ್ಯರು ಗೈರು ಹಾಜರಾಗಿದ್ದರು. 

ಕೊಟ್ಟೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿಸಿಎಗೆ ಮೀಸಲಾಗಿತ್ತು. 

ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿ ತಹಶೀಲ್ದಾರ್ ಜಿ.ಅನಿಲ್‍ಕುಮಾರ ಕೈಗೊಂಡರು. ಉಪತಹಶೀಲ್ದಾರ್ ಅನ್ನದಾನೇಶ್ವರ, ಕಂದಾಯ ಪರಿವೀಕ್ಷಕರಾದ ಶಿವಕುಮಾರ, ಹಾಲಸ್ವಾಮಿ, ಗುರುಬಸವರಾಜ ಸಹಾಯಕರಾಗಿದ್ದರು. ಪ.ಪಂ.ಮುಖ್ಯಾಧಿಕಾರಿ ಗಿರೀಶ್ ಇದ್ದರು. 

ಬಿಗಿ ಬಂದೋಬಸ್ತ್ : ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಮುಂದೆ ಬಿಗಿಯಾದ ಪೊಲೀಸ್ ಬಂದೋಬಸ್ತ್‍ಗಾಗಿ ಡಿವೈಎಸ್‍ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ದೊಡ್ಡಪ್ಪ, ಪಿಎಸ್‍ಐ ನಾಗಪ್ಪ ಹಾಗೂ ಸಿಬ್ಬಂದಿ ಬಂದೋಬಸ್ತ್ ಕಾರ್ಯದಲ್ಲಿ ತೊಡಗಿ ಶಾಂತಯುತವಾಗಿ ಚುನಾವಣೆ ನಡೆಯಲು ಸಹಕರಿಸಿದರು. 

ಚುನಾವಣೆ ನಂತರ ಶಾಸಕ ಎಸ್. ಭೀಮಾನಾಯ್ಕ, ಜಿ.ಪಂ. ಸದಸ್ಯ ಎಂ.ಎಂ.ಜೆ. ಹರ್ಷವರ್ಧನ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮುಖಂಡರಾದ ಮುಟುಗನಳ್ಳಿ ಕೊಟ್ರೇಶ್, ಸುಧಾಕರ ಪಾಟೀಲ, ಬೂದಿ ಶಿವು, ಕಾಸಲ ಪ್ರಕಾಶ್, ತೋಟದ ರಾಮಣ್ಣ, ಗಂಗನಹಳ್ಳಿ ರಾಜಶೇಖರ್, ಮೈದೂರು ರಾಜೀವ್ ಮತ್ತಿತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು. 

ಸತತ 5ನೇ ಬಾರಿ ಎಂ.ಎಂ.ಜೆ ಹರ್ಷವರ್ಧನ ಗುಂಪಿಗೆ ಜಯ

ಈ ಭಾಗದ  ಜನಪ್ರಿಯ ಮುಖಂಡ, ಜಿ.ಪಂ. ಸದಸ್ಯ ಎಂ.ಎಂ.ಜೆ. ಹರ್ಷವರ್ಧನ ಬಣಕ್ಕೆ ಸತತವಾಗಿ 5ನೇ ಬಾರಿಗೆ ಪಂಚಾಯಿತಿ ಚುಕ್ಕಾಣಿ ಸಿಕ್ಕಿದೆ. 1996 ರಿಂದ ಜನತಾ ದಳ, ಜೆಡಿಯು, ಬಿಜೆಪಿ, ಈಗ ಕಾಂಗ್ರೆಸ್ ಹೀಗೆ ವಿವಿಧ ಪಕ್ಷಗಳಿಂದ ಸ್ಪರ್ಧಿಸಿರುವ ಎಂ.ಎಂ.ಜೆ. ಹರ್ಷವರ್ಧನ ಬಣ ಮತ್ತೊಮ್ಮೆ ಕೊಟ್ಟೂರು ಪಟ್ಟಣ ಪಂಚಾಯಿತಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

 

error: Content is protected !!